ಅಶ್ರಫ್ ಗುಂಪು ಹತ್ಯೆ – ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ನಾಯಕನ ಪಾತ್ರ ಬಯಲು

ಮಂಗಳೂರು: ಮಾನಸಿಕ ಅಸ್ವಸ್ಥ ಅಶ್ರಫ್ ಗುಂಪು ಹತ್ಯೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ನಾಯಕ ರವೀಂದ್ರ ನಾಯಕ್ ಪಾತ್ರ ಮತ್ತೆ ಬಯಲಾಗಿದೆ; ಈ ಹಿಂದೆ ಅದನ್ನು ಮುಚ್ಚಿಹಾಕಲು ಮಾಡಿದ ಪೊಲೀಸರ ಯತ್ನವೂ ಈ ಮೂಲಕ ಬಯಲಾಗಿದೆ.

ನಗರದ ಕುಡುಪುವಿನಲ್ಲಿ ಏಪ್ರಿಲ್ ತಿಂಗಳ 27 ರಂದು ನಡೆದ 38 ವರ್ಷದ ಕೇರಳದ ಮಾನಸಿಕ ಅಸ್ವಸ್ಥ ವ್ಯಕ್ತಿ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್‌ಶೀಟ್‌ನಿಂದ ಹೊಸ ವಿವರಗಳು ಬಯಲಾಗಿವೆ.
ಈ ವಿವರಗಳು, ಜನರ ಗುಂಪನ್ನು ಪ್ರಚೋದಿಸಿದ ಆರೋಪ ಹೊತ್ತಿರುವ ರವೀಂದ್ರ ನಾಯಕ್ ಅವರ ಪಾತ್ರದ ಮೇಲೆ ಮತ್ತೆ ಬೆಳಕು ಚೆಲ್ಲಿವೆ. ರವೀಂದ್ರ ನಾಯಕ್ ಬಿಜೆಪಿಯ ಮಾಜಿ ಕಾರ್ಪೊರೇಟರ್ ಸಂಗೀತ ನಾಯಕ್ ಅವರ ಪತಿ.
ಪ್ರಕರಣದ ಎಲ್ಲಾ 21 ಆರೋಪಿಗಳು ರವೀಂದ್ರ ನಾಯಕ್ ಪಾತ್ರದ ಬಗ್ಗೆ ಹೇಳಿಕೆ ನೀಡಿದ್ದರೂ, ಆರಂಭದಲ್ಲಿ ಅವರ ಪಾತ್ರವಿಲ್ಲ ಎಂದು ಹೇಳಿದ್ದ ಮಂಗಳೂರು ಪೊಲೀಸರ ನಡೆಯ ಬಗ್ಗೆ ಇದೀಗ ಗಂಭೀರ ಪ್ರಶ್ನೆಗಳು ಎದ್ದಿವೆ.
ಕುಡುಪುವಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಅಶ್ರಫ್ “ಪಾಕಿಸ್ತಾನ್ ಝಿಂದಾಬಾದ್” ಎಂದು ಕೂಗಿದ್ದರಿಂದ ಆತನನ್ನು ಥಳಿಸಿ ಕೊಲ್ಲಲಾಯಿತು ಎಂದು ಕೆಲವರು ಆರೋಪಿಸಿದ್ದರು. ಆದರೆ, ಅಶ್ರಫ್ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಮತ್ತು ಸಣ್ಣ ಜಗಳದ ನಂತರ ಆತನನ್ನು ಅಲ್ಲಿದ್ದ ಗುಂಪು ಗುರಿಯಾಗಿಸಿ ಅಮಾನುಷವಾಗಿ ಹಲ್ಲೆ ನಡೆಸಿತ್ತು ಎಂದು ಗ್ರಾಮಸ್ಥರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ವಾದಿಸಿದ್ದವು.
►ಪೊಲೀಸ್ ಕಮಿಷನರ್ ಅಗ್ರವಾಲ್ ಹೇಳಿಕೆ ಮತ್ತು ಅದಕ್ಕೆ ತದ್ವಿರುದ್ಧವಾಗಿರುವ ಚಾರ್ಜ್‌ಶೀಟ್ ಸಾಕ್ಷ್ಯ
ಏಪ್ರಿಲ್ 29 ರಂದು ಆರೋಪಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಂಡ ಕೇವಲ ಒಂದು ದಿನದ ನಂತರ, ಅಂದಿನ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, “ರವೀಂದ್ರ ನಾಯಕ್ ವಿರುದ್ಧ ಯಾರೂ ದೂರು ನೀಡಿಲ್ಲ” ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ,ಚಾರ್ಜ್‌ಶೀಟ್ ಪ್ರಕಾರ, ಎಲ್ಲಾ ಆರೋಪಿಗಳು ವಿಚಾರಣೆಯ ಸಮಯದಲ್ಲೇ ಗುಂಪು ಹತ್ಯೆಯಲ್ಲಿ ರವೀಂದ್ರ ನಾಯಕ್ ಪಾತ್ರದ ಬಗ್ಗೆ ವಿವರವಾಗಿ ಮಾತನಾಡಿದ್ದರು. ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿ ವಿವರಗಳಿವೆ.
