ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಟಾರ್ ಮಾದರಿಯ ಬೃಹತ್ ಹೋಟೆಲ್ ನಿರ್ಮಾಣ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಹಾಗೂ ಬೆಂಗಳೂರಿಗೆ ಐದು ಹೊಸ ಪಾಲಿಕೆಗಳು ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿಯೇ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಭಾರೀ ಕುತೂಹಲ ಮೂಡಿಸಿದೆ. ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸ್ಟಾರ್ ಹೋಟೆಲ್ ಮಾದರಿಯಲ್ಲಿ ರೆಸ್ಟೋರೆಂಟ್ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ಶುರುವಾಗಿದೆ.

ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನೂರಾರು ಜನ ಬಿಬಿಎಂಪಿಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಅಲ್ಲದೇ ನಿತ್ಯವೂ ಒಂದಿಲ್ಲೊಂದು ಕೆಲಸಕ್ಕಾಗಿ ಸಾವಿರಾರು ಜನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಬರುವುದು ಇದೆ. ಅವರಿಗೆ ಒಳ್ಳೆಯ ಊಟ ನೀಡುವುದಕ್ಕೆ ಭರ್ಜರಿ ಸಿದ್ಧತೆ ಶುರುವಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ಅಲ್ಲಿಗೆ ಬರುವವರಿಗೆ ಶುಚಿ, ರುಚಿ ಹಾಗೂ ಉತ್ತಮ ಬೆಲೆಯಲ್ಲಿ ಊಟ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಸ್ಟಾರ್ ಮಾದರಿಯ ಹೋಟೆಲ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಈ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಿಬಿಎಂಪಿಯ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಅವರು ತಿಳಿಸಿದ್ದಾರೆ.
ಎಲ್ಲಿ ಹೋಟೆಲ್, ಏನಿದು ಪ್ರಸ್ತಾವನೆ: ಬಿಬಿಎಂಪಿ ಕೇಂದ್ರ ಕಚೇರಿಯ ಒಳಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ಖಾಸಗಿ ಹೋಟೆಲ್‌ಗಳು ಇವೆ. ಆದರೆ ಇದೀಗ ಬಿಬಿಎಂಪಿಯ ವತಿಯಿಂದಲೇ ಹೋಟೆಲ್‌ವೊಂದು ನಿರ್ಮಾಣವಾಗಲಿದೆ. ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ನೆಲ ಮಹಡಿ ಹಾಗೂ ಮೊದಲನೇ ಮಹಡಿಯಲ್ಲಿ ರೆಸ್ಟೋರೆಂಟ್ ಪ್ರಾರಂಭಿಸುವುದಕ್ಕೆ ಮುಂದಾಗಿದ್ದು. ಇದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಅನುಮತಿ ನೀಡಿದ್ದಾರೆ.
ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ಸ್ಟಾರ್ ಹೋಟೆಲ್ ಮಾದರಿಯಲ್ಲೇ ರೆಸ್ಟೋರೆಂಟ್ ನಿರ್ಮಾಣವಾಗಲಿದೆ ಎಂದು ಎ. ಅಮೃತ್ ರಾಜ್ ಅವರು ಮಾಹಿತಿ ನೀಡಿದ್ದಾರೆ. ಎಷ್ಟು ವೆಚ್ಚದಲ್ಲಿ ಹಾಗೂ ಯಾವ ವಿನ್ಯಾಸದಲ್ಲಿ ಈ ಹೋಟೆಲ್ ನಿರ್ಮಾಣವಾಗಲಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಸಾವಿರಾರು ಜನರಿಗೆ ಅನುಕೂಲ: ಇನ್ನು ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಹೋಟೆಲ್ ನಿರ್ಮಾಣವಾಗುವುದರಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಶುಚಿ ಹಾಗೂ ರುಚಿಯಾದ ಆಹಾರ ಸಿಗಲಿದೆ ಎಂದು ಸಹ ನಿರೀಕ್ಷೆ ಮಾಡಲಾಗಿದೆ.