ಪುತ್ತೂರಿನಲ್ಲಿ ಕಾರು ಖರೀದಿಯಲ್ಲೊಂದು ದೊಡ್ಡ ವಂಚನೆ: ನಕಲಿ ಸಹಿ ಮಾಡಿ ₹1.90 ಲಕ್ಷ ಕಬಳಿಕೆ!

ಪುತ್ತೂರು: ಕಾರು ಖರೀದಿಸಲು ಮುಂಗಡ ಹಣ ನೀಡಿದ ಮಹಿಳೆಯ ನಕಲಿ ಸಹಿಯಿಂದ ಒಪ್ಪಿಗೆ ಪತ್ರ ತಯಾರಿಸಿ, ಕಾರು ಮಾರಾಟ ಮಳಿಗೆಗೆ ನೀಡಿ ವಂಚನೆ ಮಾಡಿರುವ ಪ್ರಕರಣವೊಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಆರೋಪಿಗಳಾದ ಪರಿಚಯಸ್ಥ, ಪುತ್ತೂರಿನ ಮಳಿಗೆಯ ಮ್ಯಾನೇಜರ್, ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಕಾರು ಖರೀದಿಸಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರುದಾರ ಮಹಿಳೆಯು ತನ್ನ ದೂರಿನಲ್ಲಿ ತಿಳಿಸಿರುವಂತೆ… “ನಾನು, ನನ್ನ ಸಹೋದರ, ಸಹೋದರಿ ಮತ್ತು ಪರಿಚಯಸ್ಥರಾದ ಬೆಂಗಳೂರಿನ ಅನಿಲ್ ಕುಮಾರ್ ಅವರೊಂದಿಗೆ 2024ರ ಫೆ. 29ರಂದು ಪುತ್ತೂರಿನ ಮಳಿಗೆಗೆ ತೆರಳಿ ಕಾರನ್ನು ಬುಕ್ ಮಾಡಿದ್ದೆ. ಆಗ ಮುಂಗಡವಾಗಿ 1,50,000 ರೂ.ಗಳನ್ನು ಮಳಿಗೆಯ ಸೇಲ್ಸ್ ಎಕ್ಸಿಕ್ಯೂಟಿವ್ ಪೃಥ್ವಿ ಅವರಿಗೆ ನೀಡಿದ್ದೆ. ಮಾ. 5ರಂದು 40,000 ರೂ.ಗಳನ್ನು ಯುಪಿಐ ಮೂಲಕ ಪಾವತಿಸಿದ್ದೆ. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಾರು ಖರೀದಿಸಲು ಸಾಧ್ಯವಾಗದ ಕಾರಣ, ಸ್ವಲ್ಪ ಕಾಲಾವಕಾಶ ಬೇಕು ಮತ್ತು ಪಾವತಿಸಿದ ಮುಂಗಡ ಹಣವನ್ನು ಮಳಿಗೆಯಲ್ಲೇ ಇರಿಸಿಕೊಳ್ಳುವಂತೆ ಸೇಲ್ಸ್ ಎಕ್ಸಿಕ್ಯೂಟಿವ್‌ಗೆ ಸಂದೇಶ ಮತ್ತು ಫೋನ್ ಕರೆ ಮೂಲಕ ತಿಳಿಸಿದ್ದೆ’ ಎಂದು ಉಲ್ಲೇಖೀಸಿದ್ದಾರೆ.
ವಂಚಿಸಿದ ಬಗೆ …
– 1.90 ಲಕ್ಷ ರೂ. ಮುಂಗಡ ಪಾವತಿಸಿದ್ದ ಮಹಿಳೆ
– ಆದರೆ ಕಾರು ಖರೀದಿಸುವಲ್ಲಿ ವಿಳಂಬ
– ಈ ನಡುವೆ ಆಕೆಯ ಸಹಿ ನಕಲು ಮಾಡಿ ಕಾರನ್ನು ಪಡೆದುಕೊಂಡು ಮತ್ತೂಬ್ಬ ಮಹಿಳೆಗೆ ಮಾರಿದ ಪರಿಚಿತ ವ್ಯಕ್ತಿ!
– ಮುಂಗಡ ಪಾವತಿಸಿದ್ದ ಮಹಿಳೆ ಕಾರು ಖರೀದಿಗೆ ಮುಂದಾದಾಗ ವಂಚನೆ ಬಯಲಿಗೆ
ಏನಾಯಿತು?
ಕಾರು ಖರೀದಿಯ ಬಗ್ಗೆ ಮಾತನಾಡಲು ಮಹಿಳೆಯು ಸೇಲ್ಸ್ ಎಕ್ಸಿಕ್ಯೂಟಿವ್ ಅವರಿಗೆ ಕರೆ ಮಾಡಿದಾಗ “ನಿಮ್ಮ ಸಹಿ ಇರುವ ಒಪ್ಪಿಗೆ ಪತ್ರವನ್ನು ನೀಡಿ ಅನಿಲ್ ಕುಮಾರ್ ಅವರು ಈಗಾಗಲೇ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂಬ ಆಘಾತಕಾರಿ ಉತ್ತರ ಬಂದಿದೆ. ಈ ಬಗ್ಗೆ ಮಳಿಗೆಯಲ್ಲಿ ವಿಚಾರಿಸಿದಾಗ, ಅನಿಲ್ ಕುಮಾರ್ ಕಾರನ್ನು ಪಡೆದು ಹೇಮಾ ಎಂಬ ಮತ್ತೂಬ್ಬ ಮಹಿಳೆಗೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ತನಗೆ ಮೋಸ ಮಾಡುವ ಉದ್ದೇಶದಿಂದಲೇ ಅನಿಲ್ ಕುಮಾರ್ ತನ್ನ ಸಹಿಯನ್ನು ನಕಲು ಮಾಡಿ ಒಪ್ಪಿಗೆ ಪತ್ರ ಸೃಷ್ಟಿಸಿ ಮಳಿಗೆಗೆ ನೀಡಿ ಕಾರನ್ನು ಪಡೆದಿದ್ದಾರೆ. ಈ ವ್ಯವಹಾರದ ಬಗ್ಗೆ ಮಳಿಗೆಯ ಸಿಬಂದಿ ಕೂಡ ತನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ನಕಲಿ ಸಹಿ ಮಾಡಿ ವಂಚನೆಯ ಉದ್ದೇಶದಿಂದ ಕಾರು ಖರೀದಿಸಿದ ಅನಿಲ್ ಕುಮಾರ್, ಮಾಹಿತಿ ಮರೆಮಾಚಿ ಕಾರು ವಿತರಿಸಿದ ಮಳಿಗೆಯ ಮ್ಯಾನೇಜರ್, ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಕಾರು ಪಡೆದ ಹೇಮಾ ಎಂಬವರ ವಿರುದ್ಧ ಜು. 10ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
