Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಧುನಿಕ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರಗಳು: ಪೋಷಕರು ಗಮನಿಸಬೇಕಾದ ಅಂಶಗಳು

Spread the love

ಮಕ್ಕಳು ಈಗ ಮೊದಲಿನಂತಿಲ್ಲ. ವಯಸ್ಸಿಗೆ ಮೀರಿದ ಮಾತಾಡುತ್ತಿದ್ದಾರೆ. ಎಳೆಯ ವಯಸ್ಸಿನಲ್ಲೇ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಪೋಷಕರ ಪಾಲಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ. ಇದಕ್ಕೇನು ಕಾರಣ? ನೂರೆಂಟು ಒತ್ತಡಗಳಿಂದ ಮಕ್ಕಳು ಹೈರಾಣಾಗಿದ್ದಾರಾ? ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಎಡವುತ್ತಿದ್ದಾರಾ?

ಮಕ್ಕಳು ಮಕ್ಕಳಂತೆ ಉಳಿಯದಿರಲು ಏನು/ ಯಾರು ಕಾರಣ? ಇದಕ್ಕಿರುವ ಪರಿಹಾರವೇನು?

ಸಂಜನಾ ಉದಯನ್‌ ಎಂಬ ಕೇರಳದ 13 ವರ್ಷದ ಹುಡುಗಿ, ಉತ್ತಮ ಫ‌ಲಿತಾಂಶ ಬರಲಿಲ್ಲವೆಂಬ ಕಾರಣಕ್ಕೆ ತಂದೆ ತಾಯಿ ಮೂದಲಿಸಿದರೆಂದು ಮನನೊಂದು, ಆತ್ಮಹತ್ಯೆಗೆ ಶರಣಾದ ಘಟನೆ ದೇಶದ ಗಮನ ಸೆಳೆದಿತ್ತು. ಮತ್ತೊಂದು ಪ್ರಕರಣದಲ್ಲಿ ಆರವ್‌ ಝಾ ಎಂಬ ಉತ್ತರ ಪ್ರದೇಶದ 12 ವರ್ಷದ ಹುಡುಗ ಸಹಪಾಠಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ. ಅದೇ ರೀತಿ, ಪಾಯಲ್‌ ಸಾಹು ಎಂಬ 13 ವರ್ಷದ ಹುಡುಗಿ, ಹೆಚ್ಚಾಗಿ ಮೊಬೈಲ್‌ ಬಳಸುತ್ತಿದ್ದದ್ದನ್ನು ತಂದೆತಾಯಿಗಳು ಪತ್ತೆಹಚ್ಚಿಬಿಟ್ಟರೆಂದು ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಗುಜರಾತಿನ ಒಬ್ಬ ಹುಡುಗ, ಯಾವುದೋ ಗೇಮ್‌ ಚಟ ಹತ್ತಿಸಿಕೊಂಡು ಸತ್ತುಹೋಗಿದ್ದ! ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ. ಅಲ್ಲೆಲ್ಲೋ ನಡೆದಿರುವ ಘಟನೆಗಳು ಅಂತ ನಾವು ಮೈಮರೆಯುವ ಹಾಗಿಲ್ಲ. ಏಕೆಂದರೆ, ನಮ್ಮ ಅಕ್ಕಪಕ್ಕದಲ್ಲಿಯೇ ಇಂತಹ ಘಟನೆಗಳು ನಡೆದಿರಬಹುದು. ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ. ಯಾಕಿØàಗೆ? ಏನಾಗ್ತಿದೆ ನಮ್ಮ ಮಕ್ಕಳಿಗೆ? 13 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಏಕೆ ಹೆಚ್ಚಾಗುತ್ತಿದೆ ಎಂದು ಯೋಚಿಸಿದರೆ ತುಂಬಾ ರಹಸ್ಯ ಕಾರಣಗಳೇನೂ ಇಲ್ಲ! ಎಲ್ಲವೂ ಖುಲ್ಲಂ ಖುಲ್ಲ.

ಮಕ್ಕಳ ಜೊತೆ ಮಾತಾಡ್ತಿದ್ದೀರಾ?

