Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರಜ್ವಲ್‌ ರೇವಣ್ಣಗೆ ಒಂದು ಪ್ರಕರಣಕ್ಕೆ ಜೀವಾವಧಿ ಶಿಕ್ಷೆ, ಇನ್ನೂ ಹಲವು ಪ್ರಕರಣಗಳು ಬಾಕಿ ಇದೆಯಾ?

Spread the love

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನು ಮೂರು ಪ್ರಕರಣಗಳು ಬಾಕಿ ಇದ್ದು, ಒಂದು ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ, ಎರಡು ಪ್ರಕರಣಗಳ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.
ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾದ ಪ್ರಕರಣಗಳ ಪೈಕಿ ಮೊದಲ ದೂರನ್ನು ತಾಯಿ ಮತ್ತು ಮಗಳು ದಾಖಲಿಸಿದ್ದರು. ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದು, ಮಗಳನ್ನು ವೀಡಿಯೊ ಕರೆಯಲ್ಲಿ ಬೆತ್ತಲೆಯಾಗುವಂತೆ ಒತ್ತಾಯಿಸಿದ ಆರೋಪದ ಮೇರೆಗೆ ದೂರು ದಾಖಲಾಗಿತ್ತು. ಎರಡನೇ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಹಾಸನ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ. ಇದು ಹಾಸನದಲ್ಲಿನ ನಿವಾಸದಲ್ಲಿ ನಡೆಸಲಾಗಿತ್ತು ಎಂಬ ದೂರು ದಾಖಲಾಗಿದೆ. ಮೂರನೇ ದೂರಿನ ಪ್ರಕಾರ ಮಹಿಳೆಯೊಬ್ಬರು, ವೈಯಕ್ತಿಕ ವಿಷಯಕ್ಕಾಗಿ ಸಹಾಯ ಪಡೆಯಲು ಪ್ರಜ್ವಲ್ ರೇವಣ್ಣನನ್ನು ಸಂಪರ್ಕಿಸಿದಾಗ ತನಗೆ ಕಿರುಕುಳ ನೀಡಿದ್ದರು ಎಂಬ ದೂರು ದಾಖಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವು ಶಿಕ್ಷೆಗೊಳಗಾಗಿರುವ ಪ್ರಕರಣ ಹೊರತುಪಡಿಸಿ ಇನ್ನುಳಿದ ಮೂರು ಪ್ರಕರಣಗಳಲ್ಲಿಯೂ ಆರೋಪಪಟ್ಟಿ ಸಲ್ಲಿಕೆ ಮಾಡಿದೆ. ಈ ಪೈಕಿ ಹಾಸನ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆ ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಡೆಸುತ್ತಿದೆ. ಇನ್ನುಳಿದ ಎರಡು ಪ್ರಕರಣಗಳ ವಿಚಾರಣೆ ಆರಂಭವಾಗಬೇಕಿದೆ ಎಂದು ಮೂಲಗಳು ಹೇಳಿವೆ.

ಜಿಲ್ಲಾ ಪಂಚಾಯತ್​​ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಎಸ್​ಐಟಿ 120 ಸಾಕ್ಷಿಗಳ 1691 ಪುಟಗಳ ಚಾರ್ಜ್​ಶೀಟ್​ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ​ಸಲ್ಲಿಸಿದೆ. ಪತಿಯನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸಿ ಜೆಡಿಎಸ್​​ ಪಕ್ಷದ ಮಾಜಿ ಜಿಲ್ಲಾ ಪಂಚಾಯತ್​ ಸದಸ್ಯೆ ಮೇಲೆ ಪ್ರಜ್ವಲ್​ ರೇವಣ್ಣ ಅತ್ಯಾಚಾರ ಎಸಗಿರುವುದು ಎಸ್​ಐಟಿ ತನಿಖೆಯಲ್ಲಿ ಸಾಬೀತಾಗಿದೆ. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರಿಗೆ ಸರ್ಕಾರ ಹಂಚಿಕೆ ಮಾಡಿದ್ದ ಹಾಸನದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅತಿಥಿ ಗೃಹದಲ್ಲಿ ಅತ್ಯಾಚಾರ ಎಸಗಿದ್ದ ಎಂಬುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ಪ್ರಜ್ವಲ್​ ರೇವಣ್ಣ ಸಂತ್ರಸ್ತೆ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ. ಅಲ್ಲದೇ, ಮಹಿಳೆಗೆ ವಿಡಿಯೋ ಕರೆ ಕೂಡ ಮಾಡುತ್ತಿದ್ದ. ಈ ವೇಳೆ ಸಂತ್ರಸ್ತೆಗೆ ತಿಳಿಯದಂತೆ ನಗ್ನ ಫೋಟೋಗಳ ಸ್ಕ್ರೀನ್​ ಶಾಟ್​ಗಳನ್ನು ತೆಗೆಯುತ್ತಿದ್ದು, ಅತ್ಯಾಚಾರದ ವೇಳೆ ಅಳಬಾರದು, ನಗಬೇಕು ಎಂದು ಹೇಳಿ ವಿಕೃತವಾಗಿ ವರ್ತಿಸುತ್ತಿದ್ದ. ನಗ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಹೊಳೆನರಸೀಪುರ ಮನೆಗೂ ಕರೆಸಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿರುವುದು ದೃಢವಾಗಿದೆ. ತಾನು ಹೇಳಿದ ಬಟ್ಟೆ, ಒಳಉಡುಪು ಧರಿಸಬೇಕು ಎಂದು ಸಂತ್ರಸ್ತೆಗೆ ಪ್ರಜ್ವಲ್​ ರೇವಣ್ಣ ಹೇಳುತ್ತಿದ್ದ. 2020ರಿಂದ 2023ರವರೆಗೂ ಅನೇಕ ಬಾರಿ ಅತ್ಯಾಚಾರ ಎಸಗಿದ್ದ ಎಂದು ಎಸ್‌ಐಟಿ ಆರೋಪಪಟ್ಟಿಯಲ್ಲಿ ತಿಳಿಸಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ತಾಯಿ ಮತ್ತು ಮಗಳು ನೀಡಿದ ದೂರಿನ ತನಿಖೆಯನ್ನು ಪೂರ್ಣಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಬೇಕಿದೆ. ವಿಚಾರಣೆ ಆರಂಭಗೊಂಡ ಬಳಿಕವೇ ಮುಂದಿನ ಬೆಳವಣಿಗೆಗಳು ನಡೆಯಲಿವೆ. ಇನ್ನು, ವೈಯಕ್ತಿಕ ವಿಷಯಕ್ಕಾಗಿ ಸಹಾಯ ಪಡೆಯಲು ಪ್ರಜ್ವಲ್ ರೇವಣ್ಣ ಅವರನ್ನು ಸಂಪರ್ಕಿಸಿದಾಗ ತನಗೆ ಕಿರುಕುಳ ನೀಡಿದ್ದರು ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆಯೂ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಬೇಕಿದೆ.

ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಗೊಳಗಾಗಿರುವ ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾಗಿರುವ ಇನ್ನುಳಿದ ಮೂರು ಪ್ರಕರಣದಲ್ಲಿಯೂ ಶಿಕ್ಷೆಯಾದರೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.

ಎಚ್‌.ಡಿ.ರೇವಣ್ಣ ವಿರುದ್ಧ ಅಪಹರಣ ಪ್ರಕರಣ

ಮಾಜಿ ಸಂಸದ ಪ್ರಜ್ವಲ್ ರೇವಣ್ಣರಿಂದ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಿರುದ್ಧವೂ ದೂರು ದಾಖಲಾಗಿದೆ. ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ವಿಚಾರಣೆ ನಡೆಯುತ್ತಿದೆ. ರೇವಣ್ಣ ಜತೆಗೆ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳಾದ ಸತೀಶ್ ಬಾಬು, ಎಚ್​.ಕೆ. ಸುಜಯ್, ಎಚ್​.ಎನ್. ಮಧು, ಎಸ್.ಟಿ. ಕೀರ್ತಿ, ಎಚ್​.ಡಿ ಮಾಯಗೌಡ, ಕೆ.ಎ. ರಾಜಗೋಪಾಲ್ ಅವರು ಸಹ ಜಾಮೀನಿನ ಮೇಲೆ ಹೊರಗಿದ್ದಾರೆ. ತನಿಖೆಗೆ ಸಹಕರಿಸಬೇಕು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಹಲವು ಅಶ್ಲೀಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ವಿದೇಶಕ್ಕೆ ಪಲಾಯನ ಮಾಡಿದ್ದ. ಮೇ 31, 2024ರಂದು ವಾಪಸ್‌ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ನನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಮೊಬೈಲ್ ಫೋನ್‌ಗಳಿಂದ ಹಲವು ವಿಡಿಯೊಗಳನ್ನು ರಿಕವರಿ ಮಾಡಲಾಗಿತ್ತು. ಈ ಸಾಕ್ಷ್ಯಗಳ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದರು.

ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ದಂಡದ ಜೊತೆಗೆ ಸಂತ್ರಸ್ತೆಗೆ ಏಳು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ಪ್ರಜ್ವಲ್ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅತ್ಯಾಚಾರ ನಡೆಸಿದ ಸಂಬಂಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಈ ದೂರಿನಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡಿತ್ತು. ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಹೊರಬೀಳುತ್ತಿದ್ದಂತೆ ಪ್ರಕರಣದ ಸಂತ್ರಸ್ತ ಮಹಿಳೆ ಸಾಕ್ಷಿ ಹೇಳದಂತೆ ಮಾಡಲು ಆಕೆಯನ್ನು ಅಪಹರಿಸಿ ಮಹಿಳೆಯನ್ನು ಕೆ.ಆರ್. ನಗರದ ಒಂದು ಫಾರ್ಮ್‌ಹೌಸ್‌ನಲ್ಲಿ ಕೂಡಿ ಹಾಕಲಾಗಿತ್ತು. ಈ ಪ್ರಕರಣದಲ್ಲಿ ಪ್ರಜ್ವಲ್ ತಂದೆ ಹೆಚ್.ಡಿ. ರೇವಣ್ಣ ಬಂಧನವಾಗಿತ್ತು. ತಾಯಿ ಭವಾನಿ ರೇವಣ್ಣ ನ್ಯಾಯಾಲಯದಿಂದ ಜಾಮೀನುಪಡೆದು ಬಂಧನ ತಪ್ಪಿಸಿಕೊಂಡಿದ್ದರು..

ಈ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ 1,652 ಪುಟಗಳ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ 113 ಸಾಕ್ಷಿಗಳ ಹೇಳಿಕೆಗಳು ಮತ್ತು ಹಲವು ವಿಧಿವಿಜ್ಞಾನ ಸಾಕ್ಷ್ಯಗಳಿದ್ದವು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತ್ವರಿತಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿತು. ನ್ಯಾಯಾಲಯದ ಮುಂದಿಟ್ಟ 26 ಸಾಕ್ಷಿಗಳು ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ನ್ಯಾಯಾಧೀಶರು ಸೂಕ್ಷ್ಮವಾಗಿ ಪರಿಶೀಲಿಸಿದ್ದರು. ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.


Spread the love
Share:

administrator

Leave a Reply

Your email address will not be published. Required fields are marked *