ಗುಂಡಿ ರಸ್ತೆಗಳ ವಿರುದ್ಧ ವರ್ತೂರು ನಾಗರಿಕರ ಕ್ರಿಯೇಟಿವ್ ಪ್ರತಿಭಟನೆ: ಟ್ಯಾಕ್ಸ್ ರಿಫಂಡ್ ಡಿಮ್ಯಾಂಡ್ ವೈರಲ್

ಬೆಂಗಳೂರು: ಬೆಂಗಳೂರು ಎಂದ ಕೂಡಲೇ ನೆನಪಾಗೋದೆ ನೂರಾರು ಜನರ ಬದುಕಿಗೆ ಆಸರೆಯಾಗಿರುವ ಸುಂದರ ನಗರ ಹಾಗೂ ಅಭಿವೃದ್ಧಿಯತ್ತ ಸಾಗುತ್ತಿರುವ ಮಾಯನಗರಿ. ಆದರೆ ಮಳೆಗಾಲ ಶುರುವಾಗುತ್ತಿದ್ದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ರಸ್ತೆ ತುಂಬೆಲ್ಲಾ ಗುಂಡಿಗಳದ್ದೇ ರಾಶಿ. ಸರಿಯಾದ ಮೂಲಸೌಕರ್ಯ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದೀಗ ಬೆಂಗಳೂರಿನ ವರ್ತೂರು ಬಳಿಯ ಬಾಳಗೆರೆಯ ನಾಗರಿಕರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಬಿತ್ತಿಪತ್ರಗಳನ್ನು ಹಿಡಿದು ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ್ದು, ತೆರಿಗೆ ಹಣವನ್ನು ನಮಗೆ ವಾಪಸ್ ಕೊಡಿ ನಾವೇ ಬೆಂಗಳೂರು ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳಿದ್ದಾರೆ. ಪ್ರತಿಭಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಸಂಚಾರ ದಟ್ಟನೆ, ಗುಂಡಿ ಬಿದ್ದ ರಸ್ತೆಗಳು ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ದೀರ್ಘ ಕಾಲದ ವಿಳಂಬದಿಂದಾಗಿ ನಗರದಲ್ಲಿ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಬಿತ್ತಿಪತ್ರ ಹಿಡಿದು ನಾಗರಿಕರು ವಿವಿಧೆಡೆ ಪ್ರತಿಭಟಿಸಿರುವುದನ್ನು ನೋಡಬಹುದು. ರೀಫಂಡ್ ಟ್ಯಾಕ್ಸ್, ನಾವೇ ಬೆಂಗಳೂರನ್ನು ಅಭಿವೃದ್ಧಿ ಪಡಿಸ್ತೇವೆ ಎಂದು ಹೇಳಿದ್ದಾರೆ. ನಾವು ತೆರಿಗೆ ಕಟ್ಟುತ್ತೇನೆ, ನಾವು ಎಲ್ಲಾ ಭಾಷೆಗಳನ್ನು ಮಾತನಾಡುತ್ತೇನೆ. ಇಷ್ಟೆಲ್ಲಾ ಮಾಡಿಯೂ ನಮಗೆ ಸಿಕ್ಕಿರೋದು ಗುಂಡಿಬಿದ್ದ ರಸ್ತೆಗಳು, ಪ್ರವಾಹದ ರಸ್ತೆಗಳು ಮಾತ್ರ. ಸರ್ಕಾರ ಹಾಗೂ ಬಿಬಿಎಂಪಿ ಮೂಲಸೌಕರ್ಯ ಅಭಿವೃದ್ದಿಪಡಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ ಅಂದ್ರೆ ನಮ್ಮ ತೆರಿಗೆ ಹಣವನ್ನು ನಮಗೆ ವಾಪಸ್ ಕೊಡಿ, ನಾವೇ ನಮ್ಮ ಸಿಟಿಯನ್ನು ನಾವೇ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿರುವುದನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಸರ್ಕಾರಕ್ಕೆ ಈ ರೀತಿ ಬಿಸಿ ಮುಟ್ಟಿಸಬೇಕು ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು, ನಾಗರಿಕರ ಕಷ್ಟಗಳು ಹಾಗೂ ಸಮಸ್ಯೆಗಳು ಸರ್ಕಾರಕ್ಕೆ ತಿಳಿಯುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ರೀತಿ ಪ್ರತಿಭಟನೆ ದೇಶದಾದಂತ್ಯ ಮಾಡಬೇಕು, ಯಾವುದೇ ಕಾರಣಕ್ಕೂ ತೆರಿಗೆ ಪಾವತಿಸಬಾರದು ಎಂದು ಕಾಮೆಂಟ್ ಮಾಡಿ ಹೇಳಿದ್ದಾರೆ.
