ಕನ್ನಡಿಗರ ವಿರುದ್ಧ ಪ್ರೋಟೀನ್ ಆಧಾರಿತ ಗೇಲಿ – ಎಕ್ಸ್‌ನಲ್ಲಿ ಅವಹೇಳನ

ಕನ್ನಡ, ಕನ್ನಡಿಗರು, ಕರ್ನಾಟಕದ ಅಂದ್ರೆ ಕೆಲ ಉತ್ತರ ಭಾರತೀಯರಿಗೆ ಒಂಥರಾ ಅಸಹನೆ. ಊರು ಬಿಟ್ಟು ಇಲ್ಲೇ ಬಂದು, ಇಲ್ಲಿನ ಅನ್ನ ತಿಂದು ತೇಗಿದ್ರೂ, ಉಂಡ ಮನೆಗೆ ದ್ರೋಹ ಬಗೆಯೋ ನೀಚ ಬುದ್ಧಿ ಬಿಡೋದೇ ಇಲ್ಲ. ಕನ್ನಡಿಗರ ಸ್ವಂತ ನೆಲದಲ್ಲೇ ಕನ್ನಡ ಅಂದ್ರೆ ಕೆರಳೋದು, ಕನ್ನಡಿಗರು ಅಂದ್ರೆ ಗಲಾಟೆ ಮಾಡೋದು, ಧಮ್ಕಿ ಹಾಕಿ ಕೈ ಎತ್ತುವ ಮಟ್ಟಕ್ಕೂ ಬೆಳೆದಿರುವ ನಿದರ್ಶನಗಳು ಸಾಕಷ್ಟಿವೆ.
ಇನ್ನು ಕನ್ನಡಿಗರನ್ನು ಸದಾ ಅವಮಾನ, ಅವಹೇಳನ ಮಾಡುವುದು ಕೆಲವರಿಗೆ ಮೈಗೆ ಅಂಟಿರುವ ರೋಗ ಅಂದ್ರೆ ತಪ್ಪಾಗಲ್ಲ. ಇಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. “ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ” ಎಂದು ನಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕನ್ನಡಿಗರನ್ನು ಗೇಲಿ ಮಾಡುತ್ತಿದ್ದಾರೆ.

ಎಕ್ಸ್‌ನಲ್ಲಿ (ಟ್ವಿಟರ್) ಭಾರತದ ಪ್ರೋಟೀನ್ ಸೇವನೆ ಕುರಿತಾದ ರಾಜ್ಯವಾರು ಸರಾಸರಿ ಪಟ್ಟಿ ಹೊಂದಿರುವ ಫೋಟೋ ಹಂಚಿಕೊಳ್ಳಲಾಗಿದೆ. ಭಾರತದ ಜನರು ಪ್ರತಿದಿನ ಸರಾಸರಿ ಎಷ್ಟು ಪ್ರೋಟೀನ್ ಸೇವಿಸುತ್ತಿದ್ದಾರೆ ಎಂಬುದರ ಬಗ್ಗೆ ಆ ನಕ್ಷೆ ಇದ್ದು, ಇದರಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರೋಟೀನ್ ಸೇವನೆ ಪ್ರಮಾಣ ಕಡಿಮೆ ಇದೆ ಎಂದು ಸೂಚಿಸಿದೆ. ಈ ಫೋಟೋ ಹಂಚಿಕೊಂಡಿರುವ ಕೆಲ ಉತ್ತರ ಭಾರತೀಯರು, ಕನ್ನಡಿಗರನ್ನು ಇದೇ ವಿಚಾರವಾಗಿ ಕಾಮೆಂಟ್‌ಗಳಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ.
ಬೀದಿನಾಯಿಗಿಂತ ಕಡಿಮೆ ಪ್ರೋಟೀನ್ ತಿಂತಿದ್ದಾರೆ
ಅದರಲ್ಲೊಬ್ಬ “cobb” ಖಾತೆಯಲ್ಲಿ ‘ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ..’ ಎಂದು ಗೇಲಿ ಮಾಡಿದ್ದಾನೆ. ಉತ್ತರ ಭಾರತೀಯರೆಲ್ಲ ಈ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದು, ಕನ್ನಡಿಗರನ್ನು ಅಣಕಿಸುತ್ತಿದ್ದಾರೆ. ಆ ಪೋಸ್ಟ್‌ಗೆ ಹಲವು ಮಂದಿ ಕಾಮೆಂಟ್ ಮಾಡಿ, ಬೆಂಗಳೂರು, ಕರ್ನಾಟಕ ಹಾಗೂ ಕನ್ನಡಿಗರನ್ನು ಗೇಲಿ ಮಾಡಿದ್ದಾರೆ.
