ಇಂಗು ಗುಂಡಿಯಲ್ಲಿ ಪತ್ತೆಯಾಯಿತು ಅಸ್ಥಿಪಂಜರ- ತಮ್ಮ ಬಾಯಿ ಬಿಟ್ಟ ರಹಸ್ಯವೇನು?

ಹಾಸನ : ತಂದೆಯೇ ತನ್ನ ಮಗನನ್ನು ಕೊಲೆ ಮಾಡಿ ಮನೆಯ ಹಿಂಭಾಗದಲ್ಲಿರುವ ಇಂಗುಗುಂಡಿಯಲ್ಲಿ ಹೂತುಹಾಕಿರುವ ಆಘಾತಕಾರಿ ಘಟನೆ ಆಲೂರು ತಾಲೂಕಿನ ಕುಂದೂರು ಹೋಬಳಿಯ ಸಂತೆ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಎರಡು ವರ್ಷಗಳ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಕೊಲೆಯಾದವರನ್ನು ರಘು (32) ಎಂದು ಗುರುತಿಸಲಾಗಿದೆ. ಮೃತರ ತಂದೆ ಗಂಗಾಧರ(53) ಕೊಲೆ ಆರೋಪಿ ಎನ್ನಲಾಗಿದೆ. ಗಂಗಾಧರ ಕೆಲದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆ ಸಂದರ್ಭ ರಘು ಕೊಲೆ ರಹಸ್ಯ ಬಯಲಾಗಿದೆ.
ಘಟನೆ ವಿವರ: ಆಲೂರು ತಾಲೂಕಿನ ಸಂತೆಬಸವನಹಳ್ಳಿ ಗ್ರಾಮದ ನಿವಾಸಿಯಾಗಿರುವ ಗಂಗಾಧರ ಕೆಲದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಗಂಗಾಧರನ ಮರಣೋತ್ತರ ಕಾರ್ಯಕ್ರಮಗಳಲ್ಲಿ ಹಿರಿಯ ಪುತ್ರ ರಘು ಕಾಣಿಸದಿದ್ದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಆತನ ತಮ್ಮ ರೂಪೇಶ್ ನಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ರಘುವಿಗೆ ಕರೆ ಮಾಡಿ ತಕ್ಷಣ ಕರೆಸುವಂತೆ ಒತ್ತಾಯಿಸಿದ್ದಾರೆ. ಬುದ್ಧಿಮಾಂದ್ಯತೆ ಸಮಸ್ಯೆಯಿರುವ ರೂಪೇಶ್, ಅಣ್ಣನ ಕೊಲೆಯ ರಹಸ್ಯವನ್ನು ಈ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಾಧರನ ಪತ್ನಿ ಈಗಾಗಲೇ ಮೃತಪಟ್ಟಿದ್ದಾರೆ. ವಿವಾಹವಾಗಿ ವಿಚ್ಛೇದನ ಪಡೆದಿದ್ದ ಹಿರಿಯ ಪುತ್ರ ರಘು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತ ಜೂಜಾಟದ ದುಶ್ಚಟಕ್ಕೆ ಒಳಗಾಗಿದ್ದನೆನ್ನಲಾಗಿದೆ. ರಘು ಆಗಾಗ ಊರಿಗೆ ಬಂದು ತಂದೆಯೊಂದಿಗೆ ಹಣಕ್ಕಾಗಿ ಪೀಡಿಸುತ್ತಿದ್ದನೆನ್ನಲಾಗಿದೆ. ಅದೇರೀತಿ ಎರಡು ವರ್ಷಗಳ ಹಿಂದೆ ತಂದೆ-ಮಗನ ಮಧ್ಯೆ ನಡೆದ ಜಗಳ ತಾರಕಕ್ಕೇರಿದಾಗ ತಂದೆ ಗಂಗಾಧರ ಕೈಯಲ್ಲಿ ರಘು ಕೊಲೆಯಾಗಿದ್ದಾನೆನ್ನಲಾಗಿದೆ. ಬಳಿಕ ರಘುವಿನ ಮೃತದೇಹವನ್ನು ಗಂಗಾಧರ ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ರೂಪೇಶ್ ಎದುರಲ್ಲೇ ಹೂತು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ರಘುವಿನ ಸೋದರಮಾವ ಪಾಲಾಕ್ಷ ಎಂಬವರು ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಸ್ಥಿಪಂಜರ ಹೊರತೆಗೆದ ಪೊಲೀಸರು :
ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ ಹಾಗೂ ಹಾಸನ ಡಿವೈಎಸ್ಪಿ ಪ್ರಮೋದ್ ಮಾರ್ಗದರ್ಶನದಲ್ಲಿ, ಆಲೂರು ಎಸ್ಸೈ ಮೋಹನ್ ರೆಡ್ಡಿ ಮತ್ತು ಎಎಸ್ಸೈ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಜೆಸಿಬಿ ಸಹಾಯದಿಂದ ಇಂಗುಗುಂಡಿಯನ್ನು ಅಗೆದಾಗ ರಘುವಿನ ಮೃತದೇಹದ ಅವಶೇಷಗಳು ಪತ್ತೆಯಾಗಿವೆ.. ಅವುಗಳನ್ನು ಹೆಚ್ಚಿನ ತನಿಖೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉಪ ತಹಶೀಲ್ದಾರ್ ರಮೇಶ್, ರಾಜಸ್ವ ನಿರೀಕ್ಷಕ ಸಂತೋಷ್ ಎಎಸ್ಸೈ ಅನಂತ್, ದೇವರಾಜು, ಸಂಗಮ್, ಪುನೀತ್, ಪೂರ್ಣೇಂದ್ರ, ಫಾರೂಕ್, ನಂದೀಶ್, ಮೊದಲಾದವರು ಭಾಗವಹಿಸಿದರು.
ಈ ಘಟನೆಯು ಗ್ರಾಮದಲ್ಲಿ ಆತಂಕ ಉಂಟುಮಾಡಿದ್ದು, ಸ್ಥಳೀಯರು ಕಾರ್ಯಾಚರಣೆಯನ್ನು ನೋಡಲು ಗುಂಪುಗೂಡಿದ್ದರು.