ಹೆಸರಿನ ಒಂದಕ್ಷರ ಬದಲಾವಣೆ, 17 ವರ್ಷ ಕಾನೂನು ಹೋರಾಟದ ಬಳಿಕ ವ್ಯಕ್ತಿ ಖುಲಾಸೆ!

ಆಗ್ರಾ: ಹೆಸರಿನ ಕೇವಲ ಒಂದಕ್ಷರ ಬದಲಾದ ಕಾರಣ, 22 ದಿನ ಜೈಲು ವಾಸ ಹಾಗೂ 17 ವರ್ಷಗಳ ಕಾನೂನು ಹೋರಾಟ ಮುಗಿಸಿ ಉತ್ತರಪ್ರದೇಶದ ರಾಜವೀರ್ ಸಿಂಗ್ ಯಾದವ್ ಎಂಬಾತ ಕೊನೆಗೂ ಖುಲಾಸೆಯಾಗಿದ್ದಾನೆ

2008ರಲ್ಲಿ ಮೈನ್‌ಪುರಿ ಪ್ರದೇಶದಲ್ಲಿ ನಡೆದ ಚುನಾವಣೆ ವೇಳೆ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಆದರೆ ಗ್ಯಾಂಗ್ ಚಾರ್ಟ್ ತಯಾರಿಸುವಾಗ ರಾಮವೀರ್ ಬದಲು ರಾಜವೀರ್ ಎಂದು ಪೊಲೀಸರು ಬರೆದಿದ್ದರು. ಹೀಗಾಗಿ ತಮ್ಮನ ಬದಲಿಗೆ ಅಣ್ಣನಾದ ರಾಜವೀರ್ ಬಂಧನಕ್ಕೊಳಗಾದರು.
“ನಾನು ಅವನಲ್ಲ’ ಎಂದು ಕೋರ್ಟ್ ಮುಂದೆ ಕೆಲವೇ ದಿನಗಳಲ್ಲಿ ರಾಜವೀರ್ ಸಾಬೀತುಗೊಳಿಸಿದರೂ, ಅವರ ಹೆಸ ರನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿದ್ದ ರಿಂದ ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಯಿತು. ಇದೀಗ ಮೈನ್‌ಪುರಿ ಕೋರ್ಟ್ ರಾಜವೀರ್‌ನನ್ನು ಖುಲಾಸೆಗೊಳಿಸಿ, ತನಿಖೆ ನಡೆಸಿದ್ದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಆದಾಗ್ಯೂ 17 ವರ್ಷ ಕೋರ್ಟ್‌ಗೆ ಅಲೆಸಿ, ತನ್ನ ಜೀವನ ಹಾಳು ಮಾಡಿದ್ದಕ್ಕೆ ಪೊಲೀಸರು ಪರಿಹಾರ ನೀಡಬೇಕೆಂದು ರಾಜವೀರ್ ಆಗ್ರಹಿಸಿದ್ದಾರೆ.