ಶಿರಾ ಬಳಿ ಸೇಬು ತುಂಬಿದ ಲಾರಿ ಪಲ್ಟಿ: ರಸ್ತೆಗೆ ಚೆಲ್ಲಿದ ಲಕ್ಷಾಂತರ ಮೌಲ್ಯದ ಹಣ್ಣು, ಜನರು ಎತ್ತಿಕೊಂಡು ಹೋದರು!

ಶಿರಾ : ಸೇಬು ತುಂಬಿದ ಲಾರಿ ಪಲ್ಟಿಯಾಗಿ, ರಸ್ತೆಗೆ ಚೆಲ್ಲಾಪಿಲ್ಲಿಯಾದ ಹಣ್ಣುಗಳನ್ನು ಜನರು ಉಚಿತವಾಗಿ ಎತ್ತಿಕೊಂಡು ಹೋದ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೇಬುಗಳು ಹಾನಿಗೊಳಗಾಗಿವೆ.

ತುಮಕೂರು (ಜು.31): ಉತ್ತರ ಭಾರತದಿಂದ ಆಯಪಲ್ (ಸೇಬು ಹಣ್ಣು) ತುಂಬಿಕೊಂಡು ಬೆಂಗಳೂರಿಗೆ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿ ಉರುಳಿ ಬಿದ್ದಿದೆ. ಲಕ್ಷಾಂತರ ಬೆಲೆಬಾಳುವ ಸೇಬು ಹಣ್ಣುಗಳು ರಸ್ತೆಗೆ ಬಿದ್ದಿದ್ದು, ಜನರು ತಮಗೆ ಕೈಗೆ ಸಿಕ್ಕಷ್ಟು, ಎತ್ತಿಕೊಂಡು ಹೋಗಲು ಸಾಧ್ಯವಾಗುವಷ್ಟು ಸೇಬು ಹಣ್ಣುಗಳನ್ನು ಉಚಿತವಾಗಿ ಎತ್ತಿಕೊಂಡು ಹೋಗಿದ್ದಾರೆ.
ಶಿರಾ ತಾಲೂಕಿನ ಚಿಕ್ಕದಾಸರಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ, ಆಯಪಲ್ (ಸೇಬು ಹಣ್ಣು) ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಆಯಪಲ್ಗಳು ರಸ್ತೆಗೆ ಹರಿದು ಬಿದ್ದಿದ್ದು, ಸ್ಥಳೀಯರು ಬಾಕ್ಸ್ಗಳೊಡನೆ ಹಣ್ಣುಗಳನ್ನು ತಾವು ಬೇಕಾದಷ್ಟು ಹೊತ್ತೊಯ್ದಿರುವ ದೃಷ್ಯ ಕಂಡುಬಂದಿದೆ.
ಹೆದ್ದಾರಿಯಲ್ಲಿ ಅಪಘಾತ – ಶಿರಾ ಟು ಮೈಸೂರು ಮಾರ್ಗದಲ್ಲಿ ತೀವ್ರ ಪರಿಣಾಮ:
ಶಿಮ್ಲಾ ಮೂಲದ ಆಯಂಪಲ್ಗಳನ್ನು ಮೈಸೂರಿನ ಮಾರ್ಕೆಟ್ ಕಡೆಗೆ ಸಾಗಿಸುತ್ತಿದ್ದ ಲಾರಿ ಶಿರಾ ಪಟ್ಟಣದ ಬಳಿಯ ಚಿಕ್ಕದಾಸರಹಳ್ಳಿಯ ನೇರ ರಸ್ತೆಯಲ್ಲಿ ಬೈಕ್ ಒಂದು ಅಡ್ಡಬಿದ್ದ ಪರಿಣಾಮ ಲಾರಿ ಚಾಲಕ ನಿಯಂತ್ರಣ ತಪ್ಪಿದ್ದಾನೆ. ತಕ್ಷಣವೇ ರಸ್ತೆ ಬದಿಗೆ ಉರುಳಿ ಬಿದ್ದ ಲಾರಿ ಸಂಪೂರ್ಣ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಹಣ್ಣುಗಳು ಚತುರ್ಮುಖವಾಗಿ ಹರಡಿವೆ.
ಚಾಲಕನಿಗೆ ಸಣ್ಣಪುಟ್ಟ ಗಾಯ – ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ:
ಘಟನೆಯಲ್ಲಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶಿರಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಘಟನೆಯ ನಂತರ ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾರಿ ಪಲ್ಟಿಯಾದ ಸುದ್ದಿ ತಿಳಿದ ತಕ್ಷಣ ಸ್ಥಳೀಯರು ದೌಡಾಯಿಸಿ ಲಾರಿಯಲ್ಲಿದ್ದ ಆಯಂಪಲ್ ಬಾಕ್ಸ್ಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣುಗಳು ಹಾನಿಗೊಳಗಾಗಿರುವ ಸಾಧ್ಯತೆಯಿದೆ. ಕೆಲವರು ಬಾಕ್ಸ್ಗಳನ್ನೇ ಹೊತ್ತು ತಾವು ಮನೆಗೆ ಸಾಗಿರುವ ದೃಶ್ಯಗಳು ವರದಿಯಾಗಿವೆ.
ಪೊಲೀಸರಿಂದ ಪ್ರಕರಣ ದಾಖಲೆ – ತನಿಖೆ ಆರಂಭ:
ಈ ಕುರಿತು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನಿಂದ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ. ಅಪಘಾತದಿಂದಾಗಿ ಕೆಲ ಕಾಲ ಶಿರಾ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದೀಗ ಲಾರಿ ತೆರವು ಕಾರ್ಯ ನಡೆಯುತ್ತಿದೆ