ಮೂಡೆ ತಯಾರಿಸುವುದೇ ಬದುಕು: ಕೆಂಜಾರಿನ ರಮೇಶ್ ಮತ್ತು ಯಶೋಧಾ ಕುಟುಂಬದ ಕಥೆ

ಬಜಪೆ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪೂಜೆ, ಪ್ರಾರ್ಥನೆ, ಅರ್ಘ್ಯ ಪ್ರದಾನ, ಲೀಲೋತ್ಸವಗಳ ನಡುವೆ ಮಹತ್ವ ಪಡೆಯುವ ಮತ್ತೂಂದು ವಿಶೇಷವೆಂದರೆ ಮೂಡೆ! ಮುಂಡೇವು (ಕೇದಗೆ) ಗಿಡದ ಎಲೆಗಳನ್ನು ಸಂಸ್ಕರಿಸಿ ಕಟ್ಟುವ ಮೂಡೆಯಲ್ಲಿ ಮಾಡಿದ ತಿನಿಸಿಗೆ ಅಂದು ಅಪಾರ ಗೌರವ. ಮೂಡೆ ಬೇಯಿಸಿದರೆ ಮಾತ್ರ ಅಷ್ಟಮಿ ಆಚರಿಸಿದ ಹಾಗೆ ಎಂದು ನಂಬಿದವರೂ ಇದ್ದಾರೆ.ಹೀಗಾಗಿಯೇ ಅಷ್ಟಮಿ ಬಂದಾಗ ಮೂಡೆಗೆ ಎಲ್ಲಿಲ್ಲದ ಬೇಡಿಕೆ.

ಮಾರುಕಟ್ಟೆಯಲ್ಲಿ ಮೂಡೆ ಸುಲಭದಲ್ಲಿ ಸಿಗುತ್ತದೆ. ಆದರೆ, ಮೂಡೆ ಮಾಡುವುದು ಅಷ್ಟು ಸುಲಭವೇನಲ್ಲ. ಒಂದು ವಾರದ ಹಿಂದೆಯೇ ಮುಂಡೇವು ಎಲೆಗಳನ್ನು ಹುಡುಕಿ ತರಬೇಕು. ಅದರ ಬೆನ್ನ ಹಿಂದೆ ಇದ್ದ ಮುಳ್ಳು ತೆಗೆಯಬೇಕು. ಮಡಲಿನ ಬೆಂಕಿಯಲ್ಲಿ ಅದನ್ನು ಮೆದುಗೊಳಿಸಬೇಕು. ಬಳಿಕ ಒಂದೇ ಗಾತ್ರದಲ್ಲಿ ಅದನ್ನು ಸುರುಳಿ ಸುತ್ತಬೇಕು. ನಂತರ ಅದನ್ನು ಮೂಡೆ ರೂಪದಲ್ಲಿ (ಚಂದ್ರಿಕೆ) ಕಟ್ಟಬೇಕು.
ಹಾಗೆ ಕಟ್ಟಿದಲ್ಲಿಗೆ ಕೆಲಸ ಮುಗಿಯುವುದಿಲ್ಲ. ಅದು ಮಾರುಕಟ್ಟೆಗೆ ಹೋಗುವವರೆಗೆ, ಮಾರಾಟ ಆಗುವವರೆಗೆ ಪಂಗಸ್ (ಬೂಸ್ಟ್) ಬರದಂತೆ ಎಚ್ಚರಿಕೆ ವಹಿಸಬೇಕು.
ಮೂಡೆ ಕಟ್ಟುವುದು ಕಲೆ: ಮುಂಡೇವು ಎಲೆಯನ್ನು ತಂದು ಮೂಡೆ ಕಟ್ಟುವವರೆಗಿನದ್ದು ಒಂದು ಕಲಾ ಕೌಶಲ. ಕೆಲವರಿಗೆ ಸುರುಳಿ ಸುತ್ತಿದ ಎಲೆಯನ್ನು ಮೂಡೆಯಾಗಿ ಕಟ್ಟಲು ಗೊತ್ತಿರಬಹುದು. ಆದರೆ, ಆರಂಭದಿಂದ ಕೊನೆಯವರೆಗೆ ಅದರ ಪ್ರಕ್ರಿಯೆ ಗೊತ್ತಿರುವವರು ತುಂಬಾ ಕಡಿಮೆ. ಅವರೇ ಅಷ್ಟಮಿಯ ಮೂಡೆಯ ಹಿಂದಿನ ನಿಜ ಸಾಹಸಿಗಳು.
