Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉರ್ದು ಶಾಲೆಯ SDMC ಅಧ್ಯಕ್ಷ-ಮುಖ್ಯ ಶಿಕ್ಷಕರ ಜಗಳ ಬೀದಿಗೆ, ಪರಸ್ಪರ ಆರೋಪ-ಪ್ರತ್ಯಾರೋಪ!

Spread the love

ಹಾವೇರಿ: ತಾಲ್ಲೂಕಿನ ಹೊಸರಿತ್ತಿ ಗ್ರಾಮದಲ್ಲಿರುವ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕರ ನಡುವಿನ ಒಳ ಜಗಳ ಬೀದಿಗೆ ಬಂದಿದ್ದು, ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕ ಮಹಮ್ಮದ್ ಉಮರ್ ಟಾಸ್ಕ್‌ನವರ ನಾನು ಕೇಳಿದ ಮಾಹಿತಿ ನೀಡುತ್ತಿರಲಿಲ್ಲ.

ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆಯೇ ಹಗೆತನ ಸಾಧಿಸುತ್ತಿದ್ದಾರೆ. ದಿಢೀರ್ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿರುವುದಾಗಿ ಮೊಬೈಲ್ ಮೂಲಕ ತಿಳಿಸಿದ್ದಾರೆ’ ಎಂದು ಅಧ್ಯಕ್ಷ ರಜಾಕ್ ಭಾಷಾ ದೊಡ್ಡಮನಿ ಅವರು ಬುಧವಾರ ‘ಪತ್ರಿಕಾಗೋಷ್ಠಿ’ಯಲ್ಲಿ ಆರೋಪಿಸಿದರು.

ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಶಿಕ್ಷಕ ಉಮರಸಾಬ್ ಟಾಸ್ಕ್‌ನವರ, ‘ಅಧ್ಯಕ್ಷರ ಆರೋಪ ಸುಳ್ಳು. ಅಧ್ಯಕ್ಷರು ಸಭೆ ಕರೆಯಲು ಹಿಂದೇಟು ಹಾಕುತ್ತಿದ್ದರು. ಜೊತೆಗೆ, ಶಾಲೆ ಅಭಿವೃದ್ಧಿಗೆ ಸಹಕರಿಸುತ್ತಿರಲಿಲ್ಲ. ಇದೇ ವಿಚಾರವಾಗಿ ಸದಸ್ಯರು ಕೋಪಗೊಂಡಿದ್ದರು. 18 ಸದಸ್ಯರ ಪೈಕಿ 15 ಸದಸ್ಯರು ಒಗ್ಗಟ್ಟಾಗಿ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷರನ್ನು ಬದಲಾಯಿಸಿದ್ದಾರೆ. ಹೊಸ ಅಧ್ಯಕ್ಷರಾಗಿ ಅಬ್ಬಾಸಅಲಿ ಮಲ್ಲಾಡದ ಅವರು ಆಯ್ಕೆ ಆಗಿದ್ದಾರೆ’ ಎಂದರು.

ಇವರಿಬ್ಬರ ಜಗಳ, ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎಂ.ಎಚ್‌. ಪಾಟೀಲ ಅವರ ಕಚೇರಿ ಮೆಟ್ಟಿಲೇರಿದೆ. ಬಿಇಒ ಅವರನ್ನು ಭೇಟಿಯಾಗಿದ್ದ ಕೆಲ ಸದಸ್ಯರು, ‘ಶಾಲೆಯಲ್ಲಿ ಯಾವುದೇ ಗೊಂದಲವಿಲ್ಲ. ಅಧ್ಯಕ್ಷರು ಶಾಲೆ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ. ಇದರಿಂದಾಗಿ ನಿಯಮದ ಪ್ರಕಾರವೇ ಅವರನ್ನು ಬದಲಾವಣೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ, ‘ಎಸ್‌ಡಿಎಂಸಿ ಸದಸ್ಯರೇ ನಿಯಮದ ಪ್ರಕಾರ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದಾರೆ. ಶಾಲೆ ಮಕ್ಕಳ ಹಿತದೃಷ್ಟಿ ಕಾಪಾಡುವಂತೆ ಹೇಳಿ ಕಳುಹಿಸಿದ್ದೇನೆ’ ಎಂದರು.

