ನಟ ಫೈಸಲ್ ಖಾನ್‌ರಿಂದ ಕುಟುಂಬದ ವಿರುದ್ಧ ಗಂಭೀರ ಆರೋಪ: “ನನ್ನನ್ನು ಹುಚ್ಚನೆಂದು ಮನೆಯಲ್ಲಿ ಬಂಧಿಯಾಗಿರಿಸಿದ್ದರು”

ಮುಂಬಯಿ: ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ (Aamir Khan) ಅವರ ಸಹೋದರ ಫೈಸಲ್ ಖಾನ್ ( Faisal Khan) ತನ್ನ ಕುಟುಂಬದ ವಿರುದ್ಧವೇ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಆಮಿರ್ ಖಾನ್ ಅವರ ಸಹೋದರ ಫೈಸಲ್ ಖಾನ್ ʼಪಿಂಕ್ ವಿಲ್ಲಾʼ ಜತೆಗಿನ ಪಾಡ್‌ಕಾಸ್ಟ್‌ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ನಾನು ಒಂದು ವರ್ಷಕ್ಕೂ ಹೆಚ್ಚು ಕಾಲ ಮನೆಯಲ್ಲಿ ಬಂಧನಕ್ಕೊಳಗಾಗಿದ್ದೆ. ಆಮಿರ್ ನನಗೆ ನನಗೆ ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ಇದೆ ಎಂದು ಹೇಳಿದ್ದ. ನನ್ನನ್ನು ಹುಚ್ಚ ಅಂಥ ಕರೆದಿದ್ದರು. ನಾನು ಸಮಾಜಕ್ಕೆ ಹಾನಿ ಮಾಡುತ್ತೇನೆ ಎನ್ನುವ ಭೀತಿಯಲ್ಲಿ ಜೆಜೆ ಆಸ್ಪತ್ರೆಯಲ್ಲಿ ನನ್ನನ್ನು 20 ದಿನ ಇರಿಸಿ ಟೆಸ್ಟ್ ಮಾಡಿಸಿದ್ದರು. ಅಲ್ಲಿ ಜನರಲ್ ವಾರ್ಡ್‌ನಲ್ಲಿ ಹುಚ್ಚರ ಜತೆ ಇರಿಸಲಾಗಿತ್ತು” ಎಂದಿದ್ದಾರೆ.
ಆಮಿರ್ ನನ್ನನ್ನು ಬಂಧಿಯಾಗಿಸಿಕೊಂಡು, ನನ್ನ ಮೊಬೈಲ್ ಕಸಿದುಕೊಂಡಿದ್ದರು. ನನ್ನ ಕೋಣೆಯ ಹೊರಗೆ ಭದ್ರತಾ ಸಿಬ್ಬಂದಿಗಳನ್ನು ನಿಲ್ಲಿಸಲಾಗಿತ್ತು. ನನ್ನ ವಿರೋಧದ ನಡುವೆಯೇ ಬಲವಂತವಾಗಿ ಮೆಡಿಸಿನ್‌ಗಳನ್ನು ನೀಡಲಾಗುತ್ತಿತ್ತು ಎಂದಿದ್ದಾರೆ.
ಸಹೋದರಿ ನಿಖತ್ ಹಾಗೂ ತಾಯಿ ಅವರು ನನ್ನಿಂದ ಸಮಾಜಕ್ಕೆ ಹಾನಿಯಿದೆ. ನಾನು ಹುಚ್ಚನೆಂದು ಸಹಿ ಮಾಡಿದ್ದರು. ನಾನು ಇದುವರೆಗೆ ನಾನು ಹುಚ್ಚನ ಹಾಗೆ ಯಾವುದೇ ಅಪಾಯಕಾರಿ ಕೆಲಸ ಮಾಡಿಲ್ಲ. ನಾನು ಸಿನಿಮಾ ಮಾಡಿದ್ದೇನೆ. ನಿರ್ದೇಶನ ಮಾಡಿದ್ದೇನೆ. ಹಾಡಿದ್ದೇನೆ ಎಂದಿದ್ದಾರೆ.
ಫೈಸಲ್ ತಮ್ಮ ತಾಯಿ ಜೀನತ್ ತಾಹಿರ್ ಹುಸೇನ್, ಸಹೋದರಿ ನಿಖತ್ ಹೆಗ್ಡೆ ಮತ್ತು ಸಹೋದರ ಆಮಿರ್ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ.
2022ರಲ್ಲೂ ಫೈಸಲ್ ಅವರು ಈ ರೀತಿಯ ಹೇಳಿಕೆಯನ್ನು ಆಮಿರ್ ಅವರ ವಿರುದ್ಧ ನೀಡಿದ್ದರು. ಇದೀಗ ಮತ್ತೆ ಅದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.
