ಡೆಲ್ಟಾ ವಿಮಾನ ಎಂಜಿನ್ ನಲ್ಲಿ ಬೆಂಕಿ, ತುರ್ತು ಲ್ಯಾಂಡಿಂಗ್

ವಿಮಾನವೊಂದು ಆಕಾಶದಲ್ಲಿ ಹಾರುತ್ತಿದ್ದಾಗಲೇ ಅದರ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನ ತುರ್ತು ಲ್ಯಾಂಡಿಂಗ್ ಆದಂತಹ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ನಲ್ಲಿ ನಡೆದಿದೆ. ವಿಮಾನದ ಇಂಜಿನ್ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಯಾಣಿಕರು ಮಹಾ ದುರಂತವೊಂದರಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಜುಲೈ 18ರಂದು ಈ ಘಟನೆ ನಡೆದಿದೆ.
ಡೆಲ್ಟಾ ಬೋಯಿಂಗ್ 767 ವಿಮಾನವು ಲಾಸ್ ಏಂಜಲೀಸ್ ಏರ್ಪೋರ್ಟ್ನಿಂದ ಅಟ್ಲಾಂಟಾಗೆ ಟೇಕಾಫ್ ಆಗಿತ್ತು. ಆದರೆ ವಿಮಾನದ ಎಡಭಾಗದ ಇಂಜಿನ್ನಲ್ಲಿ ಬೆಂಕಿಯ ಜ್ವಾಲೆಗಳು ಎದ್ದೇಳುತ್ತಿದ್ದಿದ್ದನ್ನು ಗಮನಿಸಿದ ವಿಮಾನ ಸಿಬ್ಬಂದಿ ಕೂಡಲೇ ವಿಮಾನವನ್ನು ಲಾಸ್ ಏಂಜಲೀಸ್ ವಿಮಾನ ನಿಲ್ದಾಣದತ್ತ ತಿರುಗಿಸಿದ್ದು, ತುರ್ತು ಭೂಸ್ಪರ್ಶ ಮಾಡಿದ್ದಾರೆ.
ವಿಮಾನದ ಎಂಜಿನ್ನಲ್ಲಿ ಬೆಂಕಿ ಉರಿಯುತ್ತಿರುವ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಇಂಜಿನ್ನಲ್ಲಿ ಉರಿಯುತ್ತಿದ್ದ ಬೆಂಕಿ ನಂದಿಸಿದ್ದು, ದೊಡ್ಡ ಅನಾಹುತವೊಂದರಿಂದ ವಿಮಾನ ಪ್ರಯಾಣಿಕರು ಪಾರಾಗಿದ್ದಾರೆ. ವಿಮಾನದ ತುರ್ತು ಲ್ಯಾಂಡಿಂಗ್ ಅನ್ನು LA ಫ್ಲೈಟ್ಸ್ ಎಂಬ ವಾಯುಯಾನ ಯೂಟ್ಯೂಬ್ ಚಾನೆಲ್ ನೇರ ಪ್ರಸಾರ ಮಾಡಿದ್ದು, ಎಡ ಎಂಜಿನ್ನಲ್ಲಿ ಬೆಂಕಿ ಉರಿಯುತ್ತಿರುವುದು ಸೆರೆ ಆಗಿದೆ.
ಏವಿಯೇಷನ್ A2Z ವರದಿಯ ಪ್ರಕಾರ, ಜುಲೈ 18 ರಂದು ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಟ್ಲಾಂಟಾಗೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನದ ಎಡ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ತುರ್ತು ಲ್ಯಾಂಡ್ ಆಗಿದೆ ಎಂದು ವರದಿ ಮಾಡಿದೆ.
ಈ ವಿಮಾನವು 24.6 ವರ್ಷ ಹಳೆಯದಾಗಿದ್ದು, ಎರಡು GE CF6 ಎಂಜಿನ್ಗಳಿಂದ ನಡೆಸಲ್ಪಡುತ್ತಿದೆ. ಈ ವಿಮಾನದ ಪೈಲಟ್ಗಳು ತಕ್ಷಣವೇ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ವಾಯು ಸಂಚಾರ ನಿಯಂತ್ರಣವೂ ವಿಮಾನ ನಿಲ್ದಾಣದ ತುರ್ತು ತಂಡಗಳಿಗೆ ಎಚ್ಚರಿಕೆ ನೀಡಿ ವಿಮಾನ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ಗೆ ಸಹಕರಿಸಿತು. ವಿಮಾನ ಇಳಿಯುತ್ತಿದ್ದಂತೆ, ಅಲ್ಲಿನ ಅಗ್ನಿಶಾಮಕ ಸಿಬ್ಬಂದಿ ಎಂಜಿನ್ ಬೆಂಕಿಯನ್ನು ನಂದಿಸಿದರು. ಘಟನೆಯಲ್ಲಿ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಫ್ಲೈಟ್ರಾಡಾರ್ 24 ರ ನೀಡಿದ ಮಾಹಿತಿ ಪ್ರಕಾರ, ವಿಮಾನವು ಆರಂಭದಲ್ಲಿ ಪೆಸಿಫಿಕ್ ಮಹಾಸಾಗರದ ಮೇಲೆ ಹಾರುತ್ತಿತ್ತು ಆದರೆ ಬೆಂಕಿ ವಿಚಾರ ತಿಳಿಯುತ್ತಿದ್ದಂತೆ ಡೌನಿ ಮತ್ತು ಪ್ಯಾರಾಮೌಂಟ್ ಪ್ರದೇಶಗಳ ಮೇಲೆ ವಿಮಾನ ಸುತ್ತು ಹಾಕಿದ್ದು, ವಿಮಾನದ ಸಿಬ್ಬಂದಿಗೆ ಸುರಕ್ಷತಾ ಪ್ರೋಟೋಕಾಲ್ಗಳನ್ನು ಅನುಸರಿಸಲು ಮತ್ತು ವಿಮಾನವನ್ನು ಇಳಿಯಲು ಸಿದ್ಧಪಡಿಸಲು ಸಮಯವನ್ನು ನೀಡಿತು. ತುರ್ತು ಪರಿಸ್ಥಿತಿಯ ಉದ್ದಕ್ಕೂ, ವಿಮಾನವು ಸ್ಥಿರವಾದ ಎತ್ತರ ಮತ್ತು ವೇಗವನ್ನು ಕಾಯ್ದುಕೊಂಡಿತು ಎಂದು ವರದಿಯಾಗಿದೆ.