ಒಮ್ಮೆ ಹಾಗೇ ಯೋಚಿಸೋಣ… ನಮ್ಮ ಮಕ್ಕಳ ಜೊತೆ ನಾವು ಹೇಗಿದ್ದೀವಿ? ಮಕ್ಕಳ ಜೊತೆ ಕೂತು ಒಂದು ಗಂಟೆ ಆಟವಾಡಿ ಅಥವಾ ಮಾತನಾಡಿ ಎಷ್ಟು ದಿನವಾಯ್ತು? ಅವರ ಸಿಲಬಸ್‌ ಏನು? ಅವರ ಹ್ಯಾಂಡ್‌ ರೈಟಿಂಗ್‌ ಹೇಗಿದೆ? ಅವರು ಸ್ಕೂಲಿಗೆ ತಿಂಡಿ ತಗೊಂಡು ಹೋಗ್ತಾರಲ್ವಾ, ಅದನ್ನು ತಿಂದೇ ಬರ್ತಿದ್ದಾರ? ನೀರಿನ ಬಾಟಲ್‌ ಕುಡಿದು ಖಾಲಿಯಾಗುತ್ತೋ, ಚೆಲ್ಲಿದ್ದಕ್ಕೆ ಖಾಲಿಯಾಗುತ್ತೋ? ಅವರ ಸಹಪಾಠಿಗಳು ಯಾರು? ಅವರ ಕ್ಲೋಸ್‌ ಫ್ರೆಂಡ್ಸ್… ಎಷ್ಟು ಜನ? ಅವರ ತಂದೆ ತಾಯಿ ಏನ್ಮಾಡ್ತಾರೆ? ಪೇರೆಂಟ್ಸ್ ಮೀಟಿಂಗ್‌ನಲ್ಲಿ ಟೀಚರ್‌ ಹತ್ರ ಕೂತು ಮಗುವಿನ ಬಗ್ಗೆ ಏನ್‌ ಪ್ರಶ್ನೆ ಕೇಳಿದ್ರಿ? ಅವರೀಗ ಯಾವ ಸೆಲೆಬ್ರಿಟಿಯನ್ನು ಇಷ್ಟಪಡ್ತಿದ್ದಾರೆ? ಯಾವ ಹಾಡನ್ನು ಗುನುಗ್ತಿದ್ದಾರೆ? ಹೋದ ವರ್ಷ ಡಾಕ್ಟರ್‌ ಆಗಬೇಕು ಅಂತಿದ್ರು. ಈ ವರ್ಷ ಏನಾಗ್ಬೇಕು ಅಂತಿದ್ದಾರೆ? ಅದ್ಯಾವುದೋ ಸಿನಿಮಾ ಬಗ್ಗೆ, ಪುಸ್ತಕದ ಬಗ್ಗೆ, ದೇಶದ ಬಗ್ಗೆ ಅವರು ವಿಚಾರಿಸಿದ್ರಲ್ವಾ? ಆ ಮಾಹಿತಿ ಅವರಿಗೆ ಎಲ್ಲಿಂದ ಸಿಕ್ತು? ಅವರ ಮಾಹಿತಿಯ ಮೂಲಗಳೇನು? ಸ್ಕೂಲಿಗೆ ಹೋಗೋಕೆ ಖುಷಿಪಡ್ತಿದ್ದಾರ?.. ಇತ್ಯಾದಿ ಇತ್ಯಾದಿಗಳ ಬಗ್ಗೆ ನಮಗೆ ಎಷ್ಟು ಜ್ಞಾನವಿದೆ ಅನ್ನೋದರ ಮೇಲೆ ನಾವೆಂಥ ಪೋಷಕರು ಅನ್ನೋದನ್ನು ನಿರ್ಧರಿಸಿಕೊಂಡುಬಿಡಬಹುದು.

