ಮಂಗಳೂರು: ಮುತ್ತೂಟ್ ಫೈನಾನ್ಸ್ ದರೋಡೆ ಯತ್ನದ ಪ್ರಮುಖ ಸಂಚುಕೋರ ಅರೆಸ್ಟ್

ಮಂಗಳೂರು: ದೇರಳಕಟ್ಟೆಯಲ್ಲಿರುವ ಮುತ್ತೂಟ್ ಫೈನಾನ್ಸ್ ನಲ್ಲಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದೇರಳಕಟ್ಟೆ ಪರಿಸರದ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಗೆ ಮಾರ್ಚ್ 29 ರಂದು ಕಳ್ಳತನಕ್ಕೆ ಯತ್ನ ನಡೆದಿತ್ತು. ದೇರಳಕಟ್ಟೆ ಪರಿಸರದಲ್ಲಿರುವ ಹೆಚ್.ಎಮ್ ಕಾಂಪ್ಲೇಕ್ಸ್ ನ ಮುತ್ತೂಟ್ ಪೈನಾನ್ಸ್ ಕಚೇರಿಯ ಮುಂದಿನ ಬಾಗಿಲಿನ ಸೈರನ್ ಹೂಟರ್ ನ ಕೇಬಲ್ ಅನ್ನು ತುಂಡು ಮಾಡಿ ಪೈನಾನ್ಸ್ ಕಂಪನಿಯಲ್ಲಿ ಕಳವು ಮಾಡಲು ಕಳ್ಳರು ಯತ್ನಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ ನಂ: 42/2025 ಕಲಂ: 331[40], 305, 62, 13 BNS ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳ ಇಡುಕ್ಕಿ ಮೂಲದ ಮುರಳಿ ಮತ್ತು ಕಾಂಞಿಗಾಡ್ ನ ಆರ್ಷದ್ ಎಂಬಾತರು ದಸ್ತಗಿರಿಯಾಗಿರುತ್ತಾರೆ. ಈ ಪ್ರಕರಣದಲ್ಲಿ ಪತ್ತೆಯಾಗದೇ ತಲೆಮರೆಸಿಕೊಂಡಿದ್ದ ಹಾಗೂ ಈ ಹಿಂದೆ ನಡೆದ ರಾಜಧಾನಿ ಜುವೆಲ್ಲರಿ ಶಾಪ್ ಕಳ್ಳತನ ಹಾಗೂ ಕೇರಳ ರಾಜ್ಯದ ವಿಜಯ ಬ್ಯಾಂಕ್ ಕಳ್ಳತನದ ಮುಖ್ಯ ಸಂಚುಕೋರನಾದ ಅಬ್ದುಲ್ ಲತೀಫ್ @ ಲತೀಫ್ ಪ್ರಾಯ 47 ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಬ್ದುಲ್ ಲತೀಫ್ @ ಲತೀಫ್ ಎಂಬಾತನ ಮೇಲೆ ಈ ಹಿಂದೆ ಕೇರಳ ರಾಜ್ಯದ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಧಾನಿ ಜುವೆಲ್ಲರಿ ಶಾಪ್ ನ ಸುಮಾರು 20 ಕೆಜಿಯಷ್ಟು ಬಂಗಾರವನ್ನು ಕಳ್ಳತನ ಮಾಡಿದ ಪ್ರಕರಣ ಮತ್ತು ಕೇರಳ ರಾಜ್ಯದ ಚಂದೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಚೆರವತ್ತೂರು ವಿಜಯ ಬ್ಯಾಂಕ್ ನ ಸುಮಾರು 15.80 ಕೆಜಿಯಷ್ಟು ಬಂಗಾರ ಮತ್ತು 2.5 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.