ಮಂಡ್ಯದಲ್ಲಿ ದರೋಡೆಗಾಗಿ ಹೋಟೆಲ್ ಮಾಲೀಕನ ಭೀಕರ ಹತ್ಯೆ

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಇಡೀ ಊರೇ ಭಯ ಪಡುವ ರೀತಿಯಲ್ಲಿ ದರೋಡೆ ಮತ್ತು ಹ*ತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದಲ್ಲಿದ್ದ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ (60) ಅವರನ್ನು ಕಳ್ಳರ ಗ್ಯಾಂಗ್ ಒಂದು ನಿಷ್ಠುರವಾಗಿ ಕೊಲೆ ಮಾಡಿದೆ.

ಹೊಟೆಲ್ ಸಮೀಪದಲ್ಲಿದ್ದ ಮಹಾಲಕ್ಷ್ಮಿ ಜ್ಯುವೆಲರ್ಸ್ ಚಿನ್ನದಂಗಡಿಗೆ ದರೋಡೆ ನಡೆಸಲು ಬಂದಿದ್ದ ವೇಳೆ ಹೊಟೇಲ್ ಮಾಲೀಕ ನೋಡಿದ ಎಂಬ ಕಾರಣಕ್ಕೆ ಆತನನ್ನು ಕೊಂದು ಚಿನ್ನದಂಗಡಿ ದರೋಡೆ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಶನಿವಾರ ಬೆಳಗ್ಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಕಳ್ಳರ ಗುಂಪು ಮೊದಲು ಗ್ಯಾಸ್ ಕಟರ್ ಬಳಸಿ ಚಿನ್ನದ ಅಂಗಡಿಯ ಶಟರ್ ಕತ್ತರಿಸಿ ಅಂಗಡಿಗೆ ಪ್ರವೇಶ ಪಡೆದಿದ್ದಾರೆ. ಅಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ದೋಚಿ ಹೊರಡುವ ಪ್ರಯತ್ನ ನಡೆಸುತ್ತಿರುವಾಗಲೇ, ಪಕ್ಕದಲ್ಲಿದ್ದ ಹೋಟೆಲ್ ಮಾಲೀಕ ಮಾದಪ್ಪ ಶಬ್ದ ಕೇಳಿ ಹೊರಬಂದು ನೋಡಿದ್ದಾರೆ
ಕಳ್ಳರ ಚಟುವಟಿಕೆಗಳನ್ನು ನೇರವಾಗಿ ಕಂಡಿದ್ದರಿಂದ ಮಾದಪ್ಪ ಅವರನ್ನು ಕಳ್ಳರು ಹಿಡಿದುಕೊಂಡು, ಕತ್ತು ಹಿಸುಕುವ ಮೂಲಕ ಹತ್ಯೆ ಮಾಡಿದ ಶಂಕೆ ವ್ಯಕ್ತವಾಗಿದೆ. ಬಳಿಕ, ಅವರು ದೋಚಿದ ಚಿನ್ನಾಭರಣಗಳು ಹಾಗೂ ನಗದು ಹೊತ್ತುಕೊಂಡು ಪರಾರಿಯಾಗಿದ್ದಾರೆ. ಇದಲ್ಲದೆ, ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಡಿವಿಆರ್ ಯಂತ್ರವನ್ನೂ ಕಳ್ಳರು ಕೊಂಡೊಯ್ದಿದ್ದಾರೆ, ಇದರಿಂದ ತನಿಖೆ ನಡೆಸಲು ಸ್ವಲ್ಪ ಹಿನ್ನೆಡೆಯಾಗಿದೆ.
ಘಟನೆ ನಡೆದ ವಿಚಾರ ತಿಳಿದ ತಕ್ಷಣ ಮಂಡ್ಯ ಜಿಲ್ಲಾ ಎಸ್ಪಿ, ಕಿರುಗಾವಲು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಂಪೂರ್ಣ ಪ್ರದೇಶದಲ್ಲಿ ಕಾವಲು ಬಿಗಿಗೊಳಿಸಲಾಗಿದ್ದು, ಕಳ್ಳರನ್ನು ಪತ್ತೆಹಚ್ಚಲು ಖಾಕಿ ಪಡೆ ಬಲೆ ಬೀಸಿದೆ. ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿದಿದೆ. ಹೋಟೆಲ್ ಮಾಲೀಕರ ಹತ್ಯೆ ಮತ್ತು ಚಿನ್ನದ ಅಂಗಡಿಗೆ ನಡೆದ ಭೀಕರ ದರೋಡೆ ಗ್ರಾಮದಲ್ಲಿ ಆತಂಕವನ್ನು ಉಂಟುಮಾಡಿದೆ. ಬೆಳಗಿನ ಜಾವದಲ್ಲಿ ನಡೆದ ಈ ಘಟನೆ ಬಗ್ಗೆ ಗ್ರಾಮಸ್ಥರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.