ಕರ್ನಾಟಕದಲ್ಲಿ ಪಿಎಂ ಕುಸುಮ್ ಯೋಜನೆಗೆ ನೀರಸ ಪ್ರತಿಕ್ರಿಯೆ: ಕಾರಣವೇನು?

ಬೆಂಗಳೂರು: ಸರ್ಕಾರದ ಸೌರ ಯೋಜನೆಗಳಲ್ಲಿ ಒಂದಾದ ಪಿಎಂ ಕುಸುಮ್ ಸ್ಕೀಮ್ ಕೃಷಿಕರಿಗೆ (farmers) ಸೌರವಿದ್ಯುತ್ ಒದಗಿಸುವುದರ ಜೊತೆಗೆ ಆದಾಯ ಪಡೆಯಲೂ ಸಹಾಯವಾಗುತ್ತದೆ. ಈ ಸ್ಕೀಮ್ಗೆ ದೇಶದ ಹಲವು ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕುತ್ತಿದೆಯಾದರೂ, ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ಬಂದಿದೆಯಂತೆ.

ಬಿಜೆಪಿ ಸಂಸದ ಡಾ. ಕೆ ಸುಧಾಕರ್ ಇತ್ತೀಚೆಗೆ ಸಂಸತ್ನಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ ನವೀಕರಣ ಇಂಧನ ಸಚಿವ ಶ್ರೀಪಾದ್ ನಾಯ್ಕ್ ಅವರು, ಕರ್ನಾಟಕದಲ್ಲಿ ಪಿಎಂ ಕುಸುಮ್ ಯೋಜನೆಗೆ (PM Kusum Scheme) ನಿರೀಕ್ಷಿತ ರೀತಿಯಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದಿದ್ದಾರೆ.
2019ರಲ್ಲಿ ಆರಂಭವಾದ ಪಿಎಂ ಕುಸುಮ್ ಸ್ಕೀಮ್ ಗ್ರಾಮೀಣ ಭಾಗದಲ್ಲಿ ಸೌರ ವಿದ್ಯುತ್ ಅಳವಡಿಕೆಗೆ ಉತ್ತೇಜಿಸುವ ಯೋಜನೆಯಾಗಿದೆ. ಇದರಲ್ಲಿ ಎ, ಬಿ ಮತ್ತು ಸಿ ಎನ್ನುವ ಮೂರು ಭಾಗಗಳಿವೆ. ಈ ಪೈಕಿ ಪಿಎಂ ಕುಸುಮ್ನ ಬಿ ಮತ್ತು ಸಿ ಕಾಂಪೊನೆಂಟ್ಗಳು ಕರ್ನಾಟಕದಲ್ಲಿ ಬಹಳ ಕಡಿಮೆ ಅಳವಡಿಕೆ ಆಗಿವೆ. ಕುಸುಮ್-ಎ ಕಾಂಪೊನೆಂಟ್ಗಂತೂ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ ಎನ್ನಲಾಗಿದೆ.
ಏನಿವು ಪಿಎಂ ಕುಸುಮ್ ಸ್ಕೀಮ್ನ ಮೂರು ಕಾಂಪೊನೆಂಟ್ಗಳು?
ಕಾಂಪೊನೆಂಟ್ ಎ: ವಿದ್ಯುತ್ ಸಬ್ಸ್ಟೆಷನ್ಗಳಿಂದ 5 ಕಿಮೀ ಪರಿಧಿಯೊಳಗೆ ಇರುವ ಬಂಜರು ಭೂಮಿಯಲ್ಲಿ 2 ಮೆ.ವ್ಯಾ.ವರೆಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಬಹುದು. ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಡಿಸ್ಕಾಮ್ಗೆ ಮಾರುವ ಮೂಲಕ ಆದಾಯ ಪಡೆಯಬಹುದು.
