ಎಂಆರ್ಐ ಯಂತ್ರದಲ್ಲಿ ಸರ ಸಿಲುಕಿ ವ್ಯಕ್ತಿ ಸಾವು

ಅಮೇರಿಕಾ:ಸಾಮಾನ್ಯವಾಗಿ ಎಂಆರ್ಐ ಸ್ಕ್ಯಾನಿಂಗ್ ಮಾಡುವಾಗ ದೇಹದ ಮೇಲೆ ಯಾವುದೇ ವಸ್ತುಗಳು ಇರಬಾರದು ಎನ್ನುವ ನಿಯಮವಿದೆ. ಅದರಲ್ಲೂ ಲೋಹದ ವಸ್ತುಗಳನ್ನ ಯಾವುದೇ ಕಾರಣಕ್ಕೂ ಹಾಕಿಬಾರದು. ಆದರೆ ಇಲ್ಲೊಬ್ಬ ವ್ಯಕ್ತಿ ಅನುಮತಿಯಿಲ್ಲದೇ ಲೋಹದ ವಸ್ತುವನ್ನ ಧರಿಸಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಅನುಮತಿ ಇಲ್ಲದೇ ಎಂಆರ್ಐ ಕೋಣೆ ಪ್ರವೇಶಿಸಿದ ವ್ಯಕ್ತಿ
ಮಾಹಿತಿಗಳ ಪ್ರಕಾರ ಚೈನ್ ಧರಿಸಿದ್ದ ವ್ಯಕ್ತಿಯೊಬ್ಬ ಅನುಮತಿಯಿಲ್ಲದೆ ಎಂಆರ್ಐ ಕೋಣೆಗೆ ಪ್ರವೇಶಿಸಿದ್ದು, ಈ ಸಮಯದಲ್ಲಿ ಎಂಆರ್ಐ ಯಂತ್ರದೊಳಗೆ ಸಿಲುಕಿ ಗಂಭೀರ ಗಾಯಗೊಂಡು, ಸಾವನ್ನಪ್ಪಿದ್ದಾನೆ. ನಸ್ಸೌ ಕೌಂಟಿ ಪೊಲೀಸ್ ಇಲಾಖೆಯ ಪ್ರಕಾರ, ಬುಧವಾರ (ಜುಲೈ 16) ಅಲ್ಲಿನ ಸಮಯ ಸಂಜೆ 4:30 ರ ಸುಮಾರಿಗೆ ವೆಸ್ಟ್ಬರಿ ಗ್ರಾಮದ ನಸ್ಸೌ ಓಪನ್ ಎಂಆರ್ಐನಲ್ಲಿ ಈ ಘಟನೆ ನಡೆದಿದ್ದು, 61 ವರ್ಷದ ವ್ಯಕ್ತಿ ಎಂಆರ್ಐ ಯಂತ್ರ ಬಳಕೆಯಲ್ಲಿರುವ ಯಾವುದೇ ಅನುಮತಿ ಇಲ್ಲದೇ ಕೋಣೆಗೆ ಪ್ರವೇಶಿಸಿದ್ದು, ಕುತ್ತಿಗೆಗೆ ಲೋಹದ ಸರ ಧರಿಸಿದ್ದ ಕಾರಣದಿಂದ ಮ್ಯಾಗ್ನೇಟ್ ಹೊಂದಿರುವ ಯಂತ್ರ ಆತನನ್ನ ಎಳೆದುಕೊಂಡಿದೆ.
ತನಿಖೆ ಆರಂಭಿಸಿದ ಪೊಲೀಸರು
ಅಧಿಕಾರಿಗಳ ಪ್ರಕಾರ, ಯಂತ್ರದೊಳಗೆ ಆ ವ್ಯಕ್ತಿ ಹೋದ ನಂತರ ಸಿಕ್ಕಿಹಾಕಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನು ಆ ವ್ಯಕ್ತಿ ಎಂಆರ್ಐ ರೂಂಗೆ ಪ್ರವೇಶ ಮಾಡಿದ್ದು ಹೇಗೆ ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.