ಪೋಷಕರು ಯೋಚಿಸದ ಸಂಗತಿ…

ಅವೆಲ್ಲಾ ಹೋಗಲಿ, ನಾವು ಮನೆಯಲ್ಲಿ ಕೂತಿದ್ದಾಗ ಮಗು ಏನೋ ಒಂದು ಸಂದೇಹವನ್ನೋ, ಸಂತಸವನ್ನೋ ಹೊತ್ತು ಬಳಿ ಬಂದರೆ ನಮ್ಮ ಉತ್ತರ ಏನಾಗಿರುತ್ತೆ ಹೇಳಿ? ಐದು ನಿಮಿಷ ಇರು ಏನೋ ಕೆಲಸ ಮಾಡ್ತಿದ್ದೀನಿ ಅಂತಲೋ, ಕಾಲ್‌ ಇದೆ ಪ್ಲೀಸ್‌ ಅಂತಲೋ, ನನಗೀಗ ಸಮಯವಿಲ್ಲ ಅಂತಲೋ ಹೇಳಿ ನಮ್ಮದೇ ಕೆಲಸದಲ್ಲಿ ಬ್ಯುಸಿಯಾಗಿಬಿಡುತ್ತೇವೆ. ಫೈನ್‌… ತಪ್ಪಿಲ್ಲ! ನಾವು ಕಷ್ಟಪಡ್ತಿರೋದು ಮಕ್ಕಳಿಗಾಗಿಯೇ. ಆದ್ದರಿಂದ ಅದನ್ನು ಮನ್ನಿಸಿಕೊಂಡುಬಿಡೋಣ. ಆದರೆ ನಾವು ಹಾಗೆ ಹೇಳಿದ ಮರುಕ್ಷಣ ಮಗು ಬೇರೆ ಯಾವುದರ ಜೊತೆ ಕನೆಕ್ಟ್ ಆಯ್ತು ಅಂತ ಯೋಚಿಸಿದ್ದೀವಾ? ಹಾಗೆ ಕನೆಕ್ಟ್ ಆದ ವಿಷಯ ಆ ಮಗುವನ್ನು ಹೊಸ ದಿಕ್ಕಿನತ್ತ ನಡೆಸಬಹುದು. ಹೊಸ ಆಸಕ್ತಿಯನ್ನು ಹುಟ್ಟಿಸಬಹುದು. ಹೊಸ ಭಯಕ್ಕೆ ಕಾರಣವಾಗಬಹುದು. ಹೊಸ ಆಟಕ್ಕೋ, ಕೆಟ್ಟ ಚಟಕ್ಕೋ ಬೀಳಿಸಬಹುದು! ಅಲ್ಲಿಂದಾಚೆ ಮಗು ನಮ್ಮ ನಿಯಂತ್ರಣ ತಪ್ಪಿಹೋಗಬಹುದು. ನಮ್ಮ ಕಾಲದಲ್ಲಿ ನಮಗೂ ಕಷ್ಟಗಳಿದ್ದವು. ಊಟ, ತಿಂಡಿ, ಬಟ್ಟೆ, ಸ್ಕೂಲ್‌ ಫೀಸು ಸಹಿತವಾಗಿ ಪ್ರತಿಯೊಂದಕ್ಕೂ ಕಷ್ಟಗಳಿದ್ದವಾದರೂ ನಾವು ಸಾವಿನ ಬಗ್ಗೆ ಯೋಚಿಸಿರಲಿಲ್ಲ ಅಥವಾ ನಮಗದು ಗೊತ್ತೇ ಇರಲಿಲ್ಲ.

ಮೊಬೈಲ್‌ ಎಂಬ ಟೈಂ ಬಾಂಬ್..!

