10ನೇ ತರಗತಿ ವಿದ್ಯಾರ್ಥಿನಿಗೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ, ಮಗುವಿಗೆ ಜನನ!

ಹೊಸದುರ್ಗ: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಂದೆ 48ರ ಹರೆಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಮೂಲದವನಾಗಿದ್ದು ಪ್ರಸ್ತುತ ಕಾಂಞಂಗಾಡ್‌ನ ಕ್ವಾರ್ಟರ್ಸ್‌ನಲ್ಲಿ ನೆಲೆಸಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪತ್ನಿ ಹಾಗೂ ಐವರು ಮಕ್ಕಳ ಜತೆಯಲ್ಲಿ ಆತ ವಾಸಿಸುತ್ತಿದ್ದ. ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕವಷ್ಟೇ ದೌರ್ಜನ್ಯ ಬಯಲಾಗಿತ್ತು. ಹೆರಿಗೆಯ ಸಂದರ್ಭ ತೀವ್ರ ರಕಸ್ರಾವವಾದ ಕಾರಣ ಕೂಡಲೇ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯ ಅಧಿಕಾರಿಗಳು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಬಾಲಕಿಯಿಂದ ಹೇಳಿಕೆ ಸಂಗ್ರಹಿಸಿ ಪೊಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು.
ದೌರ್ಜನ್ಯ ನಡೆಸಿದವರ ಮಾಹಿತಿ ನೀಡಲು ಬಾಲಕಿ ಮುಂದಾಗದ ಹಿನ್ನೆಲೆಯಲ್ಲಿ ನವಜಾತ ಶಿಶುವಿನ ಡಿಎನ್‌ಎ ತಪಾಸಣೆ ನಡೆಸಲು ಪೊಲೀಸರು ಮುಂದಾದರು. ಆಗ ತಂದೆಯೇ ಆರೋಪಿ ಎಂದು ತಿಳಿದು ಬಂದಿತ್ತು. ತಂದೆಯನ್ನು ಬಂಧಿಸಲಾಗಿದ್ದು, ಆತನ ಡಿಎನ್‌ಎ ತಪಾಸಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