ಬಡತನ ಮೆಟ್ಟಿ ನಿಂತ ದೇವದಾಸಿ ಕುಟುಂಬದ ಕಾಮಾಕ್ಷಿ: ಇಂಗ್ಲೆಂಡ್ ಪಿಎಚ್.ಡಿ ವ್ಯಾಸಂಗಕ್ಕೆ ಅರ್ಹತೆ

ಹೊಸಪೇಟೆ : ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ದೇವದಾಸಿ ಕುಟುಂಬದಲ್ಲಿ ಜನಿಸಿದ ಕಾಮಾಕ್ಷಿ ಅವರು ಕಿತ್ತು ತಿನ್ನುವ ಬಡತನದಲ್ಲೇ ಪದವಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಇದೀಗ ಅತ್ಯಂತ ಕಠಿಣವಾದ ಅಂತರರಾಷ್ಟ್ರೀಯ ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ (ಐಇಎಲ್ಟಿಎಸ್) ಉತ್ತೀರ್ಣರಾಗಿ ಇಂಗ್ಲೆಂಡ್ನ ಸಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ವ್ಯಾಸಂಗಕ್ಕೆ ಅರ್ಹತೆ ಗಳಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ‘ಪ್ರಬುದ್ಧ’ ಯೋಜನೆಯಡಿಯಲ್ಲಿ ವಿದೇಶದಲ್ಲಿ ಉನ್ನತ ಸಂಶೋಧನೆ ನಡೆಸಲು ಆಯ್ಕೆಯಾದ ದೇವದಾಸಿ ಕುಟುಂಬದ ಮೊದಲ ಹೆಣ್ಣುಮಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಾಮಾಕ್ಷಿ, ಮುಂದಿನ ತಿಂಗಳು ಇಂಗ್ಲೆಂಡ್ನತ್ತ ಪ್ರಯಾಣ ಬೆಳೆಸಲಿದ್ದಾರೆ.
ಕಾಮಾಕ್ಷಿ ಅವರು ಈ ಹಂತಕ್ಕೆ ತಲುಪುವ ಮೊದಲು ಅವರು ಸವೆಸಿದ ಹಾದಿ ಬಹಳ ಕಷ್ಟಕರವಾಗಿತ್ತು. ಅಮ್ಮನ ಕೂಲಿ ಕೆಲಸದಿಂದ ಬರುವ ಅರೆಬರೆ ಕೂಲಿಗಿಂತಲೂ ಹೆಚ್ಚು ನೋವು ಕೊಟ್ಟದ್ದು ‘ಅಪ್ಪ ಯಾರು’ ಎಂಬ ಕೊಂಕು ನುಡಿ. ಶಾಲೆ, ಕಾಲೇಜುಗಳಲ್ಲಿ ಇದೇ ಮುಜುಗರ ಅನಭವಿಸುತ್ತಲೇ ಬೆಳೆದ ಅವರು ತಮಗಾದ ನೋವು ಇತರರಿಗೆ ಆಗಬಾರದು ಎಂದು ಬಲವಾಗಿ ನಂಬಿದ್ದರು. ಅದಕ್ಕಾಗಿಯೇ ಇದೀಗ ಜಾರಿಗೆ ಬರುತ್ತಿರುವ ದೇವದಾಸಿ ಮಕ್ಕಳಿಗೆ ಪಿತೃತ್ವ ಹಕ್ಕು ಮತ್ತು ಸಮಗ್ರ ಪುನರ್ವಸತಿ ಕಲ್ಪಿಸಲು ಅವಕಾಶ ನೀಡುವ ಮಸೂದೆ ತಯಾರಾಗುವುದಕ್ಕೆ ಮೊದಲು ನಡೆದ ಸಂಶೋಧನಾ ತಂಡದ ಜತೆಗೆ ಕೆಲಸ ಮಾಡಿದ್ದರು.
ದೇವದಾಸಿ ಕುಟುಂಬದ ಸಾವಿರಾರು ಮಕ್ಕಳು ‘ಅಪ್ಪ ಯಾರು’ ಎಂಬ ಚುಚ್ಚುವ ಮಾತಿನಿಂದ ನೋವು ಅನುಭವಿಸುತ್ತಲೇ ಇದ್ದಾರೆ. ದೇವಸಾಸಿ ಮಕ್ಕಳು ಸ್ವತಃ ಉನ್ನತ ಶಿಕ್ಷಣ ಪಡೆದರೆ ಮಾತ್ರ ತಮ್ಮ ಸಮುದಾಯದಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು ಸ್ವಲ್ಪಮಟ್ಟಿಗಾದರೂ ಸಾಧ್ಯವಾಗಬಹುದು ಎಂದು ನಾನು ಪದವಿ ಹಂತದಲ್ಲೇ ಬಲವಾಗಿ ನಂಬಿದ್ದೆ. ಅದೇ ಕಾರಣಕ್ಕೆ ಸತತ ಪ್ರಯತ್ನ ಮಾಡಿ ಸಸೆಕ್ಸ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದಿದ್ದು ಸಂತಸದ ವಿಷಯವೇ ಸರಿ.
