ಭಾರತಕ್ಕೆ ಬರದೆ ಪಟ್ಟು ಹಿಡಿದ ಪಾಕಿಸ್ತಾನ-ಬಾಂಗ್ಲಾದೇಶಕ್ಕೆ ಅಹ್ವಾನ ನೀಡಿದ ಆಯೋಜಕರು

ಇದಕ್ಕೆ ಪೂರಕವಾಗಿ ಯುಎಇಯಲ್ಲಿ ನಡೆಯಬೇಕಿರುವ ಟಿ20 ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ, ಪಾಕ್ ವಿರುದ್ಧ ಆಡಬಾರದು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಈ ನಡುವೆ ಇದೇ ಆಗಸ್ಟ್ 29 ರಿಂದ ಬಿಹಾರದ ರಾಜ್ಗಿರ್ನಲ್ಲಿ ಆರಂಭವಾಗಲಿರುವ 2025 ರ ಪುರುಷರ ಹಾಕಿ ಏಷ್ಯಾಕಪ್ (Hockey Asia Cup 2025) ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ವಾಸ್ತವವಾಗಿ ಭಾರತ ಸರ್ಕಾರ ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡಲು ಸಿದ್ಧವಾಗಿದೆ. ಆದರೆ ಪಾಕಿಸ್ತಾನ ಹಾಕಿ ಫೆಡರೇಶನ್ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಇದರಿಂದಾಗಿ ಬದಲಿ ಆಯ್ಕೆಯನ್ನು ಹುಡುಕಲು ಶುರು ಮಾಡಿರುವ ಆಯೋಜಕರು ಪಾಕಿಸ್ತಾನದ ಬದಲಿಗೆ ಬಾಂಗ್ಲಾದೇಶ ತಂಡವನ್ನು ಆಡಲು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ಬಾಂಗ್ಲಾದೇಶ ತಂಡಕ್ಕೆ ಸಿಗುತ್ತ ಅವಕಾಶ?
ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡಲು ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಹೇಳಿದೆ. ಆದಾಗ್ಯೂ ಪಾಕ್ ತಂಡ ಭಾರತಕ್ಕೆ ಬರಲು ಬಯಸದಿದ್ದರೆ ಅದು ನಮ್ಮ ಸಮಸ್ಯೆಯಲ್ಲ ಎಂದು ಹಾಕಿ ಇಂಡಿಯಾ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನ ಬರದಿದ್ದರೆ ಬಾಂಗ್ಲಾದೇಶವನ್ನು ಭಾಗವಹಿಸಲು ಈಗಾಗಲೇ ಆಹ್ವಾನಿಸಲಾಗಿದೆ, ಆದರೆ ದೃಢೀಕರಣಕ್ಕಾಗಿ ನಾವು ಇನ್ನೂ ಎರಡು ದಿನ ಕಾಯಬೇಕಾಗುತ್ತದೆ. ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸ್ಪಷ್ಟವಾಗುತ್ತದೆ ಎಂದು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.
8 ತಂಡಗಳ ನಡುವೆ ಹಾಕಿ ಏಷ್ಯಾಕಪ್
2025 ರ ಹಾಕಿ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಭಾರತವು ಆತಿಥೇಯರಾಗಿ ಇದಕ್ಕೆ ಅರ್ಹತೆ ಪಡೆದಿದೆ. ಭಾರತವನ್ನು ಹೊರತುಪಡಿಸಿ, ಚೀನಾ, ಜಪಾನ್, ಮಲೇಷ್ಯಾ, ದಕ್ಷಿಣ ಕೊರಿಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಒಂದು ವೇಳೆ ಪಾಕಿಸ್ತಾನ ಟೂರ್ನಿಯಲ್ಲಿ ಭಾಗವಹಿಸಲು ಭಾರತಕ್ಕೆ ಬರದಿದ್ದರೆ, ಬಾಂಗ್ಲಾದೇಶ ತಂಡವೂ ಅವರ ಸ್ಥಾನದಲ್ಲಿ ಆಡಬಹುದು.
ಭಾರತ ತಂಡಕ್ಕೆ ಪ್ರಶಸ್ತಿ ಬರ
ಕಳೆದ 8 ವರ್ಷಗಳಿಂದ ಭಾರತೀಯ ಹಾಕಿ ತಂಡ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿಲ್ಲ. ತಂಡವು ಕೊನೆಯ ಬಾರಿಗೆ 2017 ರಲ್ಲಿ ಮಲೇಷ್ಯಾವನ್ನು 2-1 ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿತ್ತು. ಭಾರತ ಇದುವರೆಗೆ ಮೂರು ಬಾರಿ ಏಷ್ಯಾಕಪ್ ಟ್ರೋಫಿಯನ್ನು ಗೆದ್ದಿದೆ (2003, 2007, 2017). ಉಳಿದಂತೆ ದಕ್ಷಿಣ ಕೊರಿಯಾ ಐದು ಬಾರಿ (1994, 1999, 2009, 2013, 2022) ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದ್ದರೆ, ಪಾಕಿಸ್ತಾನ ಮೂರು ಬಾರಿ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದೆ.