ಸ್ಮಾರ್ಟ್‌ಫೋನ್‌ನಿಂದ ಕ್ಷಯರೋಗ ಪತ್ತೆ: ವಿಜ್ಞಾನಿಗಳಿಂದ ನೂತನ ಸಾಧನ

ಅಸ್ಸಾಂನ ತೇಝ್ ಪುರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ಸಂಶೋಧನಾ ಕ್ಷೇತ್ರದಲ್ಲಿ ನೂತನ ಆವಿಷ್ಕಾರ ಮಾಡಿದ್ದು, ಸ್ಮಾರ್ಟ್ ಫೋನ್ ಬಳಸಿಕೊಂಡು ಕ್ಷಯ ರೋಗವನ್ನು ಪತ್ತೆ ಹಚ್ಚಬಲ್ಲ ಕಿರು ಸಾಧನವನ್ನು ಸಂಶೋಧಿಸಿದ್ದಾರೆ.

ಈ ನೂತನ ಸಾಧನವನ್ನು ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಬಿತ್ರ ನಾಥ್ ನೇತೃತ್ವದ ತಂಡ ಅಭಿವೃದ್ಧಿಗೊಳಿಸಿದ್ದು, ಈ ಸಾಧನಕ್ಕೆ ಯಾವುದೇ ರಾಸಾಯನಿಕ ಅಥವಾ ಬಣ್ಣಗಳ ಅಗತ್ಯವಿಲ್ಲ ಎನ್ನಲಾಗಿದೆ.
ಈ ಸಾಧನವು ಕ್ಷಯ ರೋಗದ ಪತ್ತೆಗಾಗಿ ಕ್ಷಯ ರೋಗ ಬ್ಯಾಕ್ಟೀರಿಯಾದ ಹೊಳಪನ್ನು ಬಳಸಿಕೊಳ್ಳಲಿದ್ದು, ಅದರಲ್ಲಿ ಅಂತರ್ ನಿರ್ಮಿತ ಬಿಸಿಯಾಗಿಸುವಿಕೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಪಬಿತ್ರ ನಾಥ್ ತಿಳಿಸಿದ್ದಾರೆ.
ಈ ಸಾಧನವು ದರದ ದೃಷ್ಟಿಯಲ್ಲಿ ಅಗ್ಗವೂ ಆಗಿದ್ದು, 25,000 ರೂ. ಒಳಗೆ ಇರಲಿದೆ ಹಾಗೂ 300 ಗ್ರಾಂಗಿಂತಲೂ ಕಡಿಮೆ ತೂಕದ ಕಿರು ಸಾಧನವಾಗಿದೆ. ಇದನ್ನು ಸೀಮಿತ ಆರೋಗ್ಯ ಸೇವೆ ಮೂಲಸೌಕರ್ಯಗಳಲ್ಲಿ ಅಳವಡಿಸಲು ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಕ್ಷಯ ರೋಗ ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ಮಹತ್ವದ ಘಟ್ಟದಲ್ಲಿ ಈ ರೋಗವನ್ನು ನಿಖರ ರೋಗ ನಿರ್ಣಯದ ಮೂಲಕ ಪತ್ತೆ ಹಚ್ಚಲು ಸಾಧ್ಯಯವಾದರೆ, ಅದರ ಹರಡುವಿಕೆಯನ್ನು ತಡೆಯಬಹುದಾಗಿದೆ ಎಂದೂ ಅವರು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತದ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮವು ಕ್ಷಯ ರೋಗದ ತಪಾಸಣೆಗಾಗಿ ಎಲ್‌ಇಡಿ ಫ್ಲೋರೆಸೆನ್ಸ್ ಮೈಕ್ರೊಸ್ಕೋಪಿಯನ್ನು ಅತ್ಯುತ್ತಮ ಮಾನದಂಡವೆಂದು ಶಿಫಾರಸು ಮಾಡಿವೆ.
ಈ ಕುರಿತು ಪ್ರತಿಕ್ರಿಯಿಸಿದ ಪಬಿತ್ರ ನಾಥ್, “ಸಾಂಪ್ರದಾಯಿಕ ಆಪ್ಟಿಕಲ್ ಮೈಕ್ರೊಸ್ಕೋಪಿಗೆ ಹೋಲಿಸಿದರೆ ಎಲ್‌ಇಡಿ-ಎಫ್‌ಎಂ ಅತ್ಯಧಿಕ ಸೂಕ್ಷ್ಮತೆ ಹೊಂದಿದ್ದು, ಹಲವಾರು ನಕಾರಾತ್ಮಕ ಅಂಶಗಳನ್ನು ಹೊಂದಿದೆ. ಇದು ದುಬಾರಿ ಉಪಕರಣ, ಔರಾಮಿನ್-ಒನಂತಹ ರಾಸಾಯನಿಕ ಕಲೆಕಾರಕ ವಸ್ತು ಹಾಗೂ ಮಾದರಿ ಸಿದ್ಧತೆ ಮತ್ತು ವಿಶ್ಲೇಷಣೆಗಾಗಿ ನುರಿತ ಸಿಬ್ಬಂದಿಗಳನ್ನು ಅವಲಂಬಿಸಿದೆ” ಎಂದು ಹೇಳಿದ್ದಾರೆ.
“ಇದಲ್ಲದೆ, ಅದರ ಪ್ರಯೋಗಾಲಯದ ಅವಲಂಬನೆಯಿಂದಾಗಿ, ಹಲವಾರು ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಅದನ್ನು ಸ್ಥಾಪಿಸುವುದು ಅಪ್ರಾಯೋಗಿಕವಾಗಿದೆ” ಎಂದೂ ಅವರು ತಿಳಿಸಿದ್ದಾರೆ.
ತೇಝ್ ಪುರ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಲಾಗಿರುವ ಈ ಸಾಧನವು ಮೈಕ್ರೊಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಜೀವಕೋಶಗಳು ಸೇರಿದಂತೆ ಕೆಲವು ಮೈಕ್ರೋಬಿಯಲ್ ಜೀವಕೋಶಗಳ ನೈಸರ್ಗಿಕ ಗುಣಲಕ್ಷಣವಾದ ಸ್ವಯಂ ಬೆಳಗುವಿಕೆ ತತ್ವವನ್ನು ಆಧರಿಸಿದೆ. ಈ ಜೀವಕೋಶಗಳು ಬೆಳಕಿನ ನಿರ್ದಿಷ್ಟ ತರಂಗಾಂತರಗಳಿಂದ ರೋಮಾಂಚನಗೊಂಡಾಗ, ಬೆಳಗುವಿಕೆಯ ಸಂಕೇತಗಳನ್ನು ಹೊರಹೊಮ್ಮಿಸುತ್ತವೆ.