ಕುಟುಂಬದಿಂದ ಬಂದ ಸ್ಪಷ್ಟನೆ ಏನು?:
“ಫೈಸಲ್ ಅವರು ತಾಯಿ ಜೀನತ್ ತಾಹಿರ್ ಹುಸೇನ್, ಅವರ ಸಹೋದರಿ ನಿಖತ್ ಹೆಗ್ಡೆ ಮತ್ತು ಅವರ ಸಹೋದರ ಆಮಿರ್ ವಿರುದ್ಧ ನೋವುಂಟುಮಾಡುವ ಮತ್ತು ದಾರಿತಪ್ಪಿಸುವ ಹೇಳಿಕೆಯಿಂದ ನಾವು ದುಃಖಿತರಾಗಿದ್ದೇವೆ. ಅವರು ಈ ಘಟನೆಗಳನ್ನು ತಪ್ಪಾಗಿ ನಿರೂಪಿಸಿರುವುದು ಇದೇ ಮೊದಲಲ್ಲವಾದ್ದರಿಂದ, ನಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುವುದು ಮತ್ತು ಕುಟುಂಬವಾಗಿ ನಮ್ಮ ಒಗ್ಗಟ್ಟನ್ನು ಪುನರುಚ್ಚರಿಸುವುದು ಅಗತ್ಯವೆಂದು ನಾವು ಭಾವಿಸುತ್ತೇವೆ” ಎಂದು ಹೇಳಲಾಗಿದೆ.
“ಫೈಸಲ್ ಅವರ ಕುರಿತಾದ ಪ್ರತಿಯೊಂದು ನಿರ್ಧಾರವನ್ನು ಕುಟುಂಬವಾಗಿ, ಬಹು ವೈದ್ಯಕೀಯ ವೃತ್ತಿಪರರೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳಲಾಗಿದೆ. ಈ ಕಾರಣಕ್ಕಾಗಿ, ನಮ್ಮ ಕುಟುಂಬಕ್ಕೆ ನೋವಿನ ಮತ್ತು ಕಷ್ಟಕರವಾದ ಅವಧಿಯ ವಿವರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದನ್ನು ನಾವು ದೂರವಿಟ್ಟಿದ್ದೇವೆ. ಮಾಧ್ಯಮಗಳು ಕುಟುಂಬದ ಖಾಸಗಿ ವಿಷಯವನ್ನು ಗಾಸಿಪ್ ಆಗಿ ಹಬ್ಬಿಸಬಾರದೆಂದು ನಾವು ವಿನಂತಿ ಮಾಡುತ್ತೇವೆ ಎಂದು ಹೇಳಲಾಗಿದೆ.
ಆಮಿರ್ ಅವರ ಮೊದಲ ಪತ್ನಿ ರೀನಾ ದತ್ತ, ಮಗ ಜುನೈದ್ ಖಾನ್, ಮಗಳು ಇರಾ ಖಾನ್ ಮತ್ತು ಫರ್ಹತ್ ದತ್ತ, ರಾಜೀವ್ ದತ್ತ, ಕಿರಣ್ ರಾವ್, ಸಂತೋಷ್ ಹೆಗ್ಡೆ, ಸೆಹರ್ ಹೆಗ್ಡೆ, ಮನ್ಸೂರ್ ಖಾನ್, ನುಜತ್ ಖಾನ್, ಇಮ್ರಾನ್ ಖಾನ್, ಟೀನಾ ಫೋನ್ಸೆಕಾ, ಜೈನ್ ಮೇರಿ ಖಾನ್ ಮತ್ತು ಪ್ಯಾಬ್ಲೋ ಖಾನ್ ಅವರ ಪರವಾಗಿ ಈ ಹೇಳಿಕೆ ನೀಡಲಾಗಿದೆ.
ಕುಟುಂಬದಿಂದ ದೂರವಿದ್ದು, ಫೈಸಲ್ ಕಳೆದ ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಆಮಿರ್ ಖಾನ್ ಮತ್ತು ಅವರ ಸಹೋದರ ಫೈಸಲ್ ಖಾನ್ 2000ರ ಚಿತ್ರ ʼಮೇಲಾʼದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಲ್ಲದೆ ಆಮಿರ್ ಜತೆ ಅವರು ʼಖಯಾಮತ್ ಸೇ ಖಯಾಮತ್ ತಕ್ʼ ಮತ್ತು ʼಜೋ ಜೀತಾ ವೋಹಿ ಸಿಕಂದರ್ʼ ಸಿನಿಮಾದಲ್ಲಿ ನಟಿಸಿದ್ದಾರೆ.