ಮಂಗಳೂರಿನಲ್ಲಿ ₹200 ಕೋಟಿ ವಂಚನೆ ಪ್ರಕರಣ: ಐಷಾರಾಮಿ ಬಂಗಲೆಯಿಂದ ಆರೋಪಿ ರೋಹನ್ ಸಲ್ಡಾನ ಬಂಧನ!

ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನಗರದ ಪೊಲೀಸರು 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ ಆರೋಪಿಯನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಶ್ರೀಮಂತ ವ್ಯಕ್ತಿಗಳು ಹಾಗೂ ಉದ್ಯಮಿಗಳನ್ನು ವಂಚಿಸಿರುವ ಆರೋಪದಲ್ಲಿ ಜಪ್ಪಿನಮೊಗರು ತಂದೊಳಿಗೆ ನಿವಾಸಿ ರೋಹನ್ ಸಲ್ಡಾನ (45) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿ ಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಮೋಸದ ಬಲೆಗೆ ಬೀಳಿಸುತ್ತಿದ್ದ ಆರೋಪಿ ತನ್ನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ನಡೆಸುತ್ತಿದ್ದ. ಈತ 5 ರಿಂದ 100 ಕೋಟಿ ರೂ.ವರೆಗೆ ವ್ಯವಹಾರ ಕುದುರಿಸಿಕೊಳ್ಳಿತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರಂಭಿಕ ಮಾತುಕತೆ ಬಳಿಕ ಉದ್ಯಮಿಗಳಿಂದ 50 -100 ಕೋಟಿ ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ವ್ಯವಹಾರಕ್ಕೆ 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಹಣ ಪಡೆದು ವ್ಯವಹಾರ ನಡೆಸಿ ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ನಾನಾ ನೆಪ ಹೇಳಿ ಉದ್ಯಮಿಗಳಿಂದ ತಪ್ಪಿಸಿಕೊಳ್ಳುತ್ತಿದ್ದ ಎಂದು ದೂರಲಾಗಿದೆ.
ಗುರುವಾರ ತಡರಾತ್ರಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಆರೋಪಿಯು ತನ್ನ ಮೋಸದ ಬಲೆಗೆ ಬಿದ್ದವರಿಂದ 50 ಲಕ್ಷದಿಂದ ನಾಲ್ಕು ಕೋಟಿ ವರೆಗೆ ಹಣ ಪಡೆದು ಆಮೇಲೆ ಯಾರಿಗೂ ಕಾಣದಂತೆ ನಿಗೂಢವಾಗಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ಮನೆಯಲ್ಲಿ ಸಾವಿರಾರು ರೂ. ಮೌಲ್ಯದ ಗಿಡಗಳು, ಐಷಾರಾಮಿ ಶಾಂಪೇನ್ ಗಳು, ಮಾದಕ ಪೇಯಗಳ ದಾಸ್ತಾನು ಕಂಡು ಪೊಲೀಸರೇ ದಂಗಾಗಿದ್ದಾರೆ.
ಭವ್ಯ ಬಂಗಲೆಯಂತಿರುವ ಆರೋಪಿಯ ಮನೆಯಲ್ಲಿ ಒಳಗಿಂದೊಳಗೆ ಐಷಾರಾಮಿ ವ್ಯವಸ್ಥೆಯ ಜೊತೆಗೆ ಅಡಗು ತಾಣಗಳು, ಅಲ್ಲಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.