ಸಿರಿಯಾ ಸ್ವೈದಾ ಆಸ್ಪತ್ರೆ ಸಿಬ್ಬಂದಿ ಹ*ತ್ಯೆ: ಡ್ರೂಜ್-ಬೆಡೋಯಿನ್ ಸಂಘರ್ಷ ತೀವ್ರ

ಸಿರಿಯಾ: ಸಿರಿಯಾದಲ್ಲಿ ಸುಮಾರು ಒಂದು ದಶಕದ ಅಂತರ್ಯುದ್ಧವು ಇಡೀ ದೇಶವನ್ನು ಧ್ವಂಸಗೊಳಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ, ಸ್ವೈದಾ ಪ್ರಾಂತ್ಯದಲ್ಲಿ ಡ್ರೂಜ್ ಸಮುದಾಯ ಮತ್ತು ಸುನ್ನಿ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವಿನ ಭೀಕರ ಸಂಘರ್ಷವು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಸಿರಿಯಾದ ಸ್ವೈದಾ ನಗರದಲ್ಲಿನ ಹಿಂಸಾಚಾರದ ನಡುವೆ ಹೃದಯವಿದ್ರಾವಕ ವೀಡಿಯೊ ಹೊರಹೊಮ್ಮಿದೆ. ಈ ವೀಡಿಯೊದಲ್ಲಿ, ಸ್ವೈದಾ ಆಸ್ಪತ್ರೆಯ ನೌಕರರನ್ನು ಸಶಸ್ತ್ರ ಗುಂಪುಗಳು ಕೊಲ್ಲುತ್ತಿರುವುದನ್ನು ತೋರಿಸಲಾಗಿದೆ.

ಈ ವೀಡಿಯೊವನ್ನು ಸಿರಿಯನ್ ಮಾನವ ಹಕ್ಕುಗಳ ಸಂಘಟನೆ ಎಸ್ಒಎಚ್ಆರ್ ಬಿಡುಗಡೆ ಮಾಡಿದೆ, ಈ ವೀಡಿಯೊದಲ್ಲಿ, ಉಗ್ರಗಾಮಿ ಗುಂಪುಗಳು ಆಸ್ಪತ್ರೆ ಸಿಬ್ಬಂದಿಯನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿರುವುದನ್ನು ಕಾಣಬಹುದು. ಟಿವಿ9 ಕನ್ನಡವು ವೀಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
ವಿಡಿಯೋದಲ್ಲಿರುವುದೇನು?
ವಿಡಿಯೋದಲ್ಲಿ ದುಷ್ಕರ್ಮಿಗಳು ಹಲವು ಆಸ್ಪತ್ರೆ ಸಿಬ್ಬಂದಿಗಳನ್ನು ಬಂದೂಕಿನಿಂದ ಬೆದರಿಸಿ ನೆಲದ ಮೇಲೆ ಮಂಡಿಯೂರಿ ಕೂರುವಂತೆ ಮಾಡಿದ್ದರು. ಅವರ ಸುತ್ತಲೂ ಹಲವಾರು ಶಸ್ತ್ರಸಜ್ಜಿತ ವ್ಯಕ್ತಿಗಳಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ಗುಂಡು ಹಾರಿಸಲಾಗುತ್ತದೆ. 70 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಸ್ವೈದಾ ನಗರವು ಇನ್ನೂ ಡ್ರೂಜ್ ಸಮುದಾಯದ ನಿಯಂತ್ರಣದಲ್ಲಿದೆ ಎಂಬುದು ಗಮನಾರ್ಹ, ಆದರೂ ಸರ್ಕಾರವು ಹತ್ತಿರದ ಅನೇಕ ಡ್ರೂಜ್ ಗ್ರಾಮಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಸ್ವೈದಾ ಡ್ರೂಜ್ ಸಮುದಾಯದ ಧಾರ್ಮಿಕ ನಾಯಕ ಶೇಖ್ ಹಿಕ್ಮತ್ ಅಲ್-ಹಿಜ್ರಿ ಈ ಹಿಂಸಾಚಾರದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಡ್ರೂಜ್ ಸಮುದಾಯವು ಇಸ್ರೇಲ್‌ನಲ್ಲಿ ಅಲ್ಪಸಂಖ್ಯಾತರಾಗಿದ್ದು, ಅನೇಕ ಸದಸ್ಯರು ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
