ಪಿಎಂ ಕಿಸಾನ್ ಯೋಜನೆಯ ಹಣ ಪಡೆಯುವಲ್ಲಿ ಸಮಸ್ಯೆ: ಖಾತೆ ವರ್ಗಾವಣೆ, ಭೂಮಿ ಖರೀದಿಯ ನಿಯಮಗಳೇನು?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು (PM Kisan Samman Nidhi Yojana) ರೈತರಿಗೆ (Farmer) ಧನ ಸಹಾಯ ನೀಡುವುದರ ಜೊತೆಗೆ, ವಿಶ್ವದಲ್ಲೇ ಅತಿದೊಡ್ಡ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಸ್ಕೀಮ್ ಎಂದೆನಿಸಿದೆ. ವರ್ಷದಲ್ಲಿ ಸುಮಾರು 60,000 ಕೋಟಿ ರೂಗಿಂತ ಹೆಚ್ಚಿನ ಧನಸಹಾಯವನ್ನು ರೈತರಿಗೆ ನೀಡಲಾಗುತ್ತದೆ.

10 ಕೋಟಿಗೂ ಅಧಿಕ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕೃಷಿ ಭೂಮಿ ಹೊಂದಿರುವ ರೈತರಿಗೆ ವರ್ಷದಲ್ಲಿ 6,000 ರೂ ಹಣವನ್ನು ಈ ಯೋಜನೆ ಅಡಿ ನೀಡಲಾಗುತ್ತದೆ. ಇ-ಕೆವೈಸಿ ಮಾಡಿಸದೇ ಇರುವುದು ಇತ್ಯಾದಿ ಕಾರಣಕ್ಕೆ ಕೆಲ ಲಕ್ಷಗಳಷ್ಟು ಫಲಾನುಭವಿಗಳಿಗೆ ಹಣ ಬರುತ್ತಿಲ್ಲ. ಈ ಮಧ್ಯೆ, ತಂದೆ ಅಥವಾ ತಾಯಿಯಿಂದ ಕೃಷಿ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ಅನೇಕರು ತಮಗೆ ಪಿಎಂ ಕಿಸಾನ್ ಹಣ ಬರುತ್ತಿಲ್ಲ ಎನ್ನುತ್ತಿದ್ದಾರೆ. ಏನು ಕಾರಣ?
ಖಾತೆ ವರ್ಗಾವಣೆ ಆದರೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ವಾ?
ಪಿಎಂ ಕಿಸಾನ್ ಯೋಜನೆ ಶುರುವಾಗಿದ್ದು 2019ರಲ್ಲಿ. ಆಗ 2019ರ ಫೆಬ್ರುವರಿ 1 ಅನ್ನು ಕಟ್ ಆಫ್ ದಿನ ಎಂದು ನಿಗದಿ ಮಾಡಲಾಗಿದೆ. ಆ ಡೇಟ್ ಇನ್ನೂ ಹಾಗೇ ಇದೆ. ಈ ದಿನಕ್ಕೆ ಮುಂಚೆ ಕೃಷಿ ಭೂಮಿಯ ಖಾತೆ ಯಾರೆಲ್ಲರ ಹೆಸರಲ್ಲಿದೆಯೋ ಅವರೆಲ್ಲರೂ ಫಲಾನುಭವಿಗಳಾಗಲು ಅರ್ಹರು. 2019ರ ಫೆಬ್ರುವರಿ 1ರ ಬಳಿಕ ಅಪ್ಪ ಅಥವಾ ಅಮ್ಮನಿಂದ ಖಾತೆ ವರ್ಗಾವಣೆ ಮಾಡಿಸಿಕೊಂಡ ಮಕ್ಕಳು ಪಿಎಂ ಕಿಸಾನ್ ಯೋಜನೆಯ ಹಣ ಸ್ವೀಕರಿಸಲು ಅರ್ಹರಾಗಿರುವುದಿಲ್ಲ.
ಅಪ್ಪ ಅಥವಾ ಅಮ್ಮ ನಿಧನರಾದ ಬಳಿಕ ಖಾತೆ ವರ್ಗಾವಣೆ ಮಕ್ಕಳಿಗೆ ಆಗಿದ್ದರೆ, ಆಗ ಮಕ್ಕಳು ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಅರ್ಹರಾಗಿರುತ್ತಾರೆ.
ಭೂಮಿ ಖರೀದಿಸಿದ್ದರೆ ಪಿಎಂ ಕಿಸಾನ್ ಹಣ ಸಿಗುತ್ತಾ?
2019ರ ಫೆಬ್ರುವರಿ 1ರ ಬಳಿಕ ನೀವು ಕೃಷಿ ಭೂಮಿಯನ್ನು ಖರೀದಿಸಿದ್ದರೆ ಪಿಎಂ ಕಿಸಾನ್ ಹಣ ಸ್ವೀಕರಿಸಲು ಅರ್ಹರಾಗಿರುತ್ತೀರಾ? ಹೌದು, ನೀವು ಫಲಾನುಭವಿಯಾಗಬಹುದು. ಆದರೆ, ನೀವು ಖರೀದಿಸಿದ್ದು ಕೃಷಿಭೂಮಿಯಾಗಿರಬೇಕು, ಅದರಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿರಬೇಕು.
ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ನೀವು ಕೃಷಿಭೂಮಿಯನ್ನು ಖರೀದಿಸಿದಾಕ್ಷಣ ಪಿಎಂ ಕಿಸಾನ್ ಯೋಜನೆಗೆ ಸೇರ್ಪಡೆಯಾಗುವುದಿಲ್ಲ. ಯೋಜನೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಕೃಷಿ ಭೂಮಿಯ ಪಹಣಿ, ಆಧಾರ್ ದಾಖಲೆಯೊಂದಿಗೆ ಯೋಜನೆಗೆ ನೊಂದಾಯಿಸಿಕೊಳ್ಳಬೇಕು. ನಿಮ್ಮ ಗ್ರಾಮದ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ನೊಂದಾಯಿಸಬಹುದು. ಅಥವಾ ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಸೆಕ್ಷನ್ಗೆ ಹೋಗಿಯೂ ಅರ್ಜಿ ಸಲ್ಲಿಸಬಹುದು.
