ಪತ್ನಿಯಿಂದ ವಿಚ್ಚೇದನದ ಖುಷಿಯಲ್ಲಿ ಹಾಲಿನಿಂದ ಸ್ನಾನ ಮಾಡಿದ ಪತಿ

ಪದೇಪದೆ ಪ್ರಿಯಕರನ ಜೊತೆ ಓಡಿ ಹೋಗುತ್ತಿದ್ದ ಪತ್ನಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದ ಖುಷಿಯಲ್ಲೇ ವ್ಯಕ್ತಿಯೊಬ್ಬ ಹಾಲಿನಿಂದ ಸ್ನಾನ ಮಾಡಿ, ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಸಂಭ್ರಮಿಸಿದ ವ್ಯಕ್ತಿಯನ್ನು ಮಾಣಿಕ್ ಅಲಿ ಎಂದು ಗುರುತಿಸಲಾಗಿದೆ.
ಡಿವೋರ್ಸ್ ಅನ್ನು ತನಗೆ ಸಿಕ್ಕ ಸ್ವಾತಂತ್ರ್ಯ ಅಂದುಕೊಂಡು ಮಾಣಿಕ್ ಸಂಭ್ರಮಾಚರಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಅಲಿ ತಮ್ಮ ಮನೆಯ ಹೊರಗೆ ಹಾಲು ತುಂಬಿದ ನಾಲ್ಕ ಬಕೆಟ್ ಜೊತೆಗೆ ಪ್ಲಾಸ್ಟಿಕ್ ಹಾಳೆಯ ಮೇಲೆ ನಿಂತಿರುವುದನ್ನು ಕಾಣಬಹುದು. ವಿಚ್ಛೇದನ ಪಡೆದ ಖುಷಿಯನ್ನು ಆಚರಿಸಲು ಒಂದರ ನಂತರ ಒಂದರಂತೆ ಹಾಲಿನ ಬಕೆಟ್ಗಳನ್ನು ತೆಗೆದುಕೊಂಡು ಸ್ನಾನ ಮಾಡಿದ್ದಾರೆ.
ಅಲಿ ಇಡೀ ಆಚರಣೆಯನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಅಲ್ಲದೆ, ನಾನು ಇಂದಿನಿಂದ ಮುಕ್ತನಾಗಿದ್ದೇನೆ ಎಂದು ಘೋಷಿಸುವುದನ್ನು ವಿಡಿಯೋದಲ್ಲಿ ಕೇಳಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದು, ವೈರಲ್ ಆಗುತ್ತಿದೆ. ಅನೇಕ ನೆಟ್ಟಿಗರು ವಿಡಿಯೋ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನನ್ನ ಹೆಂಡತಿ ತನ್ನ ಪ್ರೇಮಿಯೊಂದಿಗೆ ಪದೇಪದೆ ಓಡಿಹೋಗುತ್ತಲೇ ಇದ್ದಳು. ನಮ್ಮ ಕುಟುಂಬದ ಶಾಂತಿಗಾಗಿ ಏನೂ ಮಾತನಾಡದೇ ನಾನು ಮೌನವಾಗಿದ್ದೆ. ಇದೀಗ ಆಕೆಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ವಿಚ್ಛೇದನ ಅಂತಿಮಗೊಂಡಿದೆ ಎಂದು ನನ್ನ ವಕೀಲರು ನಿನ್ನೆ ನನಗೆ ತಿಳಿಸಿದರು. ಹಾಗಾಗಿ, ಇಂದು ನಾನು ನನ್ನ ಸ್ವಾತಂತ್ರ್ಯವನ್ನು ಆಚರಿಸಲು ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ವೈರಲ್ ವಿಡಿಯೋದಲ್ಲಿ ಅಲಿ ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ದಂಪತಿ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ಕೊನೆಗೊಳಿಸಲು ಪರಸ್ಪರ ನಿರ್ಧರಿಸುವ ಮೊದಲು ಆತನ ಪತ್ನಿ ಕನಿಷ್ಠ ಎರಡು ಬಾರಿ ಆಕೆಯ ಪ್ರಿಯಕರನೊಂದಿಗೆ ಓಡಿಹೋಗಿದ್ದಳು.