ಈಗ ನ್ಯಾಯಾಲಯದ ದಾಖಲೆಗಳ ಭಾಗವಾಗಿರುವ ಈ ಹೇಳಿಕೆಗಳು ಒಂದೇ ರೀತಿಯ ಚಿತ್ರಣವನ್ನು ನೀಡುತ್ತವೆ.
ಹಲ್ಲೆ ನಡೆಯುವಾಗ ರವೀಂದ್ರ ನಾಯಕ್ ಸ್ಥಳದಲ್ಲಿದ್ದರು, ಹಲ್ಲೆಯನ್ನು ನಿಲ್ಲಿಸಲು ಯತ್ನಿಸಿದ ಕೆಲವು ಆಟಗಾರರನ್ನು ಅವರು ತಡೆದರು ಮತ್ತು “ಪಾಕಿಸ್ತಾನ ಘೋಷಣೆ ಕೂಗಿದವನನ್ನು ಇಲ್ಲಿಯೇ ಹೊಡೆದು ಕೊಂದು ಹಾಕಿ” ಎಂದು ಜನರನ್ನು ಪ್ರಚೋದಿಸಿದ್ದರು ಎಂದು ಆರೋಪಿಸಲಾಗಿದೆ.
►ಆರೋಪಿಗಳು ಪೊಲೀಸರಿಗೆ ಹೇಳಿದ್ದೇನು?
ಹಲವಾರು ಆರೋಪಿಗಳ ಪ್ರಕಾರ, ಅಶ್ರಫ್ ಮೇಲೆ ಮೊದಲ ಬಾರಿಗೆ ಹಲ್ಲೆ ನಡೆದಾಗ, ಕೊಂಗೂರು ಕ್ರಿಕೆಟ್ ತಂಡದ ದೀಪಕ್ ಸೇರಿದಂತೆ ಕೆಲವರು ಹಲ್ಲೆಯನ್ನು ನಿಲ್ಲಿಸಲು ಮನವಿ ಮಾಡಿದ್ದರು. “ಆತನನ್ನು ನೋಡುವಾಗ ಹುಚ್ಚನಂತೆ ಕಾಣಿಸುತ್ತಿದ್ದಾನೆ. ಆತನಿಗೆ ಈಗಾಗಲೇ ಸಾಕಷ್ಟು ಪೆಟ್ಟು ಬಿದ್ದಿದೆ. ಅವನನ್ನು ಬಿಡಿ… ಸದ್ರಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ. ಏನಾದರೂ ಹೆಚ್ಚು ಕಮ್ಮಿಯಾದರೆ ನಮಗೆ ಎಲ್ಲರಿಗೂ ತೊಂದರೆಯಾಗುತ್ತದೆ” ಎಂದು ಹೇಳಿ ದೀಪಕ್ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿರುವುದಾಗಿ ಆರೋಪಿಗಳ ಹೇಳಿಕೆಗಳಲ್ಲಿ ಕಾಣಸಿಗುತ್ತದೆ.
ಆದರೆ, ಹೇಳಿಕೆಗಳ ಪ್ರಕಾರ, “ರವಿ ಅಣ್ಣ” ಎಂದು ಸ್ಥಳೀಯರಿಂದ ಕರೆಯಲ್ಪಡುವ ರವೀಂದ್ರ ನಾಯಕ್, ಮಂಜುನಾಥ್ ಮತ್ತು ದೇವದಾಸ್ ಅವರ ಮಾತನ್ನು ತಳ್ಳಿಹಾಕಿದರು.