ಅಂಥವರಲ್ಲಿ, ಕೆಂಜಾರಿನ ಅಡ್ಮ ಗುಡ್ಡೆಯ ರಮೇಶ್ ಪೂಜಾರಿ ಹಾಗೂ ಅವರ ಪತ್ನಿ ಯಶೋಧ ಕೂಡಾ ಸೇರಿದ್ದಾರೆ. ಕಳೆದ 25 ವರ್ಷಗಳಿಂದ ಮೂಡೆ ತಯಾರಿಸುವ ಕಾಯಕದಲ್ಲಿ ತೊಡಗಿರುವ ಇವರಿಗೆ ಅಷ್ಟಮಿ ದಿನ ಹತ್ತಿರ ಬಂದಂತೆಲ್ಲ ಭಾರಿ ಬೇಡಿಕೆ. ಅವರು ಈಗ ರಾತ್ರಿ-ಹಗಲು ಮೂಡೆಯ ಕೆಲಸದಲ್ಲೇ ತಲ್ಲೀನರಾಗಿದ್ದಾರೆ. ಕರಂಬಾರು ಸರಕಾರಿ ಶಾಲೆಯ ಹಿಂಬದಿಯಲ್ಲಿಯೇ ಅವರ ಮನೆ. ಆ ಭಾಗಕ್ಕೆ ಯಾರಾದರೂ ಬಂದು ರಮೇಶ್ ಅಥವಾ ಯಶೋಧಾ ಅವರ ಮನೆ ಎಲ್ಲಿ ಎಂದು ಕೇಳಿದರೆ “ನಿಮಗೆ ಮೂಡೆ ಬೇಕಿತ್ತಾ’ ಎಂದು ಕೇಳಿಯೇ ಮನೆ ತೋರಿಸುತ್ತಾರೆ!
ಸಾಮಾನ್ಯವಾಗಿ ಮುಂಡೇವು ಬೆಳೆಯುವುದು ಮಳೆ ಮತ್ತು ನೆರೆ ನೀರಿನಿಂದ ಆವೃತವಾಗುವ ಜಾಗದಲ್ಲಿ. ಅದರ ಸುತ್ತ ಕೆಸರು ತುಂಬುವುದರಿಂದ ಅಲ್ಲಿಗೆ ಹೋಗಿ ಎಲೆ ತರುವುದೇ ಸವಾಲು ಎನ್ನುತ್ತಾರೆ ರಮೇಶ್ ಪೂಜಾರಿ. ಇನ್ನು ರೈಲ್ವೇ ಹಾಗೂ ಕೋಸ್ಟ್ ಗಾರ್ಡ್ ಕಾಮಗಾರಿಯಿಂದ ಮುಂಡೇವು ಬಲ್ಲೆಗಳು ಕಡಿಮೆಯಾಗಿವೆ. ಆ ಪ್ರದೇಶವನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಹೀಗಾಗಿ ಎಲೆ ತರಲು ದೂರ ಹೋಗಬೇಕಾಗುತ್ತದೆ ಎನ್ನುತ್ತಾರೆ. ಮುಂಡೇವು ಎಲೆ ಸಿಕ್ಕರೆ ಎಷ್ಟು ಮೂಡೆ ಬೇಕಾದರೂ ಕಟ್ಟಬಹುದು. ಅದನ್ನು ಹುಡುಕಿ, ತಂದು, ಸಿದ್ಧಪಡಿಸುವುದೇ ದೊಡ್ಡ ಕೆಲಸ ಎನ್ನುತ್ತಾರೆ ಅವರು.ಕಳೆದ ಬಾರಿ 100 ರೂ.ಗೆ ಐದು ಮೂಡೆ ಮಾರಿದ್ದೆವು, ಈ ಬಾರಿ 100ಕ್ಕೆ ದೊಡ್ಡ ಗಾತ್ರದ ಮೂರು, ಸಣ್ಣದಾದರೆ 100ಕ್ಕೆ ಆರು ನಮ್ಮ ದರ ಎನ್ನುತ್ತಾರೆ ರಮೇಶ್. ನಾಲ್ಕು ವರ್ಷಗಳಿಂದ ಮುಂಡೇವು ಎಲೆ ಕೊರತೆಯಿಂದಾಗಿ ಈಗ ವಾರಕ್ಕೆ ಎರಡು ಬಾರಿ ಮಾತ್ರ ಮಂಗಳೂರು ಮಾರುಕಟ್ಟೆಗೆ ಮೂಡೆ ನೀಡಲು ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುಟುಂಬಕ್ಕೆ ಮೂಡೆಯೇ ಬದುಕು!
