ಬೆಂಗಳೂರಿನಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣಕ್ಕೆ ಅನುಮೋದನೆ

ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಬೆಂಗಳೂರಿನ ಹೊರವಲಯದಲ್ಲಿ ಕ್ರೀಡಾಂಗಣ ನಿರ್ಮಿಸಲು ಹಸಿರು ನಿಶಾನೆ ತೋರಿದೆ. ಬೊಮ್ಮಸಂದ್ರದಲ್ಲಿರುವ ಸೂರ್ಯ ಸಿಟಿಯಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಅತ್ಯಾಧುನಿಕ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುವ ಕರ್ನಾಟಕ ವಸತಿ ಮಂಡಳಿಯ (KHB) ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 8 ರಂದು ಅನುಮೋದನೆ ನೀಡಿದ್ದಾರೆ. ಮಾಹಿತಿಯ ಪ್ರಕಾರ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣ ದೇಶದ ಎರಡನೇ ಅತಿದೊಡ್ಡ ಕ್ರೀಡಾಂಗಣವಾಗಲಿದೆ ಎಂಬ ಮಾಹಿತಿ ಇದೆ. ಪ್ರಸ್ತುತ 1,32,000 ಆಸನ ಸಾಮರ್ಥ್ಯ ಹೊಂದಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ದೇಶದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ.

ವಾಸ್ತವವಾಗಿ ರಾಜ್ಯದಲ್ಲಿ ಯಾವುದೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಈವೆಂಟ್ಗಳು ನಡೆದರೆ, ಅದಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿತ್ತು. ಕೇವಲ 17 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಚಿನ್ನಸ್ವಾಮಿ ಕ್ರೀಡಾಂಗಣ ಕೇವಲ 32 ಸಾವಿರ ಆಸನ ಸಾಮರ್ಥ್ಯವನ್ನು ಹೊಂದಿದೆ. ಬೆಳೆಯುತ್ತಿರುವ ಕ್ರಿಕೆಟ್ನ ಜನಪ್ರಿಯತೆಯನ್ನು ನೋಡಿದಾಗ ಮುಂದಿನ ದಿನಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಮುಖ ಪಂದ್ಯಾವಳಿಗಳನ್ನು ಆಯೋಜಿಸುವುದು ಕಷ್ಟ ಸಾಧ್ಯ.
ಕಾಲ್ತುಳಿತದ ಬಳಿಕ ಎಚ್ಚೆತ್ತ ಸರ್ಕಾರ
ಇದಕ್ಕೆ ಪೂರಕವೆಂಬಂತೆ ಕಳೆದ ಜೂನ್ 4 ರಂದು ಆರ್ಸಿಬಿ ಸಂಭ್ರಮಾಚರಣೆಯ ಸಮಯದಲ್ಲಿ ಕಾಲ್ತುಳಿತ ಉಂಟಾಗಿ 11 ಅಮಾಯಕರು ಜೀವ ಬಿಟ್ಟಿದ್ದರು. ಹಾಗೆಯೇ 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಬಳಿಕ ರಾಜ್ಯ ಸರ್ಕಾರ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ತನಿಖೆಯನ್ನು ನಡೆಸಿತ್ತು. ಈ ತನಿಖಾ ವರದಿಯ ಪ್ರಕಾರ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಕ್ತವಾಗಿಲ್ಲ ಎಂಬ ವರದಿ ನೀಡಿತ್ತು.
ಇದೇ ಕಾರಣದಿಂದ ಕೆಲವೇ ದಿನಗಳಲ್ಲಿ ಆರಂಭವಾಗಬೇಕಿದ್ದ ಮಹಾರಾಜ ಟಿ20 ಟೂರ್ನಿ ಕೂಡ ಇದೀಗ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಗೊಂಡಿದೆ. ಇದು ಮಾತ್ರವಲ್ಲದೆ, ಮುಂಬರುವ ಮಹಿಳಾ ಏಕದಿನ ವಿಶ್ವಕಪ್ನ ಉದ್ಘಾಟನಾ ಪಂದ್ಯ ಸೇರಿದಂತೆ ಸೆಮಿಫೈನಲ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಆ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
100 ಎಕರೆ ಪ್ರದೇಶದಲ್ಲಿ ಕ್ರೀಡಾ ಕೇಂದ್ರ
ಇದೆಲ್ಲ ಕಾರಣಗಳಿಂದಾಗಿ ವಿಶಾಲವಾದ ಪಾರ್ಕಿಂಗ್ ಸ್ಥಳ ಮತ್ತು ಹೆಚ್ಚಿನ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣವನ್ನು ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಬೇಕೆಂಬ ಕೋರಿಕೆ ಹೆಚ್ಚಾಗಿತ್ತು. ಇದೀಗ ಬೊಮ್ಮಸಂದ್ರದಲ್ಲಿರುವ ಸೂರ್ಯ ಸಿಟಿಯಲ್ಲಿ 100 ಎಕರೆ ಪ್ರದೇಶದಲ್ಲಿ ಕ್ರೀಡಾ ಕೇಂದ್ರವನ್ನು ನಿರ್ಮಿಸಲು ಕೆಎಚ್‌ಬಿ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಕ್ರೀಡಾಂಗಣಕ್ಕೆ ಅಂದಾಜು ₹1,650 ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ಹಣ ಸಹಾಯವನ್ನು ಪಡೆಯದೆ ನಿರ್ಮಾಣ ಮಾಡಲು ಕರ್ನಾಟಕ ಹೌಸಿಂಗ್ ಬೋರ್ಡ್ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತಾವಿತ ಕ್ರೀಡಾ ಕೇಂದ್ರವು ಕ್ರಿಕೆಟ್ ಸೇರಿದಂತೆ ಎಂಟು ಒಳಾಂಗಣ ಮತ್ತು ಎಂಟು ಹೊರಾಂಗಣ ಕ್ರೀಡೆಗಳಿಗೆ ಸೌಲಭ್ಯಗಳನ್ನು ಹೊಂದಿರುತ್ತದೆ. ಈ ಕೇಂದ್ರವು ಅತ್ಯಾಧುನಿಕ ಜಿಮ್‌ಗಳು, ತರಬೇತಿ ಸೌಲಭ್ಯಗಳು, ಈಜುಕೊಳ, ಅತಿಥಿ ಗೃಹಗಳು, ಹಾಸ್ಟೆಲ್‌ಗಳು, 3 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್‌ಗಳು ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸಬಹುದಾದ ಸಮಾವೇಶ ಸಭಾಂಗಣವನ್ನು ಸಹ ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.
