378 ಕೋಟಿ ಕ್ರಿಪ್ಟೋ ಹ್ಯಾಕ್-ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಕ್ರೈಂ

ಬೆಂಗಳೂರು:ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವೊಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ನ ಸರ್ವರ್ ಹ್ಯಾಕ್ ಮಾಡಿ, ಸೈಬರ್ ಖದೀಮರು 44 ಮಿಲಿಯನ್ USDT (ಅಂದಾಜು 378 ಕೋಟಿ ರೂಪಾಯಿ) ಕಳವು ಮಾಡಿದ್ದಾರೆ.

ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒರ್ವ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ:
ನೆಬಿಲೊ ಟೆಕ್ನಾಲಜಿಸ್ ಕಂಪನಿಯು ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಪ್ಲಾಟ್‌ಫಾರ್ಮ್ ಒದಗಿಸುವ ಕೆಲಸ ಮಾಡುತ್ತದೆ. ದೂರಿನ ಪ್ರಕಾರ, 19/7/2025 ರಂದು ಬೆಳಗಿನ ಜಾವ 2:37ಕ್ಕೆ ಕಂಪನಿಯ ವಾಲೆಟ್‌ನಿಂದ 1 USDT ಅನ್ನು ಅಪರಿಚಿತ ವಾಲೆಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಮತ್ತೆ ಬೆಳಿಗ್ಗೆ 9:40ಕ್ಕೆ ಸೈಬರ್ ವಂಚಕರು ಸರ್ವರ್‌ಗೆ ಅಕ್ರಮವಾಗಿ ಪ್ರವೇಶಿಸಿ, 44 ಮಿಲಿಯನ್ USDT (378 ಕೋಟಿ ರೂ.) ವರ್ಗಾವಣೆ ಮಾಡಿದ್ದಾರೆ.
ಕಂಪನಿಯ ಆಂತರಿಕ ತನಿಖೆಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ನಿಯಮದ ಪ್ರಕಾರ ಕಂಪನಿಯ ಲ್ಯಾಪ್‌ಟಾಪ್ ಬೇರೊಂದು ಕಡೆ ಕೆಲಸ ಮಾಡಲು ಬಳಸುವಂತಿಲ್ಲ. ಆದರೆ ಕಂಪನಿಯ ನೌಕರ ರಾಹುಲ್ ಅಗರ್ವಾಲ್ ಕಂಪನಿಯ ಲ್ಯಾಪ್‌ಟಾಪ್ ಬಳಸಿ ಬೇರೊಂದು ಕಡೆ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದನೆಂದು ತಿಳಿಬಂದಿದೆ. ಅಷ್ಟೇ ಅಲ್ಲ ಅಲ್ಲಿ ಕೆಲಸ ಮಾಡಿ ಸುಮಾರು, 15 ಲಕ್ಷ ರೂಪಾಯಿ ಗಳಿಸಿದ್ದ ಎನ್ನಲಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆತನ ಲ್ಯಾಪ್‌ಟಾಪ್ ಮೂಲಕ ಸೈಬರ್ ಖದೀಮರು ಸರ್ವರ್‌ಗೆ ಒಳನುಗ್ಗಿದ್ದಾರೆ. ಬಳಿಕ ಖದೀಮರು ಕಂಪನಿಯ ವಾಲೆಟ್‌ನಿಂದ ದೊಡ್ಡ ಮೊತ್ತದ ಕ್ರಿಪ್ಟೋ ಕರೆನ್ಸಿಯನ್ನು ಕದ್ದಿದ್ದಾರೆ.
ಪೊಲೀಸ್ ಕಾರ್ಯಾಚರಣೆ:
ವೈಟ್‌ಫೀಲ್ಡ್ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾಹುಲ್ ಅಗರ್ವಾಲ್ ಎಂಬಾತನನ್ನು ಆರೋಪಿಯಾಗಿ ಬಂಧಿಸಲಾಗಿದೆ. ಆತನ ಲ್ಯಾಪ್‌ಟಾಪ್ ಮೂಲಕವೇ ಹ್ಯಾಕಿಂಗ್ ನಡೆದಿರುವ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ತನಿಖೆ ಮುಂದುವರಿದಿದ್ದು, ಇತರ ಸಂಬಂಧಿತ ಖದೀಮರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಕರ್ನಾಟಕದಲ್ಲೇ ದೊಡ್ಡ ಸೈಬರ್ ಕ್ರೈಂ:
ಒಂದೇ ಪ್ರಕರಣದಲ್ಲಿ 378 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕ್ರಿಪ್ಟೋ ಕರೆನ್ಸಿ ಕಳವುಗೊಂಗಿರುವ ಈ ಘಟನೆ, ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಕ್ರೈಂ ಎಂದು ಗುರುತಿಸಲಾಗಿದೆ. ನೆಬಿಲೊ ಟೆಕ್ನಾಲಜಿಸ್ ಭಾರತದ ಪ್ರಮುಖ ಕ್ರಿಪ್ಟೋ ಕರೆನ್ಸಿ ಕಂಪನಿಗಳಲ್ಲಿ ಒಂದಾಗಿದ್ದು, ಈ ಘಟನೆ ಕಂಪನಿಯ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸದ್ಯ ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿ ಇತರ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
