ವಂದೇ ಭಾರತ್ ರೈಲಿನಲ್ಲಿ ಆಹಾರದಲ್ಲಿ ಹುಳು ಪತ್ತೆ

ನವದೆಹಲಿ: ಭಾರತೀಯ ರೈಲ್ವೆಯ (Indian Railway) ಪ್ರತಿಷ್ಠಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ (Vande Bharat ) ಸರ್ವ್ ಮಾಡಲಾದ ಆಹಾರದಲ್ಲಿ ಹುಳಗಳು (Insect in Train Meal) ಕಂಡುಬಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಯಾಣಿಕ ಹಾರ್ದಿಕ್ ಪಾಂಚಾಲ್ ಎಂಬವರು ವಂದೇ ಭಾರತ್ ರೈಲಿನ ಆಹಾರದಲ್ಲಿ ಹುಳಗಳು ಕಂಡುಬಂದ ಫೋಟೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ X ನಲ್ಲಿ ಹಂಚಿಕೊಂಡಿದ್ದಾರೆ.
ಆ ಬಳಿಕ ಈ ಫೋಟೋ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ರೈಲ್ವೆಯ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಕುರಿತು ತೀವ್ರ ಟೀಕೆಗೆ ಗುರಿಯಾಗಿದೆ. ವೈರಲ್ ಫೋಟೋದಲ್ಲಿ ಅಲ್ಯೂಮಿನಿಯಂ ಕವರ್ನಲ್ಲಿ ಬಡಿಸಲಾದ ದಾಲ್ನಲ್ಲಿ ಸ್ಪಷ್ಟವಾಗಿ ಕಪ್ಪು ಹುಳು ತೇಲುತ್ತಿರುವುದು ಕಾಣಬಹುದಾಗಿದೆ. ಅಲ್ಲದೇ “ಓಹ್! ದಾಲ್ನಲ್ಲಿ ಕಪ್ಪು ಹುಳು!” ಎಂದು ಶೀರ್ಷಿಕೆ ನೀಡಿದ್ದಾರೆ. ಈ ಘಟನೆ ಜುಲೈ 22 ರಂದು ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 22440, ಕೋಚ್ C3, ಸೀಟ್ ಸಂಖ್ಯೆ 53 ರಲ್ಲಿ ನಡೆದಿದೆ ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ವಿಚಾರ ಸಾಕಷ್ಟು ಚರ್ಚಗೆ ಗ್ರಾಸವಾಗುತ್ತಿದ್ದಂತೆಯೇ ಬಳಕೆದಾರರು ಮೊದಲು ತಮ್ಮ ದೂರಿನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದರ ನಂತರ, ಬಳಕೆದಾರರು ತಪ್ಪನ್ನು ಸರಿಪಡಿಸಿದ್ದಾರೆ ಮತ್ತು ಹೊಸ ಪೋಸ್ಟ್ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಹ ಟ್ಯಾಗ್ ಮಾಡಿದ್ದಾರೆ.

ಬಳಕೆದಾರರ ದೂರಿನ ಮೇರೆಗೆ ರೈಲ್ವೆಯ ಅಧಿಕೃತ ರೈಲ್ವೆ ಸೇವಾ ಖಾತೆಯು ಕ್ಷಮೆಯಾಚಿಸಿದೆ. ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಬರೆಯಲಾಗಿದೆ! ದಯವಿಟ್ಟು ವಿವರಗಳು, PNR ಮತ್ತು ಮೊಬೈಲ್ ಸಂಖ್ಯೆಯನ್ನು ಕೂಡ ಹಂಚಿಕೊಳ್ಳಿ. ತಕ್ಷಣದ ಪರಿಹಾರಕ್ಕಾಗಿ ನೀವು ನಿಮ್ಮ ಕಳವಳವನ್ನು ನೇರವಾಗಿ https://railmadad.indianrailways.gov.in ನಲ್ಲಿಯೂ ವ್ಯಕ್ತಪಡಿಸಬಹುದು ಎಂದು ತಿಳಿಸಲಾಗಿದೆ.
ರೈಲಿನಲ್ಲಿ ಜಲಧಾರೆ: ಈ ಹಿಂದೆ ದೆಹಲಿಗೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸೆಸ್ ರೈಲಿನ ಬೋಗಿಯ ಮೇಲ್ಬಾವಣಿಯಿಂದ ನೀರು ಸುರಿಯಲು ಆರಂಭಿಸಿದ್ದು ಇದರಿಂದ ಪ್ರಯಾಣಿಕರು ಪರದಾಡಿದ ಪ್ರಸಂಗ ನಡೆದಿತ್ತು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ರೀತಿ ತೊಂದರೆ ಆಗುತ್ತಿರುವ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿರುವ ವ್ಯಕ್ತಿ ವಂದೇ ಭಾರತ್ ಟ್ರೈನ್ನಲ್ಲಿ ಫ್ರೀಯಾಗಿ ಜಲಪಾತವನ್ನ ಆರಂಭಿಸಲಾಗಿದೆ ಎಂದು ಬರೆದು ಗೇಲಿ ಮಾಡಲಾಗಿತ್ತು. ಬಹಳ ಮುಖ್ಯವಾದ ವಿಚಾರ ಎಂದರೆ ಇದೇ ವಂದೇ ಭಾರತ್ ರೈಲಿನಲ್ಲಿಈ ರೀತಿ ನೀರು ಸೋರಿಕೆ ಆಗುತ್ತಿರುವುದು ಇದೇ ಮೊದಲಲ್ಲ. 2024 ರಲ್ಲಿ ಇದೇ ರೀತಿಯ ಘಟನೆ ಆಗಿತ್ತು, ಅದೂ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು.