500 ರೂ.ಗಾಗಿ ಸ್ನೇಹಿತನ ತಾಯಿಯ ಎದುರೇ ಕೊಲೆ

ಬೆಳಗಾವಿ: 500 ರೂ.ಗಾಗಿ ತಾಯಿ ಎದುರೇ ತನ್ನ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ.

ಯಳ್ಳೂರು ಗ್ರಾಮದ ನಿವಾಸಿ ಹುಸೇನ್ ತಾಶೇವಾಲೆ (45) ಮೃತ ದುರ್ದೈವಿ. ಮಿಥುನ್ ಕುಬಚಿ, ಮನೋಜ್ ಇಂಗಳೇ ಕೊಲೆ ಆರೋಪಿಗಳು. ಗುಜುರಿ ಸಾಮಗ್ರಿ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳವಾಗಿ ಮನಸ್ತಾಪಗಳಾಗಿತ್ತು. ಮೃತ ಹುಸೇನ್ ಕೊಲೆ ಆರೋಪಿಗಳಾದ ಮಿಥುನ್ ಮತ್ತು ಮನೋಜ್‌ಗೆ 500 ರೂ. ಕೊಡಬೇಕಿತ್ತು. ಹಣ ಕೇಳಲು ಹುಸೇನ್ ಮನೆಗೆ ಇಬ್ಬರೂ ಹೋಗಿದ್ದರು. ಈ ವೇಳೆ ಮೂವರ ಮಧ್ಯೆ ಗಲಾಟೆಯಾಗಿದೆ.
ಈ ವೇಳೆ ಹುಸೇನ್ ಹೊಟ್ಟೆಯ ಭಾಗಕ್ಕೆ ಕೈಯಿಂದ ಇಬ್ಬರೂ ಆರೋಪಿಗಳು ಗುದ್ದಿದ್ದಾರೆ. ಹೊಟ್ಟೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಹುಸೇನ್ ಸಾವನ್ನಪ್ಪಿದ್ದಾನೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
