ಗೋದಾಮಿಂದ ಲಾರಿಗೆ, ಲಾರಿಯಿಂದ ಕೇರಳಕ್ಕೆ: ಯೂರಿಯಾ ಹಗರಣದ ಜಾಲ ಬಯಲು

ಚಾಮರಾಜನಗರ: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಅಭಾವ ಸೃಷ್ಟಿಯಾಗಿದ್ದು, ಈ ಸಂಬಂಧ ರೈತರು ರಸ್ತೆಗಳಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಇದರ ನಡುವೆ ಅಕ್ರಮವಾಗಿ ಯೂರಿಯಾ ಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನಂಜನಗೂಡಿನ ಗೋದಾಮಿನಿಂದ ಸುಮಾರು 330 ಚೀಲದಲ್ಲಿದ್ದ 15 ಟನ್ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಕೇರಳಕ್ಕೆ ಲಾರಿ ಮೂಲಕ ಸಾಗಿಸಲಾಗುತ್ತಿತ್ತು. ಈ ಮಾಹಿತಿ ತಿಳಿದ ಕೃಷಿ ಅಧಿಕಾರಿಗಳು ಮತ್ತು ಪೊಲೀಸರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ಯೂರಿಯಾ ಗೊಬ್ಬರ ಇದ್ದ ಲಾರಿಯನ್ನು ಅಡ್ಡಗಟ್ಟಿ, ವಶಕ್ಕೆ ಪಡೆದಿದ್ದಾರೆ. ಯೂರಿಯಾ ಗೊಬ್ಬರವನ್ನು ಅಂತಾರಾಜ್ಯ ಸಾಗಾಟಕ್ಕೆ ಅನುಮತಿ ಇಲ್ಲದಿದ್ದರೂ ಸಾಗಾಟ ಮಾಡಲಾಗುತ್ತಿತ್ತು. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ
“ರಾಜ್ಯದ ರೈತರಿಗೆ ರಸಗೊಬ್ಬರ ಕೊಡಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ, ಕೇಂದ್ರ ಸರ್ಕಾರ ಗೊಬ್ಬರ ಕೊಟ್ಟಿಲ್ಲ, ಕೊಟ್ಟಿಲ್ಲ ಎನ್ನುತ್ತಲೇ, ಕೇಂದ್ರ ಸರ್ಕಾರದಿಂದ ಬಂದಿರುವ ಯೂರಿಯಾವನ್ನು ರಾತ್ರೋರಾತ್ರಿ ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದೆ. ರಾಜ್ಯಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ದಿನಗಟ್ಟಲೇ ಕಾದರೂ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ.”
“ರೈತ ವಿರೋಧಿ ಸಿದ್ದಾರಾಮಯ್ಯ ಸರ್ಕಾರ, ಮೈಸೂರು ಜಿಲ್ಲೆಯ ನಂಜನಗೂಡಿನ ಗೋದಾಮಿನಿಂದ 15 ಟನ್ ಗೊಬ್ಬರವನ್ನು ಕೇರಳಕ್ಕೆ ಕಳ್ಳಸಾಗಣೆ ಮಾಡಿದೆ. ಇದು ರಾಜ್ಯದ ರೈತರಿಗೆ ಮಾಡಿರುವ ದ್ರೋಹವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾಳಸಂತೆಯಲ್ಲಿ ಯೂರಿಯಾ ಮಾರಾಟ
ರಾಯಚೂರು ಜಿಲ್ಲೆಯಲ್ಲಿ 79 ಟನ್ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡಲಾಗಿತ್ತು. ಈ ಸಂಬಂಧ ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ರಾಯಚೂರಿನ ಕಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋಡೌನ್ಗೆ ಹೋಗಬೇಕಿದ್ದ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿತ್ತು.
ಬಿತ್ತನೆ ಪ್ರಮಾಣ ಹೆಚ್ಚು, ಬೇಡಿಕೆಯೂ ಹೆಚ್ಚು
ಈ ಬಾರಿ ಮೆಕ್ಕೆಜೋಳ ಹೆಚ್ಚು ಬೆಳೆದಿದ್ದಾರೆ. ಇದರಿಂದ ಯೂರಿಯಾಗೆ ಹೆಚ್ಚು ಬೇಡಿಕೆ ಇದೆ. ಯೂರಿಯಾ ಗೊಬ್ಬರ ಕೊರತೆ ಇರುವುದು ನಿಜ. ಕೆಲವರು ರೈತರಿಗೆ ಹೆಚ್ಚುವರಿ ಗೊಬ್ಬರ ತೆಗೆದುಕೊಳ್ಳಲು ಒತ್ತಾಯ ಮಾಡಿರಬಹುದು. ಆದರೆ, ನಾವು ಯೂರಿಯಾ ಜೊತೆ ಹೆಚ್ಚುವರಿಯಾಗಿ ನ್ಯಾನೋ ಡಿಎಪಿ ಹಾಕುವಂತೆ ಮನವಿ ಮಾಡುತ್ತಿದ್ದೇವೆ. ಇದರಿಂದ ಭೂಮಿ ಹಾಳಾಗುವುದಿಲ್ಲ, ಹೆಚ್ಚು ಯೂರಿಯಾ ಹಾಕಿದರೆ ಭೂಮಿ ಹಾಳಾಗುತ್ತದೆ ಎಂದು ಮನವೊಲಿಕೆ ಮಾಡುತ್ತಿದ್ದೇವೆ ಇಷ್ಟೊಂದು ಪ್ರಮಾಣದಲ್ಲಿ ಯೂರಿಯಾ ಕೊರತೆ ಸಮಸ್ಯೆ ಆಗಿರುವುದು ಇದೇ ಮೊದಲು ಎಂದು ಗೊಬ್ಬರ ಅಂಗಡಿ ಮಾಲೀಕರು ಹೇಳಿದ್ದಾರೆ.