ಆದರೆ ಈಗಿನ ಮಕ್ಕಳು ಸಾವಿನ ಬಗ್ಗೆ ಯೋಚಿಸ್ತಿದ್ದಾರೆ ಅಂದ್ರೆ ಅವರ ಒತ್ತಡಗಳು ಅಂತಹವು. ಇಂದು ಎಲ್ಲಾ ಗಂಡ ಹೆಂಡತಿಯೂ ನೆಮ್ಮದಿಯಾಗಿಲ್ಲ. ಅವರ ನಡುವಿನ ವೈಮನಸ್ಸುಗಳು ಮಕ್ಕಳನ್ನು ಅಸಹಾಯಕರ ನ್ನಾಗಿಸುತ್ತಿವೆ. ಒಂಟಿಯಾಗಿಸುತ್ತಿವೆ! ಇತ್ತೀಚೆಗೆ ಹೆಚ್ಚುತ್ತಿರುವ ವಿಚ್ಛೇದನಗಳು ಕೇವಲ ಗಂಡು ಹೆಣ್ಣಿನ ಸಮಸ್ಯೆ ಅಲ್ಲ! ವಿಚ್ಛೇದನಗಳ ನೇರ ಪರಿಣಾಮ ಮಕ್ಕಳ ಮೇಲಾಗುತ್ತಿದೆ. ಅದರ ಜೊತೆಗೆ ಶೈಕ್ಷಣಿಕ ಒತ್ತಡಗಳು! ಒಂದು ಮಗು ಕಲಿಕೆಯಲ್ಲಿ ವಿಫ‌ಲವಾಗುವುದು ಎಂದರೆ, ತಂದೆತಾಯಿಗೆ ಅದು ಮರ್ಯಾದೆ ಪ್ರಶ್ನೆಯಾಗುತ್ತದೆ. ಶಾಲೆಗದು ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ ಮತ್ತು ಸ್ನೇಹಿತರಿಗೆ ಶ್ರೇಷ್ಠತೆಯ ಪ್ರಶ್ನೆಯಾಗುತ್ತದೆ. ಎಲ್ಲರೂ ಉತ್ತಮವಾದುದರ ನಿರೀಕ್ಷೆಯಲ್ಲಿದ್ದಾಗ ಉತ್ತಮರಾಗದಿದ್ದವರು ಏನಾಗಬೇಕು? ಹಾಂ…ಅದೇ ಆಗುತ್ತಿದೆ. ಇನ್ನು ಸೋಶಿಯಲ್‌ ಮೀಡಿಯಾದ ಹಾವಳಿಯನ್ನಂತೂ ಉಪೇಕ್ಷಿಸುವ ಹಾಗೆಯೇ ಇಲ್ಲ. ಆನ್‌ಲೈನ್‌ ಕ್ಲಾಸಸ್‌ ಹೆಸರಿನಲ್ಲಿ ನಾವು ಮಕ್ಕಳಿಗೆ ಮೊಬೈಲ್‌ ಎಂಬ ಟೈಂಬಾಂಬ್‌ ಅನ್ನು ಕೊಟ್ಟುಬಿಟ್ಟಿದ್ದೇವೆ. ಅದು ಯಾವಾಗ ಎಲ್ಲಿ ಸಿಡಿಯುತ್ತೋ ಅನ್ನೋ ಸಣ್ಣ ಅಂದಾಜೂ ನಮಗಿಲ್ಲ. ನಮ್ಮ ಮಕ್ಕಳು ಅಂತಹವರಲ್ಲ ಅನ್ನುವ ಪೆದ್ದುತನದ ಮಾತುಗಳನ್ನಾಡುವ ಅನೇಕ ಪೋಷಕರನ್ನು ನಾನು ಕಂಡಿದ್ದೇನೆ.