ನಿಜವೆಂದರೆ, ರಮೇಶ್ ಮತ್ತು ಯಶೋದಾ ಅವರು ಕೇವಲ ಅಷ್ಟಮಿ ಬಂದಾಗ ಮೂಡೆ ಕಟ್ಟುವುದಲ್ಲ. ಅವರಿಗೆ ವರ್ಷವಿಡೀ ಇದೇ ಪ್ರಮುಖ ಕಾಯಕ. ವರ್ಷವಿಡೀ ಇವರು ಮೂಡೆ ಕಟ್ಟಿ ಹೋಟೆಲ್ ಗಳಿಗೆ ನೀಡುತ್ತಾ ಬಂದಿದೆ. ರಮೇಶ್ ಅವರು ಮೂಡೆಯನ್ನು ತೆಗೆದುಕೊಂಡು ಹೋಗಿ ಮಂಗಳೂರಿನ ರಥಬೀದಿಯಲ್ಲಿ ಮಾರಾಟ ಮಾಡುತ್ತಾರೆ.
ಅಷ್ಟಮಿ ಸಂದರ್ಭದಲ್ಲಿ 500ರಷ್ಟು ಮೂಡೆಗಳನ್ನು ಅಲ್ಲಿಯೇ ಕಟ್ಟಿ ಮಾರಿದ್ದಾರಂತೆ. ಅಂದ ಹಾಗೆ, ಈ ಮೂಡೆ ವೃತ್ತಿಯ ತಂತು ಬಂದಿರುವುದು ರಮೇಶರ ಪತ್ನಿ ಯಶೋದಾ ಕಡೆಯಿಂದ. ರಮೇಶ್ ಅವರು ಮೊದಲು ಮುಂಬಯಿಯಲ್ಲಿ ಕೆಲಸಕ್ಕೆ ಇದ್ದರು. ಊರಿಗೆ ಬಂದು ಯಶೋದಾ ಅವರನ್ನು ಮದುವೆಯಾಗಿ ಕೆಂಜಾರಿನಲ್ಲಿ ವಾಸವಾಗಿದ್ದಾರೆ. ಯಶೋದಾ ಅವರನ್ನು ಮದುವೆಯಾದ ಬಳಿಕವೇ ಈ ಕೆಲಸ ತಿಳಿದದ್ದು. ಯಶೋದಾ ಅವರ ತಾಯಿ ಮೂಡೆ ಮಾಡುತ್ತಿದ್ದರು. ಮಗಳಿಗೂ ಕಲಿಸಿದ್ದರು. ಯಶೋದಾ ಅವರು ಕಟ್ಟಿದ ಮೂಡೆಗಳನ್ನು ಮಾರುತ್ತಿದ್ದ ರಮೇಶ್ ಕೊನೆಗೆ ಇದನ್ನೇ ಪೂರ್ಣ ಪ್ರಮಾಣದ ವೃತ್ತಿ ಮಾಡಿಕೊಂಡರು. ಹೀಗಾಗಿ ಅವರಿಗೆ ಮೂಡೆಯೇ ಬದುಕಾಗಿದೆ! ಬೆಂಗಳೂರು ಮತ್ತು ಉಡುಪಿಗೂ ಇವರ ಮೂಡೆಗಳನ್ನು ಒಯ್ಯುತ್ತಾರಂತೆ. ಇವರು ಕಟ್ಟಿದ ಮೂಡೆ ಎರಡು ಬಾರಿ ಉಪಯೋಗಿಸುವಷ್ಟು ಗಟ್ಟಿ ಎನ್ನುವ ಮಾತಿದೆಯಂತೆ.