ಮೊಬೈಲ್ ಕದ್ದ ಕಳ್ಳನಿಗೆ ಧರ್ಮದೇಟು, ಚಲಿಸುವ ರೈಲಿನಿಂದ ಹಾರಿ ಪರಾರಿ!

ಬಿಹಾರ : ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಫೋನ್ ಗಳನ್ನು ಕದಿಯುತ್ತಿದ್ದವನಿಗೆ (Mobile phone theft) ಪ್ರಯಾಣಿರು ಸೇರಿ ಧರ್ಮದೇಟು ಕೊಟ್ಟಿರುವ ಘಟನೆ ಬಿಹಾರ (Bihar) ನಡೆದಿದೆ. ಪ್ರಯಾಣಿಕರ ಒದೆಗಳನ್ನು ತಾಳಲಾರದೇ ಕಳ್ಳ ತನ್ನ ಜೀವ ಉಳಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಧುಮುಕಿ (Jump from train) ಪರಾರಿಯಾಗಿದ್ದಾನೆ.

ಭಗಲಪುರ ಮತ್ತು ಮುಝಾಫರಪುರ ನಡುವೆ ಸಂಚರಿಸುವ ಜನಸೇವಾ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಜು. 22 ರಂದು ಈ ಪ್ರಕರಣ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಯಾಣಿಕರಿಂದ ಮೊಬೈಲ್ ಲಪಟಾಯಿಸುತ್ತಿದ್ದ ವೇಳೆ ಯುವಕ ಜನರ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಪ್ರಯಾಣಿಕರು ಆತನಿಗೆ ಧರ್ಮದೇಟು ಕೊಟ್ಟಿದ್ದಾರೆ. ಜನರ ಏಟುಗಳನ್ನು ತಡೆಯಲಾರದೇ ಕಳ್ಳ ರೈಲಿನಿಂದ ಹಾರಿದ್ದಾನೆ.
ಹೊಡೆತಗಳನ್ನು ಕೊಡುವಾಗಲೇ ಕಳ್ಳ ರೈಲಿನ ಬಾಗಿಲಿನಿಂದ ಕೆಳಗಿಳಿದು ನೇತಾಡಲಾರಂಭಿಸಿದ. ಆಗ ಕಳ್ಳನಿಗೆ ಬೆದರಿಕೆ ಹಾಕಿದ ಪ್ರಯಾಣಿಕರು ಮೇಲೆ ಬರುವಂತೆ ಒತ್ತಾಯಿಸಿದ್ದರು. ಅಲ್ಲದೇ ಮೇಲೆ ಬಂದರೆ ಮತ್ತಷ್ಟು ಹೊಡೆಯುವುದಾಗಿ ಬೆದರಿಕೆಯನ್ನೂ ಹಾಕಿ ಅಶ್ಲೀಲ ಪದಗಳಿಂದ ನಿಂದಿಸಿದ್ದರು. ಬರಿಯಾರ್ ಪುರ ಸ್ಟೇಷನ್ ಹತ್ತಿರದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದಲೇ ಕಳ್ಳನು ಧುಮುಕಿದ್ದಾನೆ.
ಈ ವಿಡಿಯೋ ವೈರಲ್ ಆದ ಬಳಿಕ ರೈಲ್ವೇ ಎಸ್ಪಿ ಡಾ. ರಮಣ್ ಚೌದರಿ ತನಿಖೆಗೆ ಆದೇಶ ನೀಡಿದ್ದಾರೆ. ಧುಮುಕಿದ ಕಳ್ಳನನ್ನು ಪತ್ತೆ ಹಚ್ಚಲು ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬರಿಯಾಪುರ ಪ್ರದೇಶವು ಮೊದಲಿನಿಂದಲೂ ಕಳ್ಳತನ, ಲೂಟಿ ಹಾಗೂ ದರೋಡೆ ಪ್ರಕರಣಗಳಿಗೆ ಕುಪ್ರಸಿದ್ಧಿ ಹೊಂದಿದೆ.
