ಕಿವಿ ಚುಚ್ಚಿಸುವಾಗ ಅನಸ್ತೇಷಿಯಾ ನೀಡಿದ್ದರಿಂದ ಮಗು ಸಾವು; ನ್ಯಾಯಕ್ಕಾಗಿ ಪೋಷಕರ ಆಕ್ರೋಶ

ಚಾಮರಾಜನಗರ : ಕಿವಿ ಚುಚ್ಚುವಾಗ ಮಗು ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಕಳೆದ 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತನಿಖೆಯ ವರದಿಯಲ್ಲಿ ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ ಮಗು ಮೃತಪಟ್ಟಿದೆ ಎಂಬುದು ವರದಿಯಾಗಿದೆ.
ಹಂಗಳ ಗ್ರಾಮದ ಆನಂದ್, ಮಾನಸ ದಂಪತಿ ಪುತ್ರ ಪ್ರಖ್ಯಾತ್ ಎಂಬ 5 ತಿಂಗಳ ಮಗು ಮೃತಪಟ್ಟಿದೆ. ಪೋಷಕರು ಕಿವಿ ಚುಚ್ಚಲು ತಮ್ಮ ಮಗುವನ್ನು ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆಗ ವೈದ್ಯರು ನೋವಾಗಬಾರದೆಂದು ಮಗುವಿನ 2 ಕಿವಿಗಳಿಗೆ ಅರವಳಿಕೆ ನೀಡಿದ್ದಾರೆ, ನಂತರ ಮಗುವಿನ ಬಾಯಲ್ಲಿ ನೊರೆ ಬಂದಿದ್ದು, ವೈದ್ಯರ ಸಲಹೆ ಮೇರೆಗೆ ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಧೃಡಪಡಿಸಿದ್ದರು. 6 ತಿಂಗಳ ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ಸಿಕ್ಕಿದ್ದು, ವರದಿಯಲ್ಲಿ ಮಗು ಅನಸ್ತೇಷಿಯಾದಿಂದ ಮೃತಪಟ್ಟಿರುವುದು ಧೃಡವಾಗಿದೆ. ಅನಸ್ತೇಷಿಯಾ ನೀಡಿದ್ದಕ್ಕೆ ಮಗುವಿನ ಶ್ವಾಸಕೋಶ ಹಾಗೂ ಮೆದುರಳಿನಲ್ಲಿ ರಕ್ತ ಹೆಪ್ಪು ಗಟ್ಟಿದ್ದು, ಮಗು ಮೃತಪಟ್ಟಿದೆ ಎಂಬುದು ಧೃಡವಾಗಿದೆ. ನಮ್ಮ ಮಗುವಿನ ಸಾವಿಗೆ ನ್ಯಾಯ ಬೇಕು ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಅನಸ್ತೇಷಿಯಾ ನೀಡಿದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
