28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆ

ಇಸ್ಲಾಮಾಬಾದ್: ಕೆಲವೊಂದು ನಂಬಲು ಅಸಾಧ್ಯವಾಗಿದ್ದರೂ ನಂಬಲೇಬೇಕಾಗುತ್ತದೆ. ಜಗತ್ತಿನಲ್ಲಿ ಅಂತಹ ಹಲವು ವಿಚಾರಗಳಿವೆ. ಕಳೆದ 28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆಯಾಗಿದೆ. ಹಿಮನದಿಯಲ್ಲಿ ಆಶ್ಚರ್ಯಕರವಾಗಿ ಚೆನ್ನಾಗಿ ಸಂರಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಿಬಿಸಿ ವರದಿ ಮಾಡಿದಂತೆ, ಹಿಂಸಾತ್ಮಕ ಸಂಘರ್ಷದಿಂದ ತಪ್ಪಿಸಿಕೊಳ್ಳಲು ನಾಸಿರುದ್ದೀನ್ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾಣೆಯಾಗಿದ್ದರು. ಜುಲೈ 31 ರಂದು, ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೊಹಿಸ್ತಾನ್ ಪ್ರದೇಶದ ನಿವಾಸಿಗಳು ಲೇಡಿ ಮೆಡೋಸ್ ಹಿಮನದಿಯಲ್ಲಿ ಅವರ ಅವಶೇಷಗಳು ಸಿಕ್ಕಿವೆ. ಶವದೊಂದಿಗೆ ದೊರೆತ ಗುರುತಿನ ಚೀಟಿಯು ಅದು ನಸೀರುದ್ದೀನ್‌ಗೆ ಸೇರಿದ್ದು ಎಂದು ದೃಢಪಡಿಸಿದೆ.
ನಾನು ನೋಡಿದ್ದು, ನಂಬಲಸಾಧ್ಯವಾಗಿತ್ತು, ದೇಹವು ಹಾಗೇ ಇತ್ತು, ಬಟ್ಟೆಗಳು ಕೂಡ ಹರಿದಿರಲಿಲ್ಲ ಎಂದು ಸ್ಥಳೀಯರಾದ ಒಮರ್ ಖಾನ್ ತಿಳಿಸಿದ್ದಾರೆ.ಪೊಲೀಸರು ಗುರುತನ್ನು ದೃಢಪಡಿಸಿದ ಬಳಿಕ ನಿವಾಸಿಗಳು ನಾಸಿರುದ್ದೀನ್ ಕಣ್ಮರೆಯಾಗಿದ್ದ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡರು. ಪೊಲೀಸರ ಪ್ರಕಾರ, ಜೂನ್ 1997ರಲ್ಲಿ ಹಿಮಬಿರುಗಾಳಿ ಸಮಯದಲ್ಲಿ ನಾಸೀರುದ್ದೀನ್ ಹಿಮನದಿಯ ಬಿರುಕಿನಲ್ಲಿ ಬಿದ್ದು ಕಾಣೆಯಾದರು.
1997ರಲ್ಲಿ ನಾಸೀರುದ್ದೀನ್ ತನ್ನ ಸಹೋದರ ಕತಿರುದ್ದೀನ್ ಜತೆ ಕುದುರೆ ಮೇಲೆ ಪ್ರಯಾಣಿಸುತ್ತಿದ್ದಾಗ ಕಂದಕಕ್ಕೆ ಬಿದ್ದಿದ್ದರು. ಗ್ರಾಮದ ವಿವಾದಿಂದ ತಪ್ಪಿಸಿಕೊಳ್ಳಲು ಇಬ್ಬರೂ ಪರ್ವತ ಏರಿದ್ದರು. ಕತಿರುದ್ದೀನ್ ಬದುಕುಳಿದರೂ, ನಾಸಿರುದ್ದೀನ್ ಉಳಿಯಲಿಲ್ಲ. ತಮ್ಮ ಕುಟುಂಬವು ಇಷ್ಟು ವರ್ಷಗಳಲ್ಲಿ ಅವರನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನ ಮಾಡಿತ್ತು.
ಅವರ ದೇಹ ಎಲ್ಲಾದರೂ ಸಿಗಬಹುದೇ ಎಂದು ಕುಟುಂಬದ ಕೆಲವು ಸದಸ್ಯರು ಹಿಮನದಿ ಬಳಿ ತೆರಳಿದ್ದರು. ಆದರೆ ಎಲ್ಲೂ ಕಾಣದ ಕಾರಣ ಪ್ರಯತ್ನವನ್ನೇ ಬಿಟ್ಟಿದ್ದರು. ಪತ್ತೆಯಾದ ನಂತರ ಕುಟುಂಬವು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿತು, ಅಂತಿಮವಾಗಿ ನಾಸಿರುದ್ದೀನ್ ದೇಹ ಸಿಕ್ಕಿರುವುದು ನೆಮ್ಮದಿಯ ಭಾವವನ್ನುಂಟು ಮಾಡಿದೆ ಎಂದು ಅವರ ಸಂಬಂಧಿ ಹೇಳಿದ್ದಾರೆ.
