ಜನ್ಮದಿನದಂದೇ ಮಗುವಿನ ಕೊಲೆ: ಇಂದೋರ್‌ನಲ್ಲಿ ತಾಯಿಯ ಭೀಕರ ಕೃತ್ಯ

ಮಧ್ಯಪ್ರದೇಶದ (Madhya Pradesh) ಇಂದೋರ್‌ನ (Indore) ತೇಜಾಜಿ ನಗರದಲ್ಲಿ (Tejaji Nagar) ಆಘಾತಕಾರಿ ಘಟನೆಯೊಂದು ನಡೆದಿದೆ. ಎರಡು ವರ್ಷದ ಬಾಲಕಿಯನ್ನು ಆಕೆಯ ಹುಟ್ಟುಹಬ್ಬದ ದಿನವೇ (Birthday) ತಾಯಿ (Mother) ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಮಗು ನಿರಂತರವಾಗಿ ಅಳುತ್ತಿದ್ದ ಕಾರಣಕ್ಕೆ ಕೋಪಗೊಂಡ ತಾಯಿ, ಕ್ರೋಧದಲ್ಲಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ.

ತೇಜಾಜಿ ನಗರ ಪೊಲೀಸ್ ಠಾಣೆಯ ವರದಿಗಳ ಪ್ರಕಾರ, ಬಾಲಕಿಯ ಹುಟ್ಟುಹಬ್ಬದ ಆಚರಣೆಗೆ ಸಿದ್ಧವಾಗಿದ್ದ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಮಗು ಜೋರಾಗಿ ಅಳುತ್ತಿದ್ದ ಕಾರಣ ತಾಯಿಗೆ ಕಿರಿಕಿರಿಯಾಗಿದ್ದು, ಆಕೆಯ ಕ್ರೋಧ ತಾಳಲಾರದ ಮಟ್ಟಕ್ಕೆ ತಲುಪಿತ್ತು. ಕೋಪದಿಂದಾಗಿ ಆಕೆ ಕೋಲೊಂದನ್ನು ತೆಗೆದುಕೊಂಡು ಮಗುವಿನ ತಲೆಗೆ ತೀವ್ರವಾಗಿ ಹೊಡೆದಿದ್ದಾಳೆ. ಈ ವೇಳೆ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ಸಂಜೆ ಮನೆಗೆ ಮರಳಿದ ಬಾಲಕಿಯ ತಂದೆ, ತನ್ನ ಮಗಳು ಜೀವವಿಲ್ಲದೆ ಬಿದ್ದಿರುವ ದೇಹವನ್ನು ಕಂಡು ಆಘಾತಕ್ಕೊಳಗಾದರು. ತಕ್ಷಣವೇ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ, ಪೊಲೀಸರಿಗೆ ತಿಳಿಸಿದರು. ತೇಜಾಜಿ ನಗರ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಧಾವಿಸಿ, ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿತು.
ಪ್ರಾಥಮಿಕ ತನಿಖೆಯಲ್ಲಿ ತಾಯಿಯೇ ಪ್ರಮುಖ ಆರೋಪಿಯಾಗಿದ್ದಾಳೆ ಎಂದು ಗುರುತಿಸಲಾಗಿದೆ. ಪೊಲೀಸರು ಕೊಲೆ ಆರೋಪದಡಿ ಆಕೆಯನ್ನು ಬಂಧಿಸಿದ್ದಾರೆ. ಠಾಣೆಯ ಉಸ್ತುವಾರಿ ಎಸ್.ಕೆ. ಸಿಂಗ್, ʼʼತಾಯಿಯನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ. ಕ್ಷಣಿಕ ಕೋಪದಿಂದ ಈ ದುರಂತ ಸಂಭವಿಸಿದೆ ಎಂದು ತೋರುತ್ತಿದೆ. ಆದರೆ ಮನೆಯಲ್ಲಿ ಜಗಳ ನಡೆಯುತ್ತಿತ್ತಾ ಅಥವಾ ತಾಯಿಯ ಮಾನಸಿಕ ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ಸಹ ತನಿಖೆ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.