ಕರ್ನಾಟಕದಲ್ಲಿ IPS ಮಹಿಳಾ ಅಧಿಕಾರಿಗಳ ಅಸಮಾಧಾನ: “ನಾವು ಅಧಿಕಾರ ವಂಚಿತ ಅಧಿಕಾರಿಣಿಯರು!”

ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದ ಬೆನ್ನಲ್ಲೇ ಮಹಿಳಾ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಎಕ್ಸಿಕ್ಯೂಟಿವ್ (ಆಡಳಿತಾತ್ಮಕ) ಹುದ್ದೆಯ ನಿರೀಕ್ಷೆಯಲ್ಲಿದ್ದ ಮಹಿಳಾ ಐಪಿಎಸ್ ಅಧಿಕಾರಿಗಳಿಗೆ ನಿರಾಸೆಯಾಗಿದೆ.

ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಹುದ್ದೆಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ನಮಗೂ ಇದೆ. ಸಾರ್ವಜನಿಕರ ನೋವಿಗೆ ಸ್ಪಂದಿಸಲು ಅವಕಾಶಕ್ಕಾಗಿ ಕಾಯುತ್ತಿದ್ದೇವೆ. ಆದರೆ, ಅವಕಾಶವೇ ದೊರೆಯುತ್ತಿಲ್ಲ. ನಾವೆಲ್ಲ ಅಧಿಕಾರ ವಂಚಿತ ಅಧಿಕಾರಿಣಿಯರು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ‘ನಾನ್ ಎಕ್ಸಿಕ್ಯೂಟಿವ್’ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿಗಳು ನೋವು ತೋಡಿಕೊಂಡಿದ್ದಾರೆ.
ಕೆಪಿಎಸ್‌ಸಿ ಮೂಲಕ ಆಯ್ಕೆಯಾದ 2006ನೇ ಬ್ಯಾಚ್‌ನ ಅಧಿಕಾರಿಗಳಿಗೆ 2012ರಲ್ಲಿ ಐಪಿಎಸ್‌ಗೆ ಬಡ್ತಿ ಸಿಕ್ಕಿತ್ತು. ಆಡಳಿತಾತ್ಮಕ ಕಾರಣಕ್ಕೆ ಒಬ್ಬ ಮಹಿಳಾ ಅಧಿಕಾರಿಗೆ ಮಾತ್ರ ಬಡ್ತಿ ಸಿಗುವುದು ವಿಳಂಬವಾಗಿತ್ತು. ಆ ಬ್ಯಾಚ್‌ನ ಬಹುತೇಕ ಪುರುಷ ಅಧಿಕಾರಿಗಳಿಗೆ ಎಕ್ಸಿಕ್ಯೂಟಿವ್ ಹುದ್ದೆ ದೊರೆತ್ತಿದ್ದು, ವಿವಿಧ ಜಿಲ್ಲೆ, ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವು ಮಹಿಳಾ ಅಧಿಕಾರಿಗಳು ‘ನಾನ್ ಎಕ್ಸಿಕ್ಯೂಟಿವ್’ ಸ್ಥಾನದಲ್ಲೇ ಕೆಲಸ ಮಾಡಬೇಕಾದ ಸ್ಥಿತಿಯಿದೆ. ‘ಎಕ್ಸಿಕ್ಯೂಟಿವ್’ ಹುದ್ದೆ ಲಭಿಸಿದರೂ ಕೆಲವೇ ತಿಂಗಳಲ್ಲಿ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಅಸಮಾಧಾನವಿದೆ.
‘ಮೂರು ದಿನಗಳ ಹಿಂದೆ ನಡೆದ ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಜಾತಿ ಬಲ, ಹಣ ಬಲ ಹಾಗೂ ರಾಜಕೀಯ ಒತ್ತಡ ಕೆಲಸ ಮಾಡಿದೆ. ಅದೇ ಕಾರಣದಿಂದ ಕಚೇರಿಯಲ್ಲಿ ತಮ್ಮ ಪಾಡಿಗೆ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗಳಿಗೆ ವರ್ಗಾವಣೆಯ ಅವಕಾಶ ಸಿಕ್ಕಿಲ್ಲ. ಹೊರ ರಾಜ್ಯದ ಐಪಿಎಸ್ ಅಧಿಕಾರಿಗಳಿಗೆ ಹೆಚ್ಚಿನ ಅವಕಾಶ ಲಭಿಸುತ್ತಿದೆ. ರಾಜ್ಯದ ಮಹಿಳಾ ಅಧಿಕಾರಿಗಳಿಗೆ ಎಕ್ಸಿಕ್ಯೂಟಿವ್ ಸ್ಥಾನದಲ್ಲಿ ದೀರ್ಘಕಾಲ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಹೇಳಿದರು.