ಕಾಂಪೊನೆಂಟ್ ಬಿ: ಸೌರ ಕೃಷಿಪಂಪ್ಸೆಟ್ಗಳ ಸ್ಥಾಪನೆಗೆ ಸರ್ಕಾರವು ನೆರವು ಒದಗಿಸುತ್ತದೆ. ಸೌರ ಪಂಪ್ಸೆಟ್ ಸ್ಥಾಪಿಸಲು ಕೇಂದ್ರದಿಂದ ಶೇ. 30, ರಾಜ್ಯದಿಂದ ಶೇ. 30 ನೆರವು ಸಿಗುತ್ತದೆ. ಉಳಿದ ಶೇ. 40ರಷ್ಟು ವೆಚ್ಚವನ್ನು ರೈತರು ಭರಿಸಬೇಕಾಗುತ್ತದೆ.
ಕಾಂಪೊನೆಂಟ್ ಸಿ: ಎಲೆಕ್ಟ್ರಿಸಿಟಿ ಗ್ರಿಡ್ಗೆ ಕನೆಕ್ಟ್ ಆಗಿರುವ ಕೃಷಿ ಪಂಪ್ಸೆಟ್ಗಳ ಸೌರೀಕರಣ ಮಾಡಲಾಗುವ ಸ್ಕೀಮ್ ಇದು. ಇದರಲ್ಲಿ ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಮ್ಗೆ ಮಾರಲು ಅವಕಾಶ ಇದೆ.
ನವೀಕರಣ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ನೀಡಿದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ 2025ರ ಜುಲೈವರೆಗೆ ಪಿಎಂ ಕುಸುಮ್ ಕಾಂಪೊನೆಂಟ್ ಬಿ ಅಡಿಯಲ್ಲಿ 41,365 ಸೋಲಾರ್ ಪಂಪ್ಗಳನ್ನು ಮಂಜೂರು ಮಅಡಲಾಗಿದೆ. ಈ ಪೈಕಿ 2,388 ಪಂಪ್ಸೆಟ್ಗಳನ್ನು ಮಾತ್ರ ಅಳವಡಿಸಲಾಗಿದೆ. ಇನ್ನು, ಕಾಂಪೊನೆಂಟ್ ಸಿ ಅಡಿಯಲ್ಲಿ ಮಂಜೂರಾದ 6.28 ಲಕ್ಷ ಪಂಪ್ಗಳ ಪೈಕಿ 23,133 ಪಂಪ್ಗಳನ್ನು ಮಾತ್ರ ಸೋಲರೈಸ್ ಮಾಡಲಾಗಿದೆ. ಬೆಳಗಾವಿ, ಕಲಬುರ್ಗಿ, ಮೈಸೂರು ಇತ್ಯಾದಿ ಪ್ರಮುಖ ಕೃಷಿ ಪ್ರಾಧಾನ್ಯ ಜಿಲ್ಲೆಗಳಲ್ಲಿ ಬಹಳ ಕಡಿಮೆ ಅಳವಡಿಕೆ ಆಗಿರುವುದು ಗಮನಾರ್ಹ.
ಪಿಎಂ ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಪಿಎಂ ಕುಸುಮ್ ಯೋಜನೆಯ ಬಿ ಮತ್ತು ಸಿ ಕಾಂಪೊನೆಂಟ್ ಅಡಿಯಲ್ಲಿ ಕೃಷಿ ಪಂಪ್ಗಳನ್ನು ಸ್ಥಾಪಿಸಬಹುದು. ಅದಕ್ಕಾಗಿ, ಕರ್ನಾಟಕ ನವೀಕರಣ ಇಂಧನ ಅಭಿವೃದ್ಧಿ ಸಂಸ್ಥೆ (ಕೆಆರ್ಇಡಿಎಲ್) ಅಥವಾ ರೈತರಿಗೆ ಅವರ ಜಿಲ್ಲೆಯ ವ್ಯಾಪ್ತಿಗೆ ಬರುವ ಎಸ್ಕಾಮ್ ಮೂಲಕ ಅರ್ಜಿ ಸಲ್ಲಿಸಬಹುದು. ಕೆಆರ್ಇಡಿಎಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಕ್ರಮ ಇಲ್ಲಿದೆ:
ಕೆಆರ್ಇಡಿಎಲ್ ವೆಬ್ಸೈಟ್ಗೆ ಹೋಗಿ: kredl.karnataka.gov.in
ಸ್ಕೀಮ್ಸ್ ಅಡಿಯಲ್ಲಿ ಪಿಎಂ ಕುಸುಮ್ ಅನ್ನು ಆಯ್ದುಕೊಳ್ಳಿ. ಇಲ್ಲಿ ಮುಂದಿನ ಕ್ರಮಗಳು, ದಾಖಲೆಗಳು ಇತ್ಯಾದಿ ವಿವರ ಸಿಗುತ್ತದೆ. ಅವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.