ಆಂಧ್ರದಲ್ಲೂ ಎಂಆರ್ಐ ಮೆಷಿನ್ನಿಂದ ಸಾವು
ಆಂಧ್ರಪ್ರದೇಶದಲ್ಲಿ ಕಳೆದ ಮೂರು ತಿಂಗಳ ಹಿಂದೆ MRI ಸ್ಕ್ಯಾನಿಂಗ್ ಗೆ ಹೋಗಿದ್ದ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದ ಘಟನೆ ನಡೆದಿತ್ತು.
61 ವರ್ಷದ ಮಹಿಳೆ ಸ್ಕ್ಯಾನಿಂಗ್ ವೇಳೆ ಸಾವನಪ್ಪಿದ್ದು, ಸ್ಕ್ಯಾನಿಂಗ್ ಗೆ ತೆರಳಿದ್ದಾಗಲೇ ಮಹಿಳೆ ಸುಸ್ತಾಗಿದ್ದು, ಟೆಕ್ನಿಷಿಯನ್ ಸ್ಕ್ಯಾನಿಂಗ್ ಮಾಡಲು ಆಗಲ್ಲ ಎಂದಿದ್ದರು. ಆದರೂ, ಡಾಕ್ಟರ್ ಸ್ಕ್ಯಾನ್ ಮಾಡೋಕೆ ಸೂಚಿಸಿದ್ದು , ನೋಡನೋಡ್ತಿದ್ದಂತೆ ಮಹಿಳೆ ಪ್ರಾಣ ಹೋಗಿದೆ. ಯಾವಾಗ ಮಷಿನ್ ನಲ್ಲಿ ಮಹಿಳೆ ಚಲನವಲನ ಕಂಡುಬರಲಿಲ್ಲ ಎಲ್ಲರೂ ಗಾಬರಿಯಾಗಿದ್ದಾರೆ. ನಂತರ ಪರೀಕ್ಷಿಸಿದಾಗ ಪ್ರಾಣ ಹೋಗಿರೋದು ಗೊತ್ತಾಗಿದೆ.
ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ
MRI ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ?
ದೇಹವನ್ನು ಸ್ಕ್ಯಾನ್ ಮಾಡಲು ಮತ್ತು ಅದರ “ಮೂಳೆ ಅಲ್ಲದ ಭಾಗಗಳು ಅಥವಾ ಮೃದು ಅಂಗಾಂಶಗಳ” ಫೋಟೋಗಳನ್ನ ತೆಗೆಯಲು ಈ ಮೆಷಿನ್ ಬಳಕೆ ಮಾಡಲಾಗುತ್ತದೆ. ಅದಕ್ಕಾಗಿ ಇದು ಕಾಂತೀಯ ಕ್ಷೇತ್ರವನ್ನು ರಚನೆ ಮಾಡಲಿ ಶಕ್ತಿಯುತ ಆಯಸ್ಕಾಂತಗಳನ್ನು ಬಳಸಿಕೊಂಡು ರೋಗ ಅಥವಾ ಕಾಯಿಲೆಗಳನ್ನು ಪತ್ತೆಹಚ್ಚಲು MRI ಯಂತ್ರಗಳು ಸಹಾಯ ಮಾಡುತ್ತದೆ. ಈ ಕಾಂತಿಯು ಕಬ್ಬಿಣದ ವಸ್ತುಗಳು, ಉಕ್ಕಿನ ವಸ್ತುಗಳು ಮತ್ತು ಇತರ ಕೆಲ ವಸ್ತುಗಳ ಮೇಲೆ ಪ್ರಬಲವಾದ ಶಕ್ತಿಯನ್ನು ಬೀರುತ್ತದೆ. ಹಾಗಾಗಿ ಆ ವಸ್ತುಗಳನ್ನ ಇಟ್ಟುಕೊಂಡು ಒಳಗೆ ಹೋಗಬಾರದು ಎನ್ನುವ ನಿಯಮವಿದೆ.