‘ಎಸ್.ಸವಿತಾ ಅವರು 9 ವರ್ಷಗಳಿಂದ ಸಿಐಡಿಯಲ್ಲಿ ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರು ಸಿಐಡಿಯ ಮಾದಕವಸ್ತು ಹಾಗೂ ಸಂಘಟಿತ ಅಪರಾಧಗಳ ವಿಭಾಗದ ಎಸ್.ಪಿಯಾಗಿದ್ದಾರೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸದಾಗಿ ರಚನೆಯಾದ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿಯಾಗಿ ಸವಿತಾ ಅವರನ್ನು ವರ್ಗಾವಣೆ ಮಾಡುವ ಬಗ್ಗೆ ಚರ್ಚೆ ಆಗಿತ್ತು. ಆ ಜಾಗಕ್ಕೆ ಬೇರೆ ಅಧಿಕಾರಿಗೆ ಅವಕಾಶ ನೀಡುವಂತೆ ರಾಜಕೀಯ ಒತ್ತಡ ಬಂದ ಕಾರಣ ಸವಿತಾ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಯಿತು’ ಎಂದು ಮೂಲಗಳು ತಿಳಿಸಿವೆ.
‘ಸಂಚಾರ (ಉತ್ತರ) ವಿಭಾಗದ ಡಿಸಿಪಿಯಾಗಿದ್ದ ಡಿ.ಆರ್.ಸಿರಿಗೌರಿ ಅವರನ್ನು ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ. ಇದೇ ಹುದ್ದೆಗೆ ಅವರನ್ನು ಎರಡನೇ ಬಾರಿಗೆ ವರ್ಗಾವಣೆ ಮಾಡಲಾಗಿದೆ. ಜೆ.ಕೆ.ರಶ್ಮಿ ಅವರಿಗೆ ಈವರೆಗೂ ಎಕ್ಸಿಕ್ಯೂಟಿವ್ ಹುದ್ದೆಯೇ ಸಿಕ್ಕಿಲ್ಲ. ಎಂ.ಎಲ್.ಮಧುರಾ ವೀಣಾ ಅವರೂ ಕೆಲವು ವರ್ಷಗಳಿಂದ ಸಿಐಡಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಸ್ಥಳ ನಿರೀಕ್ಷೆಯಲ್ಲಿದ್ದ ಕೆ.ಧರಣಿ ದೇವಿ ಮಾಲಗತ್ತಿ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿಯಾಗಿ 2023ರಲ್ಲಿ ವರ್ಗ ಮಾಡಲಾಗಿತ್ತು. ಆ ಹುದ್ದೆಯಲ್ಲಿ ಅವರಿಗೆ ದೀರ್ಘಾವಧಿವರೆಗೆ ಅವಕಾಶ ನೀಡದೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಎಸ್‌ಪಿಯಾಗಿ ಕೆಲವು ತಿಂಗಳ ಹಿಂದೆ ವರ್ಗಾವಣೆ ಮಾಡಲಾಗಿತ್ತು’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.
ಹಲವು ಆದೇಶ
‘ಎಸ್.ಸವಿತಾ ಅವರಿಗೆ ಒಂದೇ ಹುದ್ದೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿಲ್ಲ’ ಎಂಬ ಆರೋಪವಿದೆ. ಮಾದಕ ವಸ್ತು ಮತ್ತು ಸೈಬರ್ ಅಪರಾಧಗಳ ವಿಭಾಗದಲ್ಲಿ ಹೆಚ್ಚುವರಿ ಜವಾಬ್ದಾರಿ ವಹಿಸುವುದು, ಮತ್ತೆ ವಾಪಸ್ ಪಡೆಯುವುದು ಮಾಡಲಾಗಿದೆ. ಕೊನೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸೈಬರ್ ಅಪರಾಧಗಳ ಕುರಿತು ಬರುವ ದೂರುಗಳ ಕುರಿತು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಮಹಿಳಾ ಐಪಿಎಸ್ ಅಧಿಕಾರಿ 2006ರ ಜುಲೈನಲ್ಲಿ ನೇಮಕಗೊಂಡ ಅಧಿಕಾರಿಗಳಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತಿದೆ. ಅದೇ ವರ್ಷದ ಜನವರಿಯಲ್ಲಿ ಆದೇಶ ಪ್ರತಿ ಲಭಿಸಿದ ಅಧಿಕಾರಿಗಳಿಗೆ ಮುಂಬಡ್ತಿಯೂ ವಿಳಂಬ ಆಗುತ್ತಿದೆ
