ಮಳೆಯಲ್ಲಿ ಪ್ರಾರ್ಥನೆ: ಹಾವು ಬಂದರು ಮಿಟುಕದ ಆರ್‌ಎಸ್‌ಎಸ್ ಸ್ವಯಂ ಸೇವಕರು- ವಿಡಿಯೋ ವೈರಲ್

ಮುಂಬೈ: ಆರ್‌ಎಸ್‌ಎಸ್ (RSS) ಪ್ರಾರ್ಥನೆ ವೇಳೆ, ಮಳೆ, ಗಾಳಿ ಇದ್ದರೂ ನಡುವೆ ಹಾವು (Snake) ಬಂದರೂ ಸ್ವಯಂ ಸೇವಕರು (RSS Swayamsevaks) ಮಾತ್ರ ವಿಚಲಿತರಾಗದೇ ಶಿಸ್ತಿನಿಂದ ನಡೆದುಕೊಂಡಿರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಆರ್‌ಎಸ್‌ಎಸ್ ಸ್ವಯಂ ಸೇವಕರ ಅಚಲ ಶಿಸ್ತಿಗೆ ನೆಟ್ಟಿಗರು ಸೆಲ್ಯೂಟ್ ಎಂದಿದ್ದಾರೆ.
ಹೌದು, ಈ ಘಟನೆ ಮಹಾರಾಷ್ಟ್ರದ ಲೋನಾವಾಲದಲ್ಲಿ ನಡೆದಿದೆ. ಈಗ ವೈರಲ್ ಆಗಿರುವ ವಿಡಿಯೋವನ್ನು ಎಕ್ಸ್ ಬಳಕೆದಾರ ಮಹಾವೀರ್ ಜೈನ್ ಪೋಸ್ಟ್ ಮಾಡಿದ್ದಾರೆ. ಅವರು, ಮಹಾರಾಷ್ಟ್ರದ ಲೋನಾವಾಲದಲ್ಲಿ ಸಂಘ ಪ್ರಾರ್ಥನೆಯ ಸಮಯದಲ್ಲಿ ಹಾವು ಕಾಣಿಸಿಕೊಂಡಿತು. ಸ್ವಯಂಸೇವಕರು ತೊಂದರೆಗೊಳಗಾಗದೆ ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು ಎಂದು ಬರೆದಿದ್ದಾರೆ.
ಲೋನಾವಾಲದ ಅರಣ್ಯ ಭಾಗದಲ್ಲಿ ಮಳೆ, ಗಾಳಿಯ ನಡುವೆಯೂ ಸ್ವಯಂ ಸೇವಕರು ಪ್ರಾರ್ಥನೆ ನಡೆಸಿದ್ದಾರೆ. ಈ ವೇಳೆ ನಾಗರಹಾವೊಂದು ಅವರ ಕಾಲುಗಳ ಸಂದಿಯಲ್ಲಿ ಚಲಿಸಿದರೂ ಒಬ್ಬರೂ ಸ್ವಯಂ ಸೇವಕರು ಭಯಭೀತರಾಗಿಲ್ಲ. ಮಳೆಯಲ್ಲಿ ನೆನೆದರೂ, ಭುಜಕ್ಕೆ ಭುಜ ಕೊಟ್ಟು ನಿಂತು, ಪ್ರಾರ್ಥನೆ ಪೂರ್ಣಗೊಳ್ಳುವವರೆಗೆ ಅವರು ಸಂಪೂರ್ಣ ನಿಶ್ಚಲತೆಯನ್ನು ಕಾಯ್ದುಕೊಂಡಿದ್ದಾರೆ.
ಸ್ವಯಂಸೇವಕರ ಗುಂಪಿನ ನಡುವೆ ವಿಷಕಾರಿ ಹಾವು ಚಲಿಸಿದರೂ ಅವರು ಯಾರೂ ಕೂಡಾ ಭೀತಿಗೊಳಗಾಗಲಿಲ್ಲ. ಅಥವಾ ಬೇರೆ ಕಡೆ ಕಣ್ಣು ಕೂಡಾ ಹಾಯಿಸಲಿಲ್ಲ. ಹಾವು ಕೂಡಾ ಅವರ ಶಿಸ್ತನ್ನು ಅಡ್ಡಿಪಡಿಸಲಿಲ್ಲ. ಅವರ್ಯಾರಿಗೂ ತೊಂದರೆ ನೀಡದೇ ಅಲ್ಲಿಂದ ಹೊರಟು ಹೋಗಿದೆ. ಇಂತಹ ಅಪರೂಪದ ದೃಶ್ಯ ಜಗತ್ತಿನಲ್ಲಿ ಕಂಡುಬರುವುದೇ ತುಂಬಾ ಅಪರೂಪ.
ಈ ಧೈರ್ಯಶಾಲಿ ಆರ್‌ಎಸ್‌ಎಸ್ ಸ್ವಯಂ ಸೇವಕರನ್ನು ಕಂಡ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗುಂಪಿಗೆ ಹಲವರು ಸೆಲ್ಯೂಟ್ ಹೊಡೆದಿದ್ದಾರೆ. ಸಂಘ ಎನ್ನುವುದು ಹಾವು ಬಂದಾಗ ವಿಚಲಿತರಾಗದೇ ಶಿಸ್ತಿನಿಂದ ನಿಲ್ಲುವುದು ಮಾತ್ರವಲ್ಲ.. ಕಡಿಯಲು ಬಂದಾಗ ಅದನ್ನು ಎದುರಿಸುವುದು ಕೂಡಾ ಹೇಗೆಂದು ಅವರಿಗೆ ತಿಳಿದಿರುತ್ತದೆ ಎಂದು ಒಬ್ಬರು ಹೇಳಿದ್ದಾರೆ.
