ಕಾರ್ಕಳದಲ್ಲಿ ಬಸ್- ಜೀಪು ಢಿಕ್ಕಿ- ಓರ್ವ ಮೃತ್ಯು, ಹಲವರಿಗೆ ಗಾಯ..!

ಬಸ್ಸು ಮತ್ತು ಬೊಲೆರೋ ಜೀಪ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡ ಘಟನೆ ಪಡುಬಿದ್ರಿ- ಕಾರ್ಕಳ ರಸ್ತೆಯ ನಿಟ್ಟೆ ಸಮೀಪದ ಮಂಜರಪಲ್ಕೆ ಎಂಬಲ್ಲಿ ನಿನ್ನೆ ನಡೆದಿದೆ.ಗಂಭೀರ ಗಾಯಗೊಂಡ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ನಂದಳಿಕೆ ಕಡೆಯಿಂದ ಬರುತ್ತಿದ್ದ ಬೋಲೆರೊ ಕಾರು ಕಾರ್ಕಳ ಕಡೆಯಿಂದ ಬೆಳ್ಮಣ್ ಮಾರ್ಗವಾಗಿ ಮುಂಬಯಿಗೆ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಜಯಪುರ ನಿವಾಸಿ ಶಿವಪ್ಪ (48) ಸ್ಥಳದಲ್ಲೇ ಮೃತಪಟ್ಟರೆ, ಮಂಜು (45) ಮತ್ತು ಸುಜಯ (28) ಅವರ ಸ್ಥಿತಿ ಗಂಭೀರ ವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ತಾಲೂಕಿನ ನಂದಳಿಕೆಯ ತಮ್ಮ ಕುಟುಂಬದ ಮನೆಗೆ ದೇವರ ಕಾರ್ಯಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಜಯಪುರದಿಂದ ಬೆಳಗ್ಗೆ ಬಂದಿದ್ದ ಕುಟುಂಬದ ಸದಸ್ಯರು ಮನೆಯಲ್ಲಿ ಪೂಜೆ ಮುಗಿಸಿ ಮಧ್ಯಾಹ್ನದ ಭೋಜನ ಮುಗಿಸಿ ನಂದಳಿಕೆಯಿಂದ ಹಿಂದಿರುವ ಸಂಧರ್ಭದಲ್ಲಿ ಈ ಅಪಘಾತ ನಡೆದಿದೆ.ಅಪಘಾತದಲ್ಲಿ ಮೃತರಾದ ಕುಟುಂಬ ಗುರಿಕಾರ ಶಿವಪ್ಪನವರೇ ಮುಂದೆ ನಿಂತು ದೈವದ ಕೆಲಸದ ವಿಧಿವಿಧಾನಗಳನ್ನು ನಡೆಸಿಕೊಟ್ಟಿದ್ದರು. ಬಸ್ಸಿನಲ್ಲಿದ್ದ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಅಗಮಿಸಿದ 108 ಆಂಬುಲೆನ್ಸ್ ಸಿಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಢಿಕ್ಕಿಯ ರಭಸಕ್ಕೆ ಜೀಪಿನ ಮುಂಭಾಗ ಸಂಪೂರ್ಣ ಪುಡಿಯಾಗಿದ್ದು, ಎರಡೂ ಟಯರುಗಳು ಕಳಚಲ್ಪಟ್ಟಿವೆ. ಬಸ್ಸು ಮತ್ತು ಜೀಪ್ ಸಹಿತ ಎರಡೂ ವಾಹನಗಳು ರಸ್ತೆಯ ಬದಿಗೆ ಸರಿಯಲ್ಪಟ್ಟಿವೆ.
