ಡಿಜಿಟಲ್ ಪಾವತಿ ನಿಲ್ಲಿಸಿದರೂ ಕಟ್ಟಬೇಕು ಜಿಎಸ್‌ಟಿ

ಜಿಎಸ್‌ಟಿ ನೋಟಿಸ್ ಬಂದಿದೆ ಎಂಬ ಕಾರಣಕ್ಕೆ ಡಿಜಿಟಲ್ ಪಾವತಿ ಗೇಟ್‌ವೇಗಳ ಬಳಕೆ ನಿಲ್ಲಿಸಲು ವರ್ತಕರು ಮುಂದಾಗಿರುವ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಗುರುವಾರ ಪ್ರಕಟಣೆ ಮೂಲಕ ಸ್ಪಷ್ಟನೆಯೊಂದನ್ನು ಹೊರಡಿಸಿದ್ದು, ನಗದು ವಹಿವಾಟು ಸೇರಿದಂತೆ ಯಾವುದೇ ಮಾದರಿಯಲ್ಲೂ ಮಾಡಿದರೂ ಜಿಎಸ್‌ಟಿ ಕಟ್ಟಲೇಬೇಕಾಗುತ್ತದೆ ಎಂದು ಹೇಳಿದೆ.
ರಾಜಿ ತೆರಿಗೆ ಪದ್ಧತಿ (Composition Tax Scheme) ಸ್ಪಷ್ಟನೆ

ವಾರ್ಷಿಕ ವಹಿವಾಟು 1.50 ಕೋಟಿ ರೂಪಾಯಿಗಂತ ಕಡಿಮೆ ಇರುವ ವ್ಯಾಪಾರಿಗಳು ಜಿಎಸ್‌ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು. ಈ ಪದ್ಧತಿಯಡಿಯಲ್ಲಿ ಶೇ 0.5 ಎಸ್ಜಿಎಸ್ಟಿ ಮತ್ತು ಶೇ 0.5 ಸಿಜಿಎಸ್ಟಿ ತೆರಿಗೆ ಪಾವತಿಸಬೇಕು. ಆದರೆ, ನೋಂದಣಿ ಪಡೆಯದೆ ನಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿ ಅನ್ವಯಿಸುವುದಿಲ್ಲ ಎಂದು ಇಲಾಖೆ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ನೋಟಿಸ್ ಪ್ರಕ್ರಿಯೆ ಮತ್ತು ಡಿಜಿಟಲ್ ವಹಿವಾಟಿನ ಅನಿವಾರ್ಯತೆ
ರಾಜ್ಯದಲ್ಲಿ ಈಗಾಗಲೇ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ವಾರ್ಷಿಕ ವಹಿವಾಟು ಮಿತಿ ಮೀರಿದ್ದರೂ ನೋಂದಣಿ ಪಡೆಯದೇ ಇರುವ ವರ್ತಕರಿಗೆ ನೋಟೀಸ್ ನೀಡುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ. ನೋಂದಾಯಿತ ವರ್ತಕರಿಗೆ ರಾಜಿ ತೆರಿಗೆ ಪದ್ಧತಿಯಡಿ ಶೇ. 1 ರಂತೆ ತೆರಿಗೆ ಪಾವತಿಸುವುದು ಕಷ್ಟಕರವಲ್ಲ ಎಂದು ಹೇಳಿರುವ ಇಲಾಖೆ, ಜಿಎಸ್‌ಟಿ ಕಾಯ್ದೆಯು ತೆರಿಗೆ ಪಾವತಿಯಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದಿದೆ.
ಇಲಾಖೆಯ ನೋಟೀಸ್‌ಗಳ ನಂತರ ಕೆಲವು ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ವರ್ತಕರು ತಾವು ಮಾಡಿದ ವಹಿವಾಟಿನ ಪ್ರತಿಫಲವನ್ನು ಯಾವುದೇ ರೂಪದಲ್ಲಿ (ನಗದು ಅಥವಾ ಡಿಜಿಟಲ್) ಪಡೆದಿದ್ದರೂ ಜಿ.ಎಸ್.ಟಿ. ತೆರಿಗೆ ಅನ್ವಯವಾಗುತ್ತದೆ. ಯುಪಿಐ ಕೇವಲ ಪ್ರತಿಫಲ ಪಡೆಯುವ ಒಂದು ಮಾರ್ಗ ಮಾತ್ರ. ವರ್ತಕರು ಯಾವುದೇ ರೂಪದಲ್ಲಾಗಲೀ ವಹಿವಾಟು ನಡೆಸಿದ್ದಲ್ಲಿ, ಅಂತಹ ವರ್ತಕರಿಂದ ಜಿ.ಎಸ್.ಟಿ ಕಾಯ್ದೆಯಡಿ ಅನ್ವಯಿಸುವ ತೆರಿಗೆಯನ್ನು ಸಂಗ್ರಹಿಸಲು ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಾಣಿಜ್ಯ ತೆರಿಗೆ
ವರ್ತಕರಿಗೆ ಇಲಾಖೆಯ ನೆರವು
ನೋಟಿಸ್ ಬಂದಿರುವ ವರ್ತಕರು ಕಚೇರಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಿದರೆ, ಅಧಿಕಾರಿಗಳು ನಿಯಮಗಳನ್ನು ಮತ್ತು ಪರಿಹಾರಗಳನ್ನು ತಿಳಿಸುತ್ತಾರೆ ಎಂದು ಇಲಾಖೆ ಭರವಸೆ ನೀಡಿದೆ. ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳನ್ನು ಹೊರತುಪಡಿಸಿ, ತೆರಿಗೆದಾಯಕ ವಹಿವಾಟಿಗೆ ಮಾತ್ರ ಅನ್ವಯಿಸುವ ದರಗಳನ್ವಯ ತೆರಿಗೆ ವಿಧಿಸಲಾಗುವುದು. ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ವರ್ತಕರಲ್ಲಿ ಸೂಕ್ತ ಮಾರ್ಗದರ್ಶನ, ಸಹಕಾರ ಹಾಗೂ ಅರಿವು ಮೂಡಿಸಲು ಮತ್ತು ಹೊಸದಾಗಿ ನೀಡಲಾಗುವ ನೋಂದಣಿಯನ್ನು ಯಾವುದೇ ತೊಂದರೆಯಾಗದಂತೆ ಸುಸೂತ್ರವಾಗಿ ನೀಡಲು ಸೂಚಿಸಲಾಗಿದೆ.