‘ರಾಂಝನಾ’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ: ಧನುಶ್ ಮತ್ತು ಎರೋಸ್ ನಿರ್ಮಾಣ ಸಂಸ್ಥೆ ನಡುವೆ ಭಿನ್ನಾಭಿಪ್ರಾಯ

ಸಾಮಾನ್ಯವಾಗಿ ತಮ್ಮ ಸಿನಿಮಾಗಳಿಂದ, ನಟನೆಯಿಂದ ಸುದ್ದಿಯಾಗುವ ಧನುಶ್ (Dhanush) ಆಗೊಮ್ಮೆ ಈಗೊಮ್ಮೆ ವಿವಾದಗಳಲ್ಲಿ ಸಿಲುಕಿಕೊಳ್ಳುವುದೂ ಉಂಟು. ಕೆಲ ತಿಂಗಳ ಹಿಂದಷ್ಟೆ ಖ್ಯಾತ ನಟಿ ನಯನತಾರಾ, ಧನುಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪೋಸ್ಟ್ ಒಂದನ್ನು ಹಂಚಿಕೊಂಡು, ಧನುಶ್ ಅನ್ನು ಗೋಮುಖ ವ್ಯಾಘ್ರನಿಗೆ ಹೋಲಿಸಿದ್ದರು.

ಆದರೆ ಧನುಶ್ ಅದಕ್ಕೆ ನೇರವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಬದಲಿಗೆ ನಯನತಾರಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಇದೀಗ ಧನುಶ್ ವಿರುದ್ಧ ಜನಪ್ರಿಯ ನಿರ್ಮಾಣ ಸಂಸ್ಥೆಯೊಂದು ಕಿಡಿ ಕಾರಿದೆ.
ಧನುಶ್ ವೃತ್ತಿ ಜೀವನದಲ್ಲಿ ಹಿಂದಿ ಸಿನಿಮಾ ‘ರಾಂಝನಾ’ಗೆ ವಿಶೇಷ ಸ್ಥಾನವಿದೆ. ಬಾಲಿವುಡ್ನ ಕಲ್ಟ್ ಸಿನಿಮಾಗಳಲ್ಲಿ ಒಂದು ‘ರಾಂಝನಾ’. ಅದ್ಭುತವಾದ ಪ್ರೇಮಕತೆಯ ಜೊತೆಗೆ ಅತ್ಯದ್ಭುತವಾದ ಹಾಡುಗಳು, ಹಿನ್ನೆಲೆ ಸಂಗೀತವನ್ನು ಆ ಸಿನಿಮಾ ಹೊಂದಿತ್ತು. ಸಿನಿಮಾದಲ್ಲಿ ಧನುಶ್ ನಟನೆಯಂತೂ ಅತ್ಯದ್ಭುತ. ಆ ಸಿನಿಮಾದ ದೃಶ್ಯಗಳು ಈಗಲೂ ರೀಲ್ಸ್ಗಳಲ್ಲಿ ಬರುತ್ತಲೇ ಇರುತ್ತವೆ. ಈ ಸಿನಿಮಾ ಬಿಡುಗಡೆ ಆಗಿ 12 ವರ್ಷಗಳಾದವು. ಅದೇ ಕಾರಣಕ್ಕೆ ಸಿನಿಮಾದ ಮರು ಬಿಡುಗಡೆ ಮಾಡಲಾಗಿತ್ತು. ಅದುವೇ ಧನುಶ್ ಮತ್ತು ಸಿನಿಮಾದ ಹಕ್ಕು ಹೊಂದಿರುವ ಎರೋಸ್ ಸಂಸ್ಥೆ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಎಲ್ಲರಿಗೂ ಗೊತ್ತಿರುವಂತೆ ‘ರಾಂಝನಾ’ ಸಿನಿಮಾದ ಅಂತ್ಯದಲ್ಲಿ ಧನುಶ್ರ ನಾಯಕ ಪಾತ್ರ ಕುಂದನ್ ಸತ್ತು ಹೋಗುತ್ತದೆ. ಆದರೆ ಈಗ ಮರು ಬಿಡುಗಡೆ ಆದ ಸಿನಿಮಾನಲ್ಲಿ ಎಐ ತಂತ್ರಜ್ಞಾನ ಬಳಸಿ ಕುಂದನ್ ಅನ್ನು ಬದುಕುವಂತೆ ತೋರಿಸಲಾಗಿದೆ. ಮರು ಬಿಡುಗಡೆಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಇದು ಭಾರಿ ಶಾಕ್ ನೀಡಿದೆ. ಸಿನಿಮಾದ ಕೊನೆಯಲ್ಲಿ ಕುಂದನ್ ಆಸ್ಪತ್ರೆಯ ಬೆಡ್ ಮೇಲೆ ಕಣ್ಣು ಬಿಡುವಂತೆ ತೋರಿಸಲಾಗಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ ಆದರೆ ಸಿನಿಮಾದ ನಾಯಕ ಧನುಶ್ ಮತ್ತು ನಿರ್ದೇಶಕ ಆನಂದ್ ಎಲ್ ರಾಯ್ ಅವರಿಗೆ ಇಷ್ಟವಾಗಿಲ್ಲ.
