ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ದಂಡ ವಿಧಿಸಿದ ನ್ಯಾಯಾಲಯ!

ಬೆಳ್ತಂಗಡಿ: ಇಲ್ಲಿನ ಪ್ರಥಮ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ಶಿವಪ್ರಸಾದ್ ಶೆಟ್ಟಿ ಎಂಬವರಿಗೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

1,97,345 ರೂ. ಮೊತ್ತದ ಚೆಕ್ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಲಯವು ಆರೋಪಿಗೆ 2,00,345 ರೂ.
ದಂಡ ವಿಧಿಸಿ, ಅದರ ಪೈಕಿ 1,99,345 ರೂ. ಅನ್ನು ಪರಿಹಾರ ಮೊತ್ತವಾಗಿ ದೂರುದಾರರಿಗೆ ಪಾವತಿಸಲು ಆದೇಶಿಸಿದೆ.
2022ರ ಸಪ್ಟೆಂಬರ್‌ನಲ್ಲಿ ಶ್ರವಣ್ ಕುಮಾರ್‌ಕೆ. ಅವರು ದೂರು ದಾಖಲಿಸಿದ್ದರು. ದ.ಕ. ಜಿಲ್ಲೆಯ ನ್ಯಾಯತರ್ಪು ಗ್ರಾಮದ ನಿವಾಸಿಯಾದ ಅವರು, ಲಾಯಿಲ ಗ್ರಾಮದ ಶಿವಪ್ರಸಾದ್ ಶೆಟ್ಟಿ ಎಂಬವರು ಸಾಲವಾಗಿ ಹಣ ಪಡೆದಿದ್ದು, ಅದನ್ನು ಹಿಂದಿರುಗಿಸಲು ಈ ಚೆಕ್ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಚೆಕ್ ಪಾವತಿಗೆ ಬ್ಯಾಂಕ್‌ಗೆ ಸಲ್ಲಿಸಿದಾಗ, ಖಾತೆಯಲ್ಲಿ ಹಣವಿಲ್ಲ ಎಂಬ ಕಾರಣದಿಂದ ಬ್ಯಾಂಕ್ ಅದನ್ನು ನಿರಾಕರಿಸಿತ್ತು.
ದೂರುದಾರರು ಈ ಸಂಬಂಧ ಕಾನೂನು ನೋಟಿಸ್ ಕಳುಹಿಸಿದ್ದರೂ ಆರೋಪಿತ ಹಣ ಪಾವತಿಸದೆ ನಿರ್ಲಕ್ಷಿಸಿದ್ದರು. ಇದರ ಬೆನ್ನಲ್ಲೇ ದೂರುದಾರರು ಕಾನೂನು ಕ್ರಮ ಕೈಗೊಂಡಿದ್ದರು. ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ 2 ವರ್ಷ 8 ತಿಂಗಳು ಕಾಲ ನಡೆಯಿತು. ನ್ಯಾಯಾಧೀಶರಾದ ಮನು ಬಿ.ಕೆ. ಅವರು ನೀಡಿದ ತೀರ್ಪಿನಲ್ಲಿ, ದೂರುದಾರರು ನೀಡಿದ ಸಾಕ್ಷ್ಯಗಳು ಹಾಗೂ ದಾಖಲೆಗಳನ್ನು ಆಧರಿಸಿ ಆರೋಪಿಗೆ ಶಿಕ್ಷೆ ವಿಧಿಸಲಾಯಿತು.
ದಂಡ ಪಾವತಿಸಲು ವಿಫಲರಾದರೆ, ಆರೋಪಿ 6 ತಿಂಗಳು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದಲ್ಲದೇ 1,000 ರೂ.ನ್ನು ರಾಜ್ಯ ಸರಕಾರದ ವ್ಯಯದ (Towards prosecution costs)ರೂಪದಲ್ಲಿ ಪಾವತಿಸಲು ಆದೇಶ ನೀಡಲಾಗಿದೆ.
