ಪಡುಬಿದ್ರಿ ರಸ್ತೆ ಅಪಘಾತ: ಪಾದಚಾರಿ ಹಾಗೂ ಬೈಕ್ ಸವಾರ ಇಬ್ಬರು ಸಾವು

ಪಡುಬಿದ್ರಿ : ರಸ್ತೆ ಬದಿ ನಿಂತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನಪ್ಪಿ, ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಅಗಸ್ಟ್ 9ರ ರಾತ್ರಿ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ನಲ್ಲಿ ಸಹಸವಾರೆಯಾಗಿದ್ದ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಮುಂಬಯಿಯ ಮೀನಿನ ಬಲೆ ತಯಾರಿ ಸಂಸ್ಥೆ ನಿರ್ಲಾನ್ ಕಂಪೆನಿಯಲ್ಲಿ ಅಧಿಕಾರಿಯಾಗಿದ್ದು, ಪ್ರಸ್ತುತ ಹೊಟೇಲ್ ಉದ್ಯಮಿಯಾಗಿರುವ ಕಾಪುವಿನ ಶಂಕರ ಶೆಟ್ಟಿ (65) ಮತ್ತು ಬೈಕ್ ಸವಾರನಾಗಿದ್ದ ಮಂಗಳೂರಿನ ಪಾಂಡೇಶ್ವರ ನಿವಾಸಿ ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿನ ಹೊಟೇಲ್ ಮ್ಯಾನೇಜ್ಮೆಂಟ್ ಅಂತಿಮ ವರ್ಷದ ವಿದ್ಯಾರ್ಥಿ ದರ್ಶನ್ರಾಜ್ (21) ಎಂದು ಗುರುತಿಸಲಾಗಿದೆ.
ಮಂಗಳೂರು ಉಡುಪಿ ಏಕಮುಖ ರಸ್ತೆಯ ಬದಿಯಲ್ಲಿ ನಿಂತಿದ್ದ ಶಂಕರ ಅವರಿಗೆ ಅದೇ ರಸ್ತೆಯಲ್ಲಿ ಬಂದ ಬೈಕ್ ಢಿಕ್ಕಿಯಾಗಿತ್ತು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿಯಲ್ಲೇ ಸಾವನಪ್ಪಿದ್ದಾರೆ. ಅಪಘಾತದಲ್ಲಿ ಹೆದ್ದಾರಿಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ದರ್ಶನ್ರಾಜ್ನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಮಧ್ಯರಾತ್ರಿ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸಹ ಸವಾರೆಯಾಗಿದ್ದ ಯುವತಿ ನತಾಶಾ ಅವರೂ ಗಾಯಗೊಂಡಿದ್ದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
