ಕುಸ್ತಿಪಟು ಸುಶೀಲ್ ಕುಮಾರ್ಗೆ ಸುಪ್ರೀಂ ಕೋರ್ಟ್ ಶಾಕ್: ಜಾಮೀನು ರದ್ದು, ಒಂದು ವಾರದಲ್ಲಿ ಶರಣಾಗಲು ಆದೇಶ

ನವದೆಹಲಿ: ಭಾರತದ ದಿಗ್ಗಜ ಕುಸ್ತಿಪಟು ಸುಶೀಲ್ ಕುಮಾರ್ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಕೊಲೆ ಪ್ರಕರಣದಲ್ಲಿ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದ ಸುಶೀಲ್ ಕುಮಾರ್ಗೆ ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿ ಶಾಕ್ ಕೊಟ್ಟಿದೆ.

ಕುಸ್ತಿಪಟು ಸಾಗರ್ಧನಕ ಕೊಲೆ ಪ್ರಕರಣದಲ್ಲಿ ಒಲಿಂಪಿಕ್ಸ್ ಕುಸ್ತಿ ಪದಕ ವಿಜೇತ ಸುಶೀಲ್ ಕುಮಾರ್ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಇದೀಗ ಸೆಲಿಬ್ರಿಟಿ ಕುಸ್ತಿಪಟು ಇನ್ನೊಂದು ವಾರದೊಳಗಾಗಿ ಪೊಲೀಸರಿಗೆ ಶರಣಾಗುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
2021ರ ಮೇ ತಿಂಗಳಲ್ಲಿ ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ನಡೆದಿತ್ತು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿತ್ತು.
ಆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಬಂಧನವಾಗಿತ್ತು. ಅಂದಿನಿಂದ ಜೈಲಿನಲ್ಲಿದ್ದ ಸುಶೀಲ್ಗೆ ಕಳೆದ ಮಾ.4ರಂದು ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು.
ಇದನ್ನು ಪ್ರಶ್ನಿಸಿ ಸಾಗರ್ ತಂದೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ, ಶರಣಾಗುವಂತೆ ತಿಳಿಸಿದೆ.
ಭಾರತದ ದಿಗ್ಗಜ ಕುಸ್ತಿಪಟುವಾಗಿ ಗುರುತಿಸಿಕೊಂಡಿದ್ದ ಸುಶೀಲ್ ಕುಮಾರ್ 2012ರ ಒಲಿಂಪಿಕ್ಸ್ನಲ್ಲಿ ಬೆಳ್ಳಿ, 2008ರ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದಾರೆ.