ಯೋಜನೆಗೆ ಯಾರು ಅರ್ಹರು?
ಕೃಷಿ ಭೂಮಿ ಹೊಂದಿರುವ ರೈತರು ಈ ಸ್ಕೀಮ್ನಲ್ಲಿ ಪಾಲ್ಗೊಳ್ಳಬಹುದು. ಅವರ ಕೃಷಿಭೂಮಿಯಲ್ಲಿ ಸೂರ್ಯನ ಬೆಳಕು ಸಾಕಷ್ಟು ಬೀಳುವಂತಿರಬೇಕು.
ಪಿಎಂ ಕುಸುಮ್ ಯೋಜನೆಗೆ ದಾಖಲೆಗಳು?
ಆಧಾರ್ ಕಾರ್ಡ್, ಜಮೀನು ಮಾಲಿಕತ್ವದ ದಾಖಲೆ (ಆರ್ಟಿಸಿ ಇತ್ಯಾದಿ), ಬ್ಯಾಂಕ್ ಪಾಸ್ಬುಕ್, ಫೋಟೋ, ಎಲೆಕ್ಟ್ರಿಸಿಟಿ ಬಿಲ್ ಇತ್ಯಾದಿ ದಾಖಲೆಗಳು ಬೇಕಾಗುತ್ತವೆ.
ಅರ್ಜಿ ಸಲ್ಲಿಸುವುದು ಹೇಗೆ?
ಕೆಆರ್ಇಡಿಎಲ್ ವೆಬ್ಸೈಟ್ ಅಥವಾ ಎಸ್ಕಾಮ್ ಕಚೇರಿಯಲ್ಲಿ ಪಡೆದ ಅರ್ಜಿಯನ್ನು ಭರ್ತಿ ಮಾಡಿ ಆ ಕಚೇರಿಗೆ ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸಬೇಕು. ಕೆಲ ಜಿಲ್ಲೆಗಳಲ್ಲಿ ಆನ್ಲೈನ್ನಲ್ಲಿ ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇರಬಹುದು. ಆ ಪೋರ್ಟಲ್ ವಿಳಾಸ: https://pumpset.karnataka.gov.in
ನೀವು ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಬಂದು ನಿಮ್ಮ ಜಮೀನು ಪರಿಶೀಲನೆ ಮಾಡಿ, ಎಷ್ಟು ಸೌರ ವಿದ್ಯುತ್ ಉತ್ಪಾದನೆ ಮಾಡಲು ಅವಕಾಶ ಇದೆ, ಅದನ್ನು ಮಂಜೂರು ಮಾಡುತ್ತಾರೆ. ಈ ಘಟಕ ಸ್ಥಾಪನೆಯ ವೆಚ್ಚದಲ್ಲಿ ಶೇ. 10ರಿಂದ 40ರಷ್ಟನ್ನು ನೀವು ಭರಿಸಬೇಕಾಗುತ್ತದೆ. ಉಳಿದವಕ್ಕೆ ಸರ್ಕಾರಗಳು ಸಬ್ಸಿಡಿ ನೀಡುತ್ತವೆ.