ಎಚ್ಚರ ವಹಿಸದಿದ್ದರೆ ಅಪಾಯ…

ಕಳೆದ ವಾರ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಅವನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಗ ನಾನೊಂದು ವಿಷಯವನ್ನು ಗಮನಿಸಿದೆ. ಆ ಹುಡುಗನ ಅಂತ್ಯಕ್ರಿಯೆಗೆ ಆತ ಓದುತ್ತಿದ್ದ ಶಾಲೆಯಿಂದ ಆತನ ಗೆಳೆಯರಿಬ್ಬರು ಮಾತ್ರ ಬಂದಿದ್ದರು. ಉಳಿದಂತೆ ಒಬ್ಬೇ ಒಬ್ಬ ವಿದ್ಯಾರ್ಥಿಯೂ ತಮ್ಮ ಸಹಪಾಠಿಯನ್ನು ನೋಡಲು ಬಂದಿರಲಿಲ್ಲ. ಅಲ್ಲಲ್ಲ, ಯಾವ ಪೋಷಕರೂ ತಮ್ಮ ಮಕ್ಕಳನ್ನು ಸಾವು ನೋಡಲು ಕಳಿಸಿರಲಿಲ್ಲ! ಏಕೆಂದರೆ, ನಾವು ನಮ್ಮ ಮಕ್ಕಳಿಗೆ ಕಷ್ಟವೇ ಆಗಬಾರದು ಅಂತ ಬೆಳೆಸುತ್ತಿದ್ದೇವೆ ಮತ್ತು ಕೆಟ್ಟದನ್ನು ತೋರಿಸಬಾರದು ಅಂತ ನಿರ್ಧರಿಸಿದ್ದೇವೆ. ಅವರು ಸೋಲುಗಳಿಗೆ ಮುಖಾಮುಖೀಯಾಗುವುದನ್ನು ತಪ್ಪಿಸುತ್ತಿದ್ದೇವೆ. ಮಕ್ಕಳು ಅತ್ತರೂ ಆಕಾಶ ಬಿದ್ದಂತೆ ಆಡುತ್ತಿದ್ದೇವೆ. ಅವರು ಕೇಳಿದ್ದನ್ನು ಇಲ್ಲವೆನ್ನದೆ ಕೊಡಿಸುತ್ತಿದ್ದೇವೆ, ತಿನ್ನಿಸುತ್ತಿದ್ದೇವೆ ಮತ್ತು ತೋರಿಸುತ್ತಿದ್ದೇವೆ. ಹೀಗೆ ಸುಖವಾಗಿ ಬೆಳೆಸಿದ ಮಕ್ಕಳನ್ನು ಕೊನೆಗೆ ನಾವು ಎಲ್ಲಿ ಬಿಟ್ಟು ಹೋಗುತ್ತೇವೆ ಎಂದರೆ, ಪ್ರತಿ ದಿನವೂ ಮರುಹುಟ್ಟು ಪಡೆಯಬೇಕಾದಂತಹ ಇದೇ ವ್ಯವಸ್ಥೆಯಲ್ಲಿ. ಇಲ್ಲಿ ಅದೆಷ್ಟು ಸ್ಪರ್ಧೆಗಳು, ಅವಮಾನಗಳು, ಸೋಲುಗಳು ಮತ್ತು ಒತ್ತಡಗಳನ್ನು ಅವರು ಎದುರಿಸಬೇಕು ಅನ್ನೋದನ್ನು ನಾವು ಮರೆತೇಬಿಟ್ಟಿದ್ದೇವೆ. ಜಸ್ಟ್ ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರದು ಅನ್ನೋ ಒಂದೇ ಕಾರಣಕ್ಕೆ ಅವರನ್ನು ಇನ್ನಷ್ಟು ಕಷ್ಟಗಳಿಗೆ ದೂಡುತ್ತಿದ್ದೇವೆ. ನಾವು ಭಾವುಕರಾಗಿ ಅವರನ್ನು ಬಲಹೀನರನ್ನಾಗಿಸುತ್ತಿದ್ದೇವೆ. ನಿಜವಾದ ಪೋಷಕತ್ವ ಅಂದರೆ, ಮಕ್ಕಳ ಓದು ಮಾತ್ರವಲ್ಲ; ಅವರ ಒಡನಾಟಗಳೂ ನಮಗೆ ಗೊತ್ತಾಗಬೇಕು. ಅವರ ನಗು ಮಾತ್ರವಲ್ಲ, ಸಂಕಟಗಳೂ ಅರ್ಥವಾಗಬೇಕು. ಒತ್ತಡಗಳು ನಮಗೆ ಮಾತ್ರವಲ್ಲ, ಮಕ್ಕಳಿಗೂ ಇವೆ ಅನ್ನೋದನ್ನು ಗ್ರಹಿಸಬೇಕು. ಸೋಶಿಯಲ್‌ ಮತ್ತು ಡಿಜಿಟಲ್‌ ಮೀಡಿಯಾ ಎಂಬ ಅಪಾಯಕಾರಿ ವೇದಿಕೆ ನಮ್ಮ ಮಕ್ಕಳ ಮಗ್ಗುಲಲ್ಲೇ ಇದೆ ಅನ್ನೋ ಎಚ್ಚರಿಕೆ ಬೇಕು. ನಾವು ಅವರ ಪಾಲಿಗೆ ಹೆತ್ತವರು ಮಾತ್ರವಲ್ಲ, ಒಬ್ಬ ಗೆಳೆಯ, ಒಂದು ಸಿಸಿ ಕ್ಯಾಮೆರಾ ಆಗದಿದ್ದರೆ, ಒಬ್ಬ ಮಾರ್ಗದರ್ಶಕರಾಗಿ ಮುಂದುವರಿಯದಿದ್ದರೆ, ಮೇಲಿನ ಘಟನೆಗಳು ನಮ್ಮ ನಿಮ್ಮ ಮನೆಯಲ್ಲಿಯೂ ಆಗಿಬಿಡಬಹುದು.

