ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿ ರೈಲಿನಲ್ಲಿ ನಿಗೂಢವಾಗಿ ನಾಪತ್ತೆ

ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ರೈಲಿನಲ್ಲಿ ನಿಗೂಢವಾಗಿ ನಾಪತ್ತೆಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅರ್ಚನಾ ತಿವಾರಿ (28) ನಾಪತ್ತೆಯಾದ ಯುವತಿ. ಇಂದೋರ್- ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಈ ಘಟನೆ ನಡೆದಿದೆ.
ರೈಲು ಭೋಪಾಲ್ ಸಮೀಪ ಇದ್ದಾಗ ಆಕೆ ಮನೆಯವರೊಂದಿಗೆ ಕೊನೆಯದಾಗಿ ಮಾತನಾಡಿದ್ದಳು.
ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಅರ್ಚನಾ ತಿವಾರಿ ಕಟ್ನಿ ರೈಲು ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಅವಳು ಇಳಿಯದೇ ಇದ್ದುದರಿಂದ ಗಾಬರಿಯಾದ ಪೋಷಕರು ಆಕೆಯನ್ನು ಹುಡುಕಲು ಪ್ರಾರಂಭಿಸಿದರು. ಆದರೆ ರೈಲು ಹೊರಡಲು ಸಿದ್ಧವಾಗಿದ್ದರಿಂದ ಮುಂದಿನ ರೈಲು ನಿಲ್ದಾಣವಾದ ಉಮಾರಿಯದಲ್ಲಿ ಹುಡುಕಲು ಪ್ರಾರಂಭಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಟ್ನಿ ರೈಲ್ವೆ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಅನಿಲ್ ಮರಾವಿ, ಇಂದೋರ್- ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ ಅರ್ಚನಾ ಪ್ರಯಾಣ ನಡೆಸುತ್ತಿದ್ದು, ಇಂದೋರ್‌ನಿಂದ ಆಗಸ್ಟ್ 7ರಂದು ಬೆಳಗ್ಗೆ ತನ್ನ ಊರಿಗೆ ಹೊರಟಿದ್ದಳು. ಇದಕ್ಕಾಗಿ ಬಿ -3 ಕೋಚ್ ಹತ್ತಿದ್ದಳು ಎಂದು ತಿಳಿಸಿದ್ದಾರೆ.
ಕೊನೆಯದಾಗಿ ಅರ್ಚನಾ ಭೋಪಾಲ್‌ನ ರಾಣಿ ಕಮಲಪತಿ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಭೋಪಾಲ್ ಬಳಿಕ ಆಕೆಯನ್ನು ಇತರ ಪ್ರಯಾಣಿಕರು ಕೂಡ ನೋಡಲಿಲ್ಲ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ರೈಲ್ವೆ ಪೊಲೀಸರು, ತೀವ್ರ ತನಿಖೆ ಪ್ರಾರಂಭಿಸಿದ್ದಾರೆ.
ಕಟ್ನಿ ನ್ಯಾಯಾಲಯದಲ್ಲಿ ವಕೀಲರಾಗಿರುವ ಮತ್ತು ಅರ್ಚನಾ ಅವರ ತಂದೆ ಬಾಬು ಪ್ರಕಾಶ್ ತಿವಾರಿ, ತಮ್ಮ ಮಗಳು ಮೊದಲಿನಿಂದಲೂ ಅಧ್ಯಯನದಲ್ಲಿ ಉತ್ತಮಳಾಗಿದ್ದಳು. ಅವಳು ಜಬಲ್ಪುರದಲ್ಲಿ ಎಲ್‌ಎಲ್‌ಎಂ ಮಾಡಿದ್ದು, ಬಳಿಕ ಮೂರು ವರ್ಷಗಳ ಕಾಲ ಜಬಲ್ಪುರ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಳು. ಕಳೆದ ಎಂಟು ತಿಂಗಳುಗಳಿಂದ ಇಂದೋರ್‌ನಲ್ಲಿಯೇ ಇದ್ದು ಸಿವಿಲ್ ನ್ಯಾಯಾಧೀಶರಾಗಲು ತಯಾರಿ ನಡೆಸುತ್ತಿದ್ದಳು ಎಂದು ತಿಳಿಸಿದ್ದಾರೆ.