“ನೀವು ಇಲ್ಲಿಂದ ಸುಮ್ಮನೆ ಹೋಗಿ… ನಮ್ಮ ಏರಿಯಾಕ್ಕೆ ಬಂದು ಪಾಕಿಸ್ತಾನ್, ಪಾಕಿಸ್ತಾನ್ ಎಂದು ಬೊಬ್ಬೆ ಹೊಡೆಯುತ್ತಿದ್ದವನನ್ನು ಸುಮ್ಮನೆ ಬಿಟ್ಟರೆ, ನಾಳೆ ಎಲ್ಲರೂ ಬಂದು ಇದೇ ರೀತಿ ಮಾಡುತ್ತಾರೆ. ಇವನನ್ನು ನಾವು ಸರಿಯಾಗಿ ವಿಚಾರಿಸಿ ನಂತರ ಪೊಲೀಸು ಸ್ಟೇಷನಿಗೆ ಮಾಹಿತಿ ನೀಡಿ… ನಮಗೆ ಯಾರಿಗೂ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ,” ಎಂದು ರವೀಂದ್ರ ನಾಯಕ್ ಗುಂಪಿಗೆ ಹೇಳಿದ್ದರು ಎಂದು ಆರೋಪಿಗಳು ನೀಡಿರುವ ಹೇಳಿಕೆಗಳಲ್ಲಿ ದಾಖಲಾಗಿದೆ.
ನಾಯಕ್ ಅವರ ಈ ಮಾತುಗಳು ಗುಂಪಿಗೆ ಮತ್ತಷ್ಟು ಧೈರ್ಯ ತುಂಬಿದವು ಎಂದು ಹಲವು ಆರೋಪಿಗಳು ಹೇಳಿದ್ದಾರೆ. ಕಿಶೋರ್ ಕುಮಾರ್ ಮತ್ತು ಅನಿಲ್ ಕುಡುಪು ಸೇರಿದಂತೆ ಇತರರು ಅವರನ್ನು ಬೆಂಬಲಿಸಿ, “ಈ ಸೂ… ಮಗನನ್ನು ಬಿಡಬೇಡಿ. ಇಲ್ಲಿಯೇ ಹೊಡೆದು ಕೊಂದು ಹಾಕಿ” ಎಂದು ಕೂಗಿದರು ಎನ್ನಲಾಗಿದೆ.
►ಪ್ರಕರಣ ಮುಚ್ಚಿಹಾಕುವ ಯತ್ನ
ಹಲ್ಲೆಯ ನಂತರ, ರವೀಂದ್ರ ನಾಯಕ್ ಮತ್ತು ಇನ್ನೋರ್ವ ಆರೋಪಿ ದೇವದಾಸ್ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಎನ್ನಲಾಗಿದೆ.
ಆಗಿದ್ದು ಆಗಿದೆ. ಈಗ ನಾವೆಲ್ಲಾ ಏನೂ ಗೊತ್ತಿಲ್ಲದ್ದಂತೆ ಇರಬೇಕು. ನಡೆದ ವಿಷಯವನ್ನು ಯಾರಲ್ಲಿಯೂ ಹೇಳಬಾರದು. ಪೊಲೀಸರು ಬಂದು ಕೇಳಿದರೆ ಏನೂ ಗೊತ್ತಿಲ್ಲ ಎಂದು ಹೇಳಬೇಕು. ಯಾರಾದರೂ ಒಬ್ಬನು ಬಾಯಿಬಿಟ್ಟರೆ ಎಲ್ಲರಿಗೂ ತೊಂದರೆಯಾಗುತ್ತದೆ. ಪೊಲೀಸರು ಎನ್ ಕ್ವೈರಿಗೆ ಕರೆದರೆ ನಮ್ಮಲ್ಲಿ ಹೇಳಿ. ಎಲ್ಲರೂ ಒಟ್ಟಿಗೆ ಹೋಗೋಣ ಸ್ಟೇಷನ್ ನಲ್ಲಿ ಬೇರೆ ಯಾರೂ ಮಾತಾಡುವುದು ಬೇಡ. ನಾವೇ ಮಾತಾಡುತ್ತೇವೆ. ಯಾರೂ ನಡೆದ ವಿಷಯದ ಬಗ್ಗೆ ಬಾಯಿ ಬಿಡದಿದ್ದರೆ, ಪೊಲೀಸರು ಸಿ ರಿಪೋರ್ಟ್ ಹಾಕಿ ಕೇಸನ್ನು ಮುಗಿಸುತ್ತಾರೆ,” ಎಂದು ರವೀಂದ್ರ ನಾಯಕ್ ಮತ್ತು ಇನ್ನೋರ್ವ ಆರೋಪಿ ದೇವದಾಸ್ ಹೇಳಿರುವುದಾಗಿ ಆರೋಪಿಗಳು ಹೇಳಿರುವುದರ ಕುರಿತು ಚಾರ್ಜ್ ಶೀಟ್ ದಾಖಲೆಗಳಲ್ಲಿ ಉಲ್ಲೇಖವಿದೆ.
