ಕಳ್ಳ ಬುದ್ಧಿ ಬಿಡದ ಪಾಕಿಸ್ತಾನ- ಪಾಕ್ ಡ್ರೋನ್ ಮೂಲಕ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣಿಕೆ

ಹೊಸದಿಲ್ಲಿ: ಆಪರೇಷನ್ ಸಿಂದೂರ ವೇಳೆ ಸ್ಥಗಿತವಾಗಿದ್ದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತೆ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ. ಪಾಠ ಕಲಿಯದ ಪಾಕಿಸ್ಥಾನ ನಡೆಸುತ್ತಿರುವ ಕೃತ್ಯದಿಂದ ಬಿಎಸ್‌ಎಫ್ ಮತ್ತೆ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಭಾರತದ ಗಡಿ ಗ್ರಾಮಗಳಿಗೆ ಡ್ರೋನ್ ಮುಖಾಂತರ ಪಾಕಿಸ್ಥಾನದಿಂದ ಮಾದ ಕವಸ್ತುಗಳು ತಲುಪುತ್ತಿದ್ದು, ಬಿಎಸ್‌ಎಫ್ ಪಡೆಗಳು ಪಂಜಾಬ್‌ನಲ್ಲಿ ಡ್ರೋನ್ ಸಮೇತ ಮಾಲನ್ನು ಇತ್ತೀಚೆಗೆ ವಶಪಡಿಸಿಕೊಂಡಿತ್ತು.
ಈ ಮೂಲಕ ಪಾಕ್‌ನ ಕಳ್ಳಸಾಗಣೆದಾರರ ಕುಕೃತ್ಯಗಳು ಮತ್ತೆ ಮುಂದುವರಿದಿರುವ ಸೂಚನೆ ದೊರೆತಂತಾಗಿದೆ.
ಮಾದಕವಸ್ತು ಮಾತ್ರವಲ್ಲದೇ, ಶಸ್ತ್ರಾಸ್ತ್ರಗಳನ್ನು ಪೂರೈಸಲು ಚೀನ ನಿರ್ಮಿತ ಸುಧಾರಿತ ಡ್ರೋನ್‌ಗಳನ್ನು ಪಾಕಿಗಳು ಬಳಸುತ್ತಿದ್ದು, ಈ ಹಿಂದೆ ಗಡಿಯಿಂದ ಕೇವಲ 1 ಕಿ.ಮೀ. ವ್ಯಾಪ್ತಿಯ ಪ್ರದೇಶ ತಲುಪುತ್ತಿದ್ದ ಡ್ರೋನ್‌ಗಳು ಇದೀಗ 2.5 ಕಿ.ಮೀ.ಗೂ ಹೆಚ್ಚು ಪ್ರದೇಶ ತಲುಪುತ್ತಿವೆ ಎನ್ನಲಾಗಿದೆ. ಇದು ಗಡಿ ಭದ್ರತೆಗೆ ಹೊಸ ಸವಾಲು ಒಡ್ಡಿದಂತಾಗಿದೆ. ಅಲ್ಲದೆ ಗಡಿ ಸಮೀಪ ಭಾರೀ ಎತ್ತರದಲ್ಲಿ ಡ್ರೋನ್ ಹಾರಿಸುವ ಪಾಕಿಗಳು, ಭಾರತದ ವಾಯುಸೀಮೆ ತಲುಪುತ್ತಿದ್ದಂತೆ ಕೆಳಮಟ್ಟದಲ್ಲಿ ಹಾರಿಸಲು ಪ್ರಾರಂಭಿಸುತ್ತಾರೆ. ಈ ವೇಳೆ ಜಿಗ್-ಜಾಗ್ ಮಾದರಿಯಲ್ಲಿ ಹಾರಾಟ ನಡೆಸುವ ಮೂಲಕ ರೇಡಾರ್ ಕಣ್ತಪ್ಪಿಸಲಾಗುತ್ತದೆ. ಅಲ್ಲದೆ ಉದ್ದೇಶ ಸಾಧನೆಯಾದ ಬಳಿಕ ಡ್ರೋನ್‌ಗಳನ್ನು ನಾಶಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ವ್ಯವಸ್ಥೆ ಸುಧಾರಣೆಗೆ ಆದ್ಯತೆ: ಬಿಎಸ್‌ಎಫ್
ಡ್ರೋನ್‌ನ ಶಬ್ದ ಆಧಾರಿಸಿ ಮತ್ತು ಕಣ್ಣಿಗೆ ಕಂಡುಬಂದ ಡ್ರೋನ್‌ಗಳನ್ನಷ್ಟೇ ನಾಶಪಡಿಸುವ ಸಾಮರ್ಥ್ಯವನ್ನು ಭಾರತದ ನಿಗ್ರಹ ವ್ಯವಸ್ಥೆಗಳು ಹೊಂದಿರುವುದು ಹಿನ್ನಡೆಗೆ ಕಾರಣವಾಗಿದೆ ಎನ್ನಲಾಗಿದ್ದು, ಕಣ್ಗಾವಲು ವ್ಯವಸ್ಥೆಗಳನ್ನು ಇನ್ನಷ್ಟು ಸುಧಾರಿಸಲು ಭಾರತ ಮುಂದಾಗಿದೆ ಎನ್ನಲಾಗಿದೆ. ಆದಾಗ್ಯೂ ಡ್ರೋನ್ ತಡೆಗೆ ಬಿಎಸ್‌ಎಫ್ ಪಡೆಗಳ ನಿಯೋಜನೆಯನ್ನು ಭಾರತ ಹೆಚ್ಚಿಸಿದೆ ಎನ್ನಲಾಗಿದೆ.
