ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕ ನೆಲಸಮ:ಅಭಿಮಾನಿಗಳಿಂದ ಅಸ್ತಿ ಹಸ್ತಾಂತರಕ್ಕೆ ಬೇಡಿಕೆ

ವಿಷ್ಣುವರ್ಧನ್ ಸ್ಮಾರಕ ವಿಚಾರ ವರ್ಷಗಳಿಂದಲೂ ವಿವಾದಗಳಲ್ಲಿದೆ. ಅಭಿಮಾನಿಗಳು ಅಭಿಮಾನ್ ಸ್ಟುಡಿಯೋನಲ್ಲಿಯೇ ಸ್ಮಾರಕ ನಿರ್ಮಾಣ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಬಾಲಣ್ಣ ಅವರ ಕುಟುಂಬಸ್ಥರು ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದರು. ಇನ್ನು ವಿಷ್ಣುವರ್ಧನ್ ಕುಟುಂಬದವರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದರು ಅಂತೆಯೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಈಗಾಗಲೇ ಆಗಿದೆ. ಆದರೆ ಇದೀಗ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ನೆಲಸಮಗೊಳಿಸಲಾಗಿದ್ದು, ಇದು ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಷ್ಣುವರ್ಧನ್ ಅಸ್ತಿಯನ್ನು ನಮಗೆ ಕೊಡಿ ಎಂದು ಇದೀಗ ಅಭಿಮಾನಿಗಳು ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿರುವ ಪೊಲೀಸರು. ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಪುಣ್ಯಭೂಮಿಯನ್ನು ನೆಲಸಮಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಮೇರುನಟನೊಬ್ಬನ ಸಮಾಧಿಯನ್ನು ನೆಲಸಮಗೊಳಿಸಿದ್ದು ಕರ್ನಾಟಕ ಸಾಂಸ್ಕೃತಿಕ ಪರಂಪರೆಗೆ ಮುಜುಗರವೇ ಸರಿ. ಇಂಥಹಾ ಘಟನೆಗಳು ಇನ್ನಾದರೂ ನಿಲ್ಲಲಿ ಎಂದು ಆಶಿಸುತ್ತಾ, ಪುಣ್ಯಭೂಮಿಯಲ್ಲಿ ಇದ್ದ ವಿಷ್ಣುವರ್ಧನ್ ಅಸ್ತಿಯನ್ನು ಅಭಿಮಾನಿಗಳಿಗೆ ಹಸ್ತಾಂತರಿಸಬೇಕು ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.
‘ಆ ಅಸ್ತಿಯ ಜೊತೆ ಅಭಿಮಾನಿಗಳಿಗೆ ಭಾವನಾತ್ಮಕ ಸಂಬಂಧ ಇರುವುದರಿಂದ ಹಾಗೂ ಆ ಅಸ್ತಿಗೆ ಪ್ರತಿವರ್ಷವೂ ಪೂಜೆ, ಸಂಸ್ಕಾರ ಮಾಡುವ ಉದ್ದೇಶ ಇರುವ ಕಾರಣ ಅದನ್ನು ಅಭಿಮಾನಿಗಳಿಗೆ ಹಸ್ತಾಂತರಿಸಬೇಕು ಎಂದು ಕೋರುತ್ತೇವೆ. ಒಂದೊಮ್ಮೆ ಆ ಅಸ್ತಿಯನ್ನು ಅವರು ನಾಶಪಡಿಸಿದ್ದರೆ ಕಾನೂನು ಹೋರಾಟ ಮಾಡುತ್ತೇವೆ’ ಎಂದು ಕೆಂಗೇರಿ ಪೊಲೀಸರಿಗೆ ಅಭಿಮಾನಿಗಳು ಬರೆದಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಭಿಮಾನ್ ಸ್ಟುಡಿಯೋ ವಿವಾದ ವರ್ಷಗಳಿಂದಲೂ ನಡೆಯುತ್ತಲೇ ಇದೆ. ಹಲವು ಬಾರಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಸ್ವತಃ ಅಭಿಮಾನಿಗಳು ಸಹ ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯವು ಅಭಿಮಾನಿಗಳ ಮನವಿಯನ್ನು ಸ್ಪಷ್ಟವಾಗಿ ನಿರಾಕರಿಸಿತು. ಬಾಲಣ್ಣ ಅವರ ಕುಟುಂಬದವರು ಒಪ್ಪಿದರಷ್ಟೆ ಅಲ್ಲಿ ಸ್ಮಾರಕ ನಿರ್ಮಾಣ ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಯ್ತು. ಕೊನೆಗೆ ಈಗಾಗಲೇ ನಿರ್ಮಾಣವಾಗಿದ್ದ ಸಮಾಧಿಯನ್ನು ತೆರವು ಗೊಳಿಸುವ ಅಥವಾ ಉಳಿಸಿಕೊಳ್ಳುವ ಅಧಿಕಾರವೂ ಬಾಲಣ್ಣ ಕುಟುಂಬದವರದ್ದೇ ಆಯ್ತ. ಇದೀಗ ಸಮಾಧಿಯನ್ನು ನೆಲಸಮಗೊಳಿಸಲಾಗಿದೆ.