ರವೀಂದ್ರ ನಾಯಕ್ ರ ಈ ಭರವಸೆಯಿಂದಾಗಿ, ಹತ್ಯೆಯ ನಂತರದ ಆರಂಭಿಕ ದಿನಗಳಲ್ಲಿ ಆರೋಪಿಗಳು ಮೌನವಾಗಿದ್ದರು ಎಂದು ಹೇಳಲಾಗಿದೆ.
►’ಅಸಹಜ ಸಾವು’ ಪ್ರಕರಣ ಕೊಲೆ ಪ್ರಕರಣವಾಗಿ ಬದಲಾಯ್ತು
ಆರಂಭದಲ್ಲಿ, ಪೊಲೀಸರು ಈ ಪ್ರಕರಣವನ್ನು “ಅಸಹಜ ಸಾವು” ಎಂದು ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ಅಶ್ರಫ್ ಕುಡಿದು ಬಿದ್ದಿದ್ದಾಗಿ ಹೇಳಿದ್ದರು. ಆದರೆ, ಸಾರ್ವಜನಿಕರ ಆಕ್ರೋಶ, ಮಾಧ್ಯಮಗಳ ಸತತ ವರದಿಗಳು ಮತ್ತು ಹಕ್ಕುಗಳ ಸಂಘಟನೆಗಳ ಒತ್ತಡದ ನಂತರ, ಇದನ್ನು ಕೊಲೆ ಪ್ರಕರಣವಾಗಿ ದಾಖಲಿಸಲಾಯಿತು.
ಜುಲೈ 25 ರಂದು ಬಹಿರಂಗವಾದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ದೇಹದ ಮೇಲೆ 35 ಬಾಹ್ಯ ಗಾಯಗಳಿರುವುದು ದೃಢಪಟ್ಟಿದೆ. ಕ್ರೂರವಾಗಿ ಹಲ್ಲೆಗೈದು ಕೊಲ್ಲಲಾಗಿರುವುದು ಆ ವರದಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ದೇಹದ ವಿವಿಧೆಡೆ ಮತ್ತು ತಲೆಗೆ ಆದ ತೀವ್ರ ಗಾಯಗಳ ಪರಿಣಾಮವಾಗಿ, ಮೆದುಳಿನಲ್ಲಿನ ರಕ್ತಸ್ರಾವ ಮತ್ತು ಮೂತ್ರಪಿಂಡಕ್ಕೆ ಆಗಿದ್ದ ಗಾಯದಿಂದಾಗಿ ಅಶ್ರಫ್ ಸಾವನ್ನಪ್ಪಿರುವುದಾಗಿ ವರದಿ ದೃಢಪಡಿಸಿದೆ.
ಹಲ್ಲೆಯಲ್ಲಿ ಕಿಡ್ನಿಗೆ ತೀವ್ರ ಹಾನಿಯಾಗಿದ್ದುದೂ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಇವೆಲ್ಲವೂ ಮೊಂಡಾದ ಆಯುಧದಿಂದ ಉಂಟಾದ ಹೊಡೆತಗಳಾಗಿವೆ ಎಂದು ಪೋಸ್ಟ್ ಮಾರ್ಟಂ ವರದಿ ಹೇಳಿದೆ.
►ಪೊಲೀಸರ ಕಾರ್ಯವೈಖರಿ ಬಗ್ಗೆ ಏಳುತ್ತವೆ ಪ್ರಶ್ನೆಗಳು
ಎಲ್ಲಾ ಆರೋಪಿಗಳು ರವೀಂದ್ರ ನಾಯಕ್ ವಿರುದ್ಧ ಹೇಳಿಕೆ ನೀಡಿದ್ದರೂ, ಅಂದಿನ ಪೊಲೀಸ್ ಕಮಿಷನರ್ ಅಗ್ರವಾಲ್ ಮಾತ್ರ ರವೀಂದ್ರ ನಾಯಕ್ ರ ಪಾತ್ರವನ್ನು ನಿರಾಕರಿಸಿದ್ದು, ತನಿಖೆಯ ಮೇಲೆ ರಾಜಕೀಯ ಪ್ರಭಾವ ಬೀರಲಾಗಿತ್ತೇ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹತ್ಯೆ ನಡೆದು 48 ಗಂಟೆಗಳ ನಂತರವೂ ಪ್ರಮುಖ ಆರೋಪಿಗಳನ್ನು ಬಂಧಿಸದಿರುವುದು ಪೊಲೀಸರ ವೈಫಲ್ಯವನ್ನು ಎತ್ತಿ ತೋರಿಸಿದೆ. ರವೀಂದ್ರ ನಾಯಕ್ ಆ ಬಳಿಕ ತಲೆಮರೆಸಿಕೊಂಡಿದ್ದು ಈವರೆಗೂ ಪತ್ತೆಯಾಗಿಲ್ಲ.