ಮಕ್ಕಳು ಅಮಾಯಕರಲ್ಲ!:

ನೆನಪಿರಲಿ, ಮಕ್ಕಳು ನಾವು ನೋಡದ್ದನ್ನೂ ನೋಡುತ್ತಿದ್ದಾರೆ. ನಮಗಿಂತ ಹೆಚ್ಚೆಚ್ಚು ತಿಳಿಯುತ್ತಿದ್ದಾರೆ. ಇದು ಅವರಿಗೆ ಗೊತ್ತಾಗಲ್ಲ ಅಂತ ನೀವು ಭಾವಿಸಿದರೆ ಅದು ನಿಮ್ಮ ಅಮಾಯಕತೆಯೇ ಹೊರತು ಮಕ್ಕಳದ್ದಲ್ಲ! ಒಮ್ಮೆ ಅವರ ಜೊತೆ ಕೂತು ಸುಮ್ನೆ ಮಾತನಾಡಿ ನೋಡಿ; ಅವರು ನಿಮಗೆ ಗೊತ್ತಿಲ್ಲದ ಹಾಡು, ಸಿನಿಮಾಗಳ ಬಗ್ಗೆ ಮಾತನಾಡ್ತಾರೆ. ಹೊಸ ಗ್ಯಾಡ್ಜೆಟ್ಸ್‌, ಹೊಸ ಕಾಸ್ಟೂಮ್ಸ್, ಟ್ರೆಂಡೀ ತಿನಿಸು, ವಿರಾಟ್‌ ಕೊಹ್ಲಿ ಡಯೆಟ್‌, ಧೋನಿಯ ಬ್ರ್ಯಾಂಡ್‌ ವ್ಯಾಲ್ಯೂ, ಮೋದಿಯ ಫಾಲೋವರ್ಸ್‌, ರಶ್ಮಿಕಾ ಯಾಕೆ ಟ್ರೋಲ್‌ ಆಗ್ತಿದ್ದಾಳೆ, ಹೊಸ ವೈರಲ್‌ ವಿಡಿಯೋ, ಎಕ್ಸ್‌ ನಲ್ಲಿ ಯಾವ ವಿಷಯ ಟ್ರೆಂಡಿಂಗಿನಲ್ಲಿದೆ, ಸಕ್ಸ್ ಅಂದ್ರೇನು? ಡ್ರಗ್ಸ್ ಅಂದ್ರೇನು? ಪ್ರೀತ್ಸೋದು ಹೇಗೆ? ಸಾಯೋದು ಹೇಗೆ? ಎಂಬೆಲ್ಲಾ ಸಂಗತಿಗಳ ಬಗ್ಗೆ ನಮಗಿಂತ ಹೆಚ್ಚಿನ ಮತ್ತು ನಿಖರ ಮಾಹಿತಿ ಅವರಿಗಿದೆ. ಆದರೆ ಅದನ್ನೆಲ್ಲಾ ಕೇಳಲು ನಮಗೆಲ್ಲಿ ಸಮಯವಿದೆ? ನಾವು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕಾರಣಕ್ಕೆ ವಿಶ್ರಾಂತಿ ಮರೆತು ದುಡಿಯುತ್ತಿದ್ದೇವೆ. ಮಕ್ಕಳನ್ನೇನೋ ಹೆತ್ತಿದ್ದೇವೆ, ಆದರೆ ಅವರನ್ನು ನೋಡಿಕೊಳ್ಳಲು ನಮಗೆ ಸಮಯವಿಲ್ಲ.ಹಾಂ… ನಮ್ಮಲ್ಲಿ ಸಿಗದ ಸಮಯವನ್ನು ಮಕ್ಕಳು ಬೇರೆ ಕಡೆ ಹುಡುಕಿಕೊಳ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *