ಮುಂಬೈ ಆಸ್ಪತ್ರೆ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು

ಮುಂಬೈ: ಮಕ್ಕಳ ಆಸ್ಪತ್ರೆಯ ವೈದ್ಯರ ಚೇಂಬರ್ ಒಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬ ತನ್ನನ್ನು ತಡೆದ ರಿಸೆಪ್ಶನಿಸ್ಟ್ ಮೇಲೆ ಹಲ್ಲೆ ಮಾಡಿ ನೆಲಕ್ಕೆ ಕೆಡವಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮುಂಬೈ ಸಮೀಪದ ಕಲ್ಯಾಣದಲ್ಲಿನ ಶ್ರೀ ಬಾಲ್ ಚಿಕಿತ್ಸಾಲಯ (Shree Bal Chikitsalaya) ಎಂಬ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹಲ್ಲೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಹೊಸದೊಂದು ವಿಡಿಯೊ ಹೊರ ಬಿದ್ದಿದೆ. ಅದರಲ್ಲಿ ಮೊದಲಿಗೆ ಆಸ್ಪತ್ರೆಯ ರಿಸೆಪ್ಶನಿಸ್ಟ್ ವ್ಯಕ್ತಿಯ ಸೋದರನ ಪತ್ನಿಗೆ (ಅತ್ತಿಗೆ) ಹೊಡೆಯುವುದು ಕಂಡು ಬಂದಿದೆ. ಹಿಂದೆ ವೈರಲ್ ಆಗಿದ್ದ ವಿಡಿಯೊದಲ್ಲಿ ಗೋಕುಲ್ ಝಾ ರಿಸೆಪ್ಶನಿಸ್ಟ್‌ಗೆ ಹೊಡೆದು, ಕೂದಲು ಎಳೆದು, ನಂತರ ನೆಲಕ್ಕೆ ಕೆಡವುತ್ತಿರುವ ದೃಶ್ಯ ವೈರಲ್ ಆಗಿತ್ತು.
ಹೊಸ ಸಿಸಿಟಿವಿ ದೃಶ್ಯದಲ್ಲಿ ಝಾ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸಹಿತ ಆಸ್ಪತ್ರೆಗೆ ಬಂದು ರಿಸೆಪ್ಶನಿಸ್ಟ್ ಅವರೊಂದಿಗೆ ವಾದದಲ್ಲಿ ತೊಡಗಿರುವುದನ್ನು ನೋಡಬಹುದು. ಈ ವೇಳೆ ಝಾ ಬೆದರಿಸುವ ರೀತಿಯಲ್ಲಿ ರಿಸೆಪ್ಶನಿಸ್ಟ್ ಹತ್ತಿರ ಬರುತ್ತಾನೆ. ಈ ಸಂದರ್ಭ ಆತನ ಸಬಂಧಕರೊಬ್ಬರು ಆತನನ್ನು ಹಿಂದಕ್ಕೆ ಹೋಗಲು ಒತ್ತಾಯಿಸುತ್ತಾರೆ.
ವಿವಾದ ಮುಂದುವರಿದಾಗ ಝಾ ಮತ್ತೊಮ್ಮೆ ಒಳಗೆ ನುಗ್ಗುತ್ತಾನೆ. ಆದರೆ ಈ ಬಾರಿ ಅವನೊಂದಿಗೆ ಬಂದ ಮತ್ತೊಬ್ಬ ಮಹಿಳೆ ಅವನನ್ನು ತಡೆದು ನಿಲ್ಲಿಸುತ್ತಾಳೆ. ನಂತರ ಅವನು ಹೊರಗೆ ಹೋಗುವಾಗ ರಿಸೆಪ್ಶನಿಸ್ಟ್ ತಮ್ಮ ಟೇಬಲ್ ಬಿಟ್ಟು ಹೊರಬಂದು ಕೆಲವು ಕಾಗದಗಳನ್ನು ನೆಲಕ್ಕೆ ಎಸೆಯುತ್ತಾ, ಅಲ್ಲಿಯೇ ನಿಂತಿದ್ದ ಝಾ ಅತ್ತಿಗೆ ಬಳಿ ನಡೆದು ಜೋರಾಗಿ ಕೂಗುತ್ತಾ ಕೆನ್ನೆಗೆ ಹೊಡೆದಿದ್ದಾಳೆ. ಈ ವೇಳೆ ಅವರೊಂದಿಗೆ ಬಂದ ಇನ್ನೊಬ್ಬ ಪುರುಷನು ಒಳಗೆ ಬಂದು ರಿಸೆಪ್ಶನಿಸ್ಟ್ ಕಡೆ ಬೆರಳು ತೋರಿಸುತ್ತಾ ವಾದಕ್ಕೆ ಇಳಿಯುತ್ತಾನೆ. ನಂತರ ಝಾ ಕೂಡ ಒಳಗೆ ಬರುತ್ತಾನೆ.
ಕೋಪಗೊಂಡ ಝಾ, ರಿಸೆಪ್ಶನಿಸ್ಟ್‌ಗೆ ಹೊಡೆದು, ಆಕೆಯನ್ನು ನೆಲಕ್ಕೆ ದೂಡುತ್ತಾನೆ. ನಂತರ ಅವನೊಂದಿಗೆ ಬಂದವರು ಅವನನ್ನು ಎಳೆಯುತ್ತಾ ದೂರಕ್ಕೆ ಕರೆದುಕೊಂಡು ಹೋಗುತ್ತಾರೆ. ಹಲ್ಲೆಗೊಳಗಾದ ರಿಸೆಪ್ಶನಿಸ್ಟ್‌ರನ್ನು ಎಬ್ಬಿಸಿ ಕುಳ್ಳಿರಿಸಲು ಆಸ್ಪತ್ರೆಯಲ್ಲಿದ್ದ ಇತರ ಜನರು ನೆರವಾಗಿದ್ದಾರೆ.
ಈ ಘಟನೆ ನಂತರ ರಿಸೆಪ್ಶನಿಸ್ಟ್‌ಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ, ಝಾನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಬುಧವಾರ, ಕಲ್ಯಾಣ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗೋಕುಲ್ ಝಾನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಝಾ ಬಂಧನದ ಮೊದಲು ಮಾತನಾಡಿದ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಥಾಣೆ ಮತ್ತು ಪಾಲಘರ್ ಘಟಕದ ಅಧ್ಯಕ್ಷ ಅವಿನಾಶ್ ಜಾಧವ್, ವಲಸೆಗಾರನೊಬ್ಬ ಮರಾಠಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಪೊಲೀಸರು ಕೂಡಲೇ ಆತನ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವ್ಹಾಣ್ ಉಪ ಪೊಲೀಸ್ ಆಯುಕ್ತ ಅತುಲ್ ಜೆಂಡೆ ಅವರನ್ನು ಭೇಟಿಯಾಗಿ ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದರು. ಶಿವಸೇನೆಯ ಜಿಲ್ಲಾಧ್ಯಕ್ಷ ದೀಪೇಶ್ ಮಹಾತ್ರೆ ಮತ್ತು ಸ್ಥಳೀಯ ಎಂಎನ್‌ಎಸ್ ನಾಯಕ ರಾಜು ಪಾಟೀಲ್ ಕೂಡಾ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.