ಆಮೇಲೆ ಮಂಗಳೂರು ಪೊಲೀಸ್ ಕಮಿಷನರ್ ಅಗ್ರವಾಲ್ ಅವರ ವರ್ಗಾವಣೆಯಾಗಿ ಹೊಸ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಬಂದರು. ಅಲ್ಲಿಂದ ಅಶ್ರಫ್ ಕೊಲೆ ಪ್ರಕರಣದ ತನಿಖೆಗೆ ಚುರುಕು ಸಿಕ್ಕಿತು. ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲೂ ಸೂಕ್ತ ವಾದ ಮಂಡನೆ ಆಯಿತು. ಆದರೆ ಕೊಲೆಯಲ್ಲಿ ರವೀಂದ್ರ ನಾಯಕ್ ಪಾತ್ರದ ಬಗ್ಗೆ ಮಾತ್ರ ಹೊಸ ಕಮಿಷನರ್ ಅವರೂ ನಮ್ಮಲ್ಲಿ ಯಾವುದೇ ಸಾಕ್ಷ್ಯ ಇಲ್ಲ ಎಂದೇ ಹೇಳಿದ್ದರು. ಅಷ್ಟೇ ಅಲ್ಲ, ರವೀಂದ್ರ ನಾಯಕ್ ರನ್ನು ಇನ್ನೂ ಬಂಧಿಸಿಲ್ಲ ಯಾಕೆ ಎಂದು ಕೇಳಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದವರನ್ನು ಠಾಣೆಗೆ ಕರೆಸಿ ಯಾರದಾದರೂ ವಿರುದ್ಧ ನಿಮ್ಮಲ್ಲಿ ಸಾಕ್ಷ್ಯ ಇದ್ದರೆ ಮಾತ್ರ ಪೋಸ್ಟ್ ಹಾಕಬೇಕು ಇಲ್ಲದಿದ್ದರೆ ಪೋಸ್ಟ್ ಹಾಕಬಾರದು ಎಂದು ಎಚ್ಚರಿಕೆ ನೀಡಿದ್ದರು.
ಇದೀಗ ಚಾರ್ಜ್‌ಶೀಟ್‌ನಲ್ಲೇ ರವೀಂದ್ರ ನಾಯಕ್ ಪಾತ್ರದ ಬಗ್ಗೆ ಪ್ರಕರಣದ ಆರೋಪಿಗಳು ಹೇಳಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಆದರೆ, ಆರೋಪಿಗಳೆಲ್ಲರೂ ಮೊದಲೇ ಹೇಳಿಕೆ ನೀಡಿದ್ದರೂ, ರಾಜಕೀಯವಾಗಿ ಪ್ರಭಾವಿಯಾಗಿರುವ ವ್ಯಕ್ತಿಯನ್ನು ರಕ್ಷಿಸಲು ಪೊಲೀಸರು ಆಗ ಪ್ರಯತ್ನಿಸಿದರೇ ಎಂಬ ಅನುಮಾನ ದಟ್ಟವಾಗಿದೆ. ಸದ್ಯಕ್ಕೆ, ಚಾರ್ಜ್‌ಶೀಟ್ ನಲ್ಲಿರುವ ಹೇಳಿಕೆಗಳಲ್ಲಿ ನಾಯಕ್ ಹೆಸರು ಸೇರಿದ್ದರೂ, ಅವರನ್ನು ಆರೋಪಿಯಾಗಿಸಿಲ್ಲ.
ರವೀಂದ್ರ ನಾಯಕ್ ವಿರುದ್ಧ ದೋಷಾರೋಪ ಹೊರಿಸದೇ ಇರುವುದಕ್ಕೆ “ರವೀಂದ್ರ ನಾಯಕ್ ರವರ ಪಾತ್ರ ಈವರೆಗಿನ ತನಿಖೆಯಲ್ಲಿ ಸ್ಪಷ್ಟವಾಗಿ ದೃಢವಾಗದ ಕಾರಣ ಹಾಗೂ ವಿಚಾರಣೆಗೆ ಲಭ್ಯವಿಲ್ಲದ ಕಾರಣ ಹೆಚ್ಚಿನ ತನಿಖೆಯನ್ನು ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಮಾತ್ರ ಅದರಲ್ಲಿ ಹೇಳಲಾಗಿದೆ.