ಕಣ್ಣೂರಿನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ: ಬಸ್ ಪಾಸ್ ವಿಚಾರಕ್ಕೆ ಕ್ರೂರ ಥಳಿತದ ವಿಡಿಯೋ ವೈರಲ್!

ಕಣ್ಣೂರು: ಬಸ್ ಪಾಸ್ ಇಲ್ಲದೇ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕೆಳಗಿಳಿಸಿದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ವಿಡಿಯೊವೊಂದು ವೈರಲ್ ಆಗುತ್ತಿದೆ.

ಕೇರಳದ ಕಣ್ಣೂರಿನಲ್ಲಿ ಈ ಘಟನೆ ನಡೆದಿದ್ದು, ಕರ್ತವ್ಯದಲ್ಲಿದ್ದ ಕಂಡಕ್ಟರ್ ಮೇಲೆ ಮೂರು ಜನ ಹಲ್ಲೆ ಮಾಡಿದ್ದಾರೆ.
ಮೂಲಗಳ ಪ್ರಕಾರ ರಿಯಾಯಿತಿ ಪಾಸ್ ಇಲ್ಲದ್ದಕ್ಕೆ ಕಂಡಕ್ಟರ್ ಮಹಿಳೆಯನ್ನು ಬಸ್ಸಿನಿಂದ ಕೆಳಗಿಳಿಸಿದ್ದ.
ಬಳಿಕ ಆಕೆ ಈ ವಿಚಾರವನ್ನು ತನ್ನ ಗಂಡನಿಗೆ ತಿಳಿಸಿದ್ದು, ಕಂಡಕ್ಟರ್ ನಡೆಯಿಂದ ಆಕ್ರೋಶಗೊಂಡ ಪತಿ ತನ್ನ ಸ್ನೇಹಿತರೊಂದಿಗೆ ಸೇರಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ.
ಕಣ್ಣೂರಿನಿಂದ ತಲಶ್ಶೇರಿಗೆ ಚಲಿಸುತ್ತಿದ್ದ ಬಸ್ಸಿನಲ್ಲಿ ಕಂಡಕ್ಟರ್ ನನ್ನು ಕ್ರೂರವಾಗಿ ಥಳಿಸಲಾಗಿದೆ. ನಾದಾಪುರದ ಇರಿಂಗಣ್ಣೂರಿನ ನಿವಾಸಿ ವಿಷ್ಣು ಎಂಬ ಕಂಡಕ್ಟರ್ ನನ್ನು ಥಳಿಸಲಾಗಿದೆ.
ಕಂಡಕ್ಟರ್ ವಿಷ್ಣು ಬಸ್ ನಲ್ಲಿದ್ದ ಮಹಿಳೆ ಜೊತೆಗೆ ರಿಯಾಯಿತಿ ಪಾಸ್ ಇಲ್ಲ ಎಂಬ ಕಾರಣಕ್ಕೆ ವಾಗ್ವಾದ ನಡೆಸಿದ್ದ. ಈ ವಾಗ್ವಾದ ಮತ್ತು ಸಂಘರ್ಷದಲ್ಲಿ ಮಹಿಳೆಯ ಫೋನ್ ಕೆಳಗ ಬಿದ್ದು ಜಖಂ ಆಗಿತ್ತು. ಬಳಿಕ ಪಾಸ್ ಇಲ್ಲದ ಕಾರಣ ಆಕೆಯನ್ನುಬಸ್ಸಿನಿಂದ ಕೆಳಗಿಳಿಸಿದ್ದ.
ಈ ವಿಚಾರ ತಿಳಿದ ಯುವತಿಯ ಪತಿ ತನ್ನ ಸ್ನೇಹಿತರ ಜೊತೆಗೂಡಿ ಬಸ್ ಗೆ ಹತ್ತಿದ್ದಾರೆ. ಈ ವೇಳೆ ನೋಡ ನೋಡುತ್ತಲೇ ಕಂಡಕ್ಟರ್ ಗೆ ಥಳಿಸಿದ್ದಾರೆ. ತಲಶ್ಶೇರಿ-ತೊಟ್ಟಿಲ್ ಪಾಲಂ ಮಾರ್ಗದಲ್ಲಿ ಚಲಿಸುವ ಜಗನ್ನಾಥ್ ಬಸ್ ನಲ್ಲಿ ಈ ದಾಳಿ ನಡೆದಿದೆ.
ನಿನ್ನೆ ಸಂಜೆ 6.30 ಕ್ಕೆ ಪೆರಿಂಗತ್ತೂರಿನಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಕಂಡಕ್ಟರ್ ನನ್ನು ತಲಶ್ಶೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯ ವಿಡಿಯೋ ಬಸ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಸಲ್ಲಿ ಸೆರೆಯಾಗಿದ್ದು ವ್ಯಾಪಕ ವೈರಲ್ ಆಗಿದೆ.