ಇತ್ತೀಚೆಗಷ್ಟೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ನಟ ಧನುಶ್, ‘ತಮ್ಮ ಅನುಮತಿ ಪಡೆಯದೇ ಸಿನಿಮಾದ ಕತೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದು ಸಿನಿಮಾದ ಉದ್ದೇಶಕ್ಕೆ ಧಕ್ಕೆ ತರುತ್ತಿದೆ’ ಎಂದಿದ್ದಾರೆ. ನಿರ್ದೇಶಕ ಆನಂದ್ ಎಲ್ ರಾಯ್ ಸಹ ತಮಗೂ ಈ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲವೆಂದು, ಈ ಬದಲಾವಣೆ ಅನಧಿಕೃತ ಎಂದೂ ಹೇಳಿದ್ದಾರೆ.
ಇದು ಸಿನಿಮಾದ ಹಕ್ಕುಗಳನ್ನು ಹೊಂದಿರುವ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆಯ ಸಿಟ್ಟಿಗೆ ಕಾರಣವಾಗಿದ್ದು, ‘ಸಿನಿಮಾದ ಹಕ್ಕುಗಳು ನಮ್ಮ ಬಳಿ ಇವೆ, ನಿಮ್ಮ ಬಳಿ ಅಲ್ಲ’ ಎಂದು ಕಟುವಾಗಿ ಹೇಳಿದೆ. ನಿರ್ದೇಶಕ ಆನಂದ್ ಎಲ್ ರಾಯ್ ‘ರಾಂಝನಾ’ ಸಿನಿಮಾಕ್ಕೆ ಹಣ ತೊಡಗಿಸಿದ್ದಾರೆ ಎಂಬ ಸುದ್ದಿಗೂ ಸ್ಪಷ್ಟನೆ ನೀಡಿರುವ ಎರೋಸ್, ‘ರಾಂಝನಾ’ ಸಿನಿಮಾದ ಸಂಪೂರ್ಣ ಹಕ್ಕುಗಳು ನಮ್ಮ ಬಳಿಯೇ ಇವೆ ಎಂದಿದೆ. ಮಾತ್ರವಲ್ಲದೆ ಅದರ ಬದಲಾವಣೆಯ ಹಕ್ಕುಗಳೂ ಸಹ ನಮ್ಮದೇ ಎಂದಿದೆ. ಈಗ ಆನಂದ್ ಎಲ್ ರಾಯ್ ‘ತೇರೆ ಇಷ್ಕ್ ಮೇ’ ಹೆಸರಿನ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದು ಸಿನಿಮಾನಲ್ಲಿ ಧನುಶ್ ನಾಯಕ. ಆ ಸಿನಿಮಾ ತಂಡ ‘ರಾಂಝನಾ’ ಸಿನಿಮಾದ ಹೆಸರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದು ಗಮನಕ್ಕೆ ಬಂದಿದ್ದು ಅವರಿಗೆ ನೊಟೀಸ್ ನೀಡಲಾಗಿದೆ ಎಂದು ಸಹ ಎರೋಸ್ ಹೇಳಿದೆ.
ಆದರೆ ಎರೋಸ್, ‘ರಾಂಝನಾ’ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಿದ್ದಕ್ಕೆ ಹಲವು ಸಿನಿಮಾ ಪ್ರೇಮಿಗಳು ಮತ್ತು ಕೆಲ ಸಿನಿಮಾ ಮಂದಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಧನುಶ್, ಆನಂದ್ ಎಲ್ ರಾಯ್, ವರುಣ್ ಗ್ರೋವರ್, ಅನುರಾಗ್ ಕಶ್ಯಪ್ ಇನ್ನೂ ಕೆಲವರು ಕ್ಲೈಮ್ಯಾಕ್ಸ್ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.