ಬೆಂಗಳೂರಿನ ಬೀದಿ ನಾಯಿಗಳು ಕನ್ನಡಿಗರಿಗಿಂತ ಹೆಚ್ಚು ಪ್ರೋಟೀನ್ ತಿನ್ನುತ್ತವೆ ಎಂದು ನನಗೆ ಖಚಿತವಾಗಿದೆʼ ಎಂದು ಒಬ್ಬ ಹೇಳಿದ್ದಾನೆ. ʼಅಂದರೆ ಸರಾಸರಿ ಕನ್ನಡಿಗರು ಬೀದಿ ನಾಯಿಗಳಿಗಿಂತ ಕಡಿಮೆ ಪ್ರೋಟೀನ್ ತಿನ್ನುತ್ತಿದ್ದಾರೆ. ಆದರೆ ಆ ನಾಯಿಗಳು ಕನ್ನಡದಲ್ಲಿ ಬೊಗಳುತ್ತವೆಯೇ?ʼ ಎಂದು ಕಾಮೆಂಟ್ ಮಾಡಿದ್ದಾರೆ. ʼಬೆಂಗಳೂರಿನ ಸ್ಥಳೀಯರನ್ನು ಬೀದಿ ನಾಯಿಗಳು ಎನ್ನುತ್ತಾರೆ ಎಂದು ತಿಳಿದಿರಲಿಲ್ಲ. ಒಬ್ಬ ಸರಾಸರಿ ಬಿಹಾರಿ ಕೂಡ ಇವುಗಳಿಗಿಂತ ಹೆಚ್ಚಿನ ಪ್ರೋಟೀನ್ ಪಡೆಯುತ್ತಾನೆ’ ಎಂದು ತೊಡೆತಟ್ಟಿದ್ದಾರೆ.
ದಕ್ಷಿಣದಲ್ಲಿ ಕ್ರೀಡಾಪಟುಗಳು ಕಡಿಮೆ
‘ದಕ್ಷಿಣ ಭಾರತದಲ್ಲಿ ಉತ್ತರ ಭಾರತಕ್ಕಿಂತ ಹೆಚ್ಚಿನ ಪ್ರೋಟೀನ್ ಕೊರತೆ ಇದೆ. ಏಕೆಂದರೆ ದಕ್ಷಿಣ ಭಾರತೀಯರು ಅನ್ನ ಮತ್ತು ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುತ್ತಾರೆ. ಹೆಚ್ಚಾಗಿ ಮಾಂಸವನ್ನು ತಿನ್ನುತ್ತಾರೆ, ನಂತರ ಸಾಕಷ್ಟು ಪ್ರೋಟೀನ್ ಪಡೆಯುತ್ತಾರೆ ಎಂದು ಭಾವಿಸುತ್ತಾರೆ. ದಕ್ಷಿಣದಲ್ಲಿ ಯಾವುದೇ ಗಂಭೀರ ಕ್ರೀಡಾಪಟುವನ್ನು ಕಂಡುಹಿಡಿಯುವುದು ಕಷ್ಟ ಎಂಬುದು ಆಶ್ಚರ್ಯವೇನಲ್ಲ’ ಎಂದೂ ಕೆಲವರು ಹೊಸ ಆಯಾಮಗಳನ್ನು ನೀಡುತ್ತಿದ್ದಾರೆ. ಈ ಪೋಸ್ಟ್ ಅನ್ನು ಹಲವರು ಹಂಚಿಕೊಂಡಿದ್ದು, ಬಹುತೇಕರು ಕರ್ನಾಟಕವನ್ನು ಗೇಲಿ ಮಾಡಿದ್ದಾರೆ. ಕೆಲವರು ಇಡೀ ದಕ್ಷಿಣ ಭಾರತವನ್ನು ನಿಂದಿಸಿದ್ದಾರೆ.