ಸ್ವಂತ ಚೆಕ್‌ ಪಡೆದಿದ್ದ ಮುಖ್ಯಶಿಕ್ಷಕ:

‘ಒಂದು ವರ್ಷದಿಂದ ಎಸ್‌ಡಿಎಂಸಿ ಅಧ್ಯಕ್ಷನಾಗಿದ್ದೇನೆ. ವಿಷಯವಾರು ಶಿಕ್ಷಕರ ಪಟ್ಟಿ, ವೇಳಾಪಟ್ಟಿ, ಆಹಾರ ಸಾಮಗ್ರಿ ವಿವರ ಸೇರಿ ಯಾವುದರ ಮಾಹಿತಿಯನ್ನೂ ಮುಖ್ಯ ಶಿಕ್ಷಕ ನೀಡುತ್ತಿಲ್ಲ. ಇತ್ತೀಚೆಗೆ ಪುಸ್ತಕ ಖರೀದಿಗೆ ₹ 8,500 ಬಂದಿತ್ತು. ನನ್ನಿಂದ ಖಾಲಿ ಚೆಕ್ ಮೇಲೆ ಸಹಿ ಮಾಡಿಸಿಕೊಂಡಿದ್ದ ಮುಖ್ಯಶಿಕ್ಷಕ, ಸ್ವಂತ ಹೆಸರಿನಲ್ಲಿ ಡ್ರಾ ಮಾಡಿಕೊಂಡಿದ್ದಾರೆ’ ಎಂದು ರಜಾಕ್ ಭಾಷಾ ದೊಡ್ಡಮನಿ ದೂರಿದರು.

‘250 ಮಕ್ಕಳಿದ್ದ ಶಾಲೆಯಲ್ಲಿ ಈಗ ಕೇವಲ 70 ಮಕ್ಕಳಿದ್ದಾರೆ. ಶಿಕ್ಷಣದ ಮಟ್ಟ ಕುಸಿದಿದೆ. ಆಹಾರ ವಿತರಣೆಯಲ್ಲೂ ಲೋಪವಾಗುತ್ತಿದೆ. ಇದನ್ನು ಸರಿಪಡಿಸಲು ಹೊರಟಿದ್ದಕ್ಕಾಗಿ ನನ್ನನ್ನೇ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ’ ಎಂದರು.

ಪುಸ್ತಕ ಖರೀದಿ:

‘ವೃತ್ತಿ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೇ ಕೆಲಸ ಮಾಡಿದ್ದೇನೆ. ಕೆಲವೇ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದೇನೆ. ಈಗ ನನ್ನ ಹೆಸರು ಕೆಡಿಸುವ ಪ್ರಯತ್ನ ನಡೆದಿದೆ. ಶಾಲೆಗೆ ಪುಸ್ತಕ ಖರೀದಿಗಾಗಿ ಬಂದಿದ್ದ ಹಣ ವಾಪಸು ಹೋಗುವ ಸಾಧ್ಯತೆ ಇತ್ತು. ಹೀಗಾಗಿ, ಡ್ರಾ ಮಾಡಿಕೊಂಡು ಪುಸ್ತಕ ತಂದಿದ್ದೇನೆ. ಇದು ಮಾಜಿ ಅಧ್ಯಕ್ಷರಿಗೂ ಗೊತ್ತಿರುವ ಸಂಗತಿ’ ಎಂದು ಮುಖ್ಯ ಶಿಕ್ಷಕ ಉಮರಸಾಬ್ ಟಾಸ್ಕ್‌ನವರ ತಿಳಿಸಿದ್ದಾರೆ.

‘ಇತ್ತೀಚೆಗೆ ನಡೆದ ಸಭೆಯಲ್ಲೂ ಅಧ್ಯಕ್ಷ-ಸದಸ್ಯರ ನಡುವೆ ಗಲಾಟೆ ಆಗಿದೆ. ಇದಾದ ನಂತರವೇ ಸಭೆ ಮಾಡಿ ಅವಿಶ್ವಾಸ ಗೊತ್ತುವಳಿ ಮಾಡಲಾಗಿದೆ. ಇದರ ವಿಡಿಯೊಗಳು ನನ್ನ ಬಳಿಯಿದ್ದು, ಎಲ್ಲವನ್ನೂ ಸಂಬಂಧಪಟ್ಟ ಅಧಿಕಾರಿಗಳಿಗೆ ವಹಿಸಲು ಸಿದ್ಧವಿದ್ದೇನೆ’ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *