ಲೀವ್ ಇನ್ ಪಾರ್ಟನರ್ ಎಎಸ್ಐ ಮಹಿಳೆ ಹ*ತ್ಯೆ – ಸಿಆರ್ಪಿಎಫ್ ಜವಾನ ಶರಣು

ಗುಜರಾತ್:ತನ್ನ ಜೊತೆ ಸಹ ಜೀವನ ನಡೆಸುತ್ತಿದ್ದ ವೃತ್ತಿಯಲ್ಲಿ ಎಎಸ್ಐ ಆಗಿದ್ದ ಮಹಿಳೆಯನ್ನು ಸಿಆರ್ಪಿಎಫ್ ಜವಾನನೋರ್ವ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್ನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಕೋಪದ ಭರದಲ್ಲಿ ಲೀವ್ ಇನ್ ಪಾರ್ಟನರ್ ಹತ್ಯೆ ಮಾಡಿದ ಬಳಿಕ ಆರೋಪಿ ಸಿಆರ್ಪಿಎಫ್ ಜವಾನ ತನ್ನ ಪ್ರೇಯಸಿ ಕೆಲಸ ಮಾಡುತ್ತಿದ್ದ ಠಾಣೆಯಲ್ಲಿಯೇ ಪೊಲೀಸರಿಗೆ ಶರಣಾಗಿದ್ದಾನೆ.
ಎಎಸ್ಐ 25 ವರ್ಷದ ಅರುಣಾ ನಾಥುಭಾಯ್ ಜಾಧವ್ ಕೊಲೆಯಾದ ಮಹಿಳೆ ಈಕೆ ಹಾಗೂ ಸಿಆರ್ಪಿಎಫ್ ಜವಾನ ದಿಲೀಪ್ ದಂಗಾಚಿಯಾ ಒಂದೇ ಮನೆಯಲ್ಲಿ ಜೊತೆಯಾಗಿ ವಾಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಇವರಿಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ವಾಗ್ವಾದ ಶುರುವಾಗಿದ್ದು, ಅದು ವಿಕೋಪಕ್ಕೆ ತಿರುಗಿದೆ. ಕೋಪದ ಭರದಲ್ಲಿ ದಿಲೀಪ್ ಅರುಣಾ ಬೇನ್ ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ಮರುದಿನ ಆಕೆ ಕೆಲಸ ಮಾಡುತ್ತಿದ್ದ ಕಚ್ನ ಅಂಜರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಆರೋಪಿ ಸಿಆರ್ಪಿಎಫ್ ಜವಾನ ಮರುದಿನ ಬೆಳಗ್ಗೆ ಪೊಲೀಸ್ ಠಾಣೆಗೆ ಬಂದು ಹಾಜರಾದ ಬಳಿಕವೇ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ಅರುಣಾ ಮೂಲತಃ ಸುರೇಂದ್ರನಗರ ನಿವಾಸಿಯಾಗಿದ್ದು, ಅಂಜರ್ನ ಗಂಗೋತ್ರಿ ಸೊಸೈಟಿ-2ನಲ್ಲಿ ವಾಸ ಮಾಡುತ್ತಿದ್ದರು. ಕೊಲೆ ಮಾಡಿದ ದಿಲೀಪ್ ಮಣಿಪುರದಲ್ಲಿ ಸಿಆರ್ಪಿಎಫ್ ಜವಾನನಾಗಿದ್ದ, ಅರುಣಾಳ ನೆರೆಯ ಗ್ರಾಮದ ನಿವಾಸಿಯಾಗಿದ್ದ, ಇಬ್ಬರೂ 2021ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಯವಾಗಿದ್ದರು. ಇದಾದ ನಂತರ ಲೀವಿಂಗ್ ಟುಗೆದರ್ನಲ್ಲಿದ್ದರು. ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇವರಿಬ್ಬರು ಶೀಘ್ರದಲ್ಲೇ ಮದುವೆಯೂ ಆಗುವುದಕ್ಕೆ ಮುಂದಾಗಿದ್ದರು ಹಾಗೂ ಆರೋಪಿ ದಿಲೀಪ್ ರಜೆಯ ಮೇರೆಗೆ ಕಚ್ಗೆ ಬಂದಿದ್ದ, ದಿಲೀಪ್ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ಮಾಡುವವರಿಗೆ ಬುದ್ಧಿ ಹೇಳಬೇಕಾದವರೆ ಇನ್ಸ್ಟಾಗ್ರಾಮ್ನಲ್ಲಿ ಸಿಕ್ಕವನ ಪ್ರೇಮಿಸಿ ಜೀವ ಕಳೆದುಕೊಂಡಿದ್ದು ವಿಪರ್ಯಾಸ.
