ಅಜಯ್–ಸ್ವಪ್ನಾ ರಾವ್ ದಾಂಪತ್ಯ ದಲ್ಲಿ ವಿಚ್ಚೇದನ ಅರ್ಜಿ ವಿಚಾರದಲ್ಲಿ ಹೊಸ ಟ್ವಿಸ್ಟ್

ಕನ್ನಡದ ಖ್ಯಾತ ನಟ ಕೃಷ್ಣ ಅಜಯ್ ರಾವ್ (Ajay Rao) ಮತ್ತು ಅವರ ಪತ್ನಿ ಸ್ವಪ್ನಾ ರಾವ್ (Sapna Ajay Rao) ಪ್ರತ್ಯೇಕವಾಗುತ್ತಿದ್ದಾರೆ. ಸ್ವಪ್ನಾ ರಾವ್ ಅವರು ಅಜಯ್ ವಿರುದ್ಧ ದೂರು ದಾಖಲಿಸಿದ್ದಲ್ಲದೆ, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಈ ಬಗ್ಗೆ ಮಾಧ್ಯಮವೊಂದರ ಬಳಿ ಮಾತನಾಡಿದ್ದ ಅಜಯ್ ರಾವ್ ʼನಾವು ಡಿಗ್ನಿಫೈಯ್ಡ್ ಆಗಿಯೇ ಈ ಸಮಸ್ಯೆಯನ್ನ ಬಗೆಹರಿಸಿಕೊಳ್ಳುತ್ತೇವೆ. ನನ್ನ ಹೆಂಡತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದು ಗೊತ್ತಿಲ್ಲ..ಅವಳ ಬಳಿಯೇ ಕೇಳ್ತೇನೆʼ ಎಂದು ಹೇಳಿದ್ದರು. ಆದರೆ ಈ ಡಿವೋರ್ಸ್ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಸ್ವಪ್ನಾ ರಾವ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ಸ್ವಪ್ನಾ ರಾವ್ ಹೇಳಿದ್ದೇನು?
ಸ್ವಪ್ನಾ ರಾವ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. ʼತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ ಮತ್ತು ಅವಳ ಭವಿಷ್ಯ. ಈ ಕಾರಣಕ್ಕಾಗಿ ನಾನು ಪ್ರತಿದಿನ ಧೈರ್ಯವನ್ನ ಕೂಡಿಸಿ, ನನಗೆ ತೀವ್ರವಾಗಿ ಪರೀಕ್ಷಿಸುವ ಸವಾಲುಗಳನ್ನ ಎದುರಿಸುತ್ತಿದ್ದೇನೆ. ಪ್ರಿಯ ಸ್ನೇಹಿತರೇ ಮತ್ತು ಸಹೋದರರೇ, ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನ ಪುನರ್‌ನಿರ್ಮಿಸಿಕೊಳ್ಳಲು ಮತ್ತು ನಮ್ಮ ದಾಂಪತ್ಯ ಜೀವನವನ್ನ ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದು ಏನೆಂದರೆ, ಈ ವಿಷಯವು ನಮ್ಮ ವೈಯಕ್ತಿಕ, ಆಳವಾದ, ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ. ಕೃತಜ್ಞತೆಗಳೊಂದಿಗೆ ಸ್ವಪ್ನಾ ಅಜಯ್ ರಾವ್ʼ ಎಂದು ಬರೆದುಕೊಂಡಿದ್ದಾರೆ.
ಅಜಯ್ ರಾವ್ ಹೇಳಿದ್ದೇನು?
ಇನ್ನು ಅಜಯ್ ರಾವ್ ಕೂಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ʼಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನ ಗೌರವಿಸುವಂತೆ ಮತ್ತು ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನ ಹಂಚಿಕೊಳ್ಳುವುದನ್ನ, ಹರಡುವುದನ್ನ ದೂರವಿಡುವಂತೆ ತಮ್ಮನ್ನ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಪ್ರತಿಯೊಂದು ಕುಟುಂಬವೂ ಸವಾಲುಗಳನ್ನ ಎದುರಿಸುತ್ತದೆ. ಅವುಗಳನ್ನ ಖಾಸಗಿಯಾಗಿ ಉಳಿಯುವಂತೆ ಸಹಕರಿಸಿʼ ಎಂದು ಬರೆದುಕೊಂಡಿದ್ದಾರೆ